ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ನಾಡಿನ ಕೋಟ್ಯಂತರ ತಾಯಂದಿರ ಬದುಕಿನಲ್ಲಿ ಸ್ವಾಭಿಮಾನ ಹಾಗೂ ಆರ್ಥಿಕ ಭರವಸೆಯ ಬೆಳಕು ಚೆಲ್ಲಿರುವ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ‘ಗೃಹಲಕ್ಷ್ಮಿ’ ಯೋಜನೆಯು ಯಶಸ್ವಿಯಾಗಿ 3 ವರ್ಷಗಳನ್ನು ಪೂರೈಸಿದೆ. ಈ ಸಂಭ್ರಮದ ಹಿನ್ನೆಲೆಯಲ್ಲಿ ಯೋಜನೆಯ ಫಲಾನುಭವಿಗಳಿಗೆ ವಿಶೇಷ ಅವಕಾಶವೊಂದನ್ನು ಕಲ್ಪಿಸಲಾಗಿದೆ.
ಗೃಹಲಕ್ಷ್ಮಿ ಯೋಜನೆಯು ತಮ್ಮ ಹಾಗೂ ಕುಟುಂಬದ ಜೀವನದಲ್ಲಿ ತಂದಿರುವ ಸಕಾರಾತ್ಮಕ ಬದಲಾವಣೆಗಳು ಮತ್ತು ಆರ್ಥಿಕ ಸ್ವಾವಲಂಬನೆಯ ಯಶೋಗಾಥೆಗಳನ್ನು ವಿಡಿಯೋ ರೂಪದಲ್ಲಿ ಹಂಚಿಕೊಳ್ಳಲು ರಾಜ್ಯ ಸರ್ಕಾರ ಸಾರ್ವಜನಿಕರಿಗೆ ಕರೆ ನೀಡಿದೆ.
ಫಲಾನುಭವಿಗಳು ತಮ್ಮ ಯಶೋಗಾಥೆಯ ವಿಡಿಯೋಗಳನ್ನು ಚಿತ್ರೀಕರಿಸಿ, ಸರ್ಕಾರದ ಅಧಿಕೃತ ಸಾಮಾಜಿಕ ಜಾಲತಾಣಗಳ ಖಾತೆಗಳಿಗೆ ಟ್ಯಾಗ್ ಮಾಡುವ ಮೂಲಕ ಹಂಚಿಕೊಳ್ಳಬಹುದಾಗಿದೆ. ಹೀಗೆ ಹಂಚಿಕೊಳ್ಳಲಾದ ವಿಡಿಯೋಗಳಲ್ಲಿ ಅತ್ಯುತ್ತಮ ಹಾಗೂ ಪ್ರೇರಣಾದಾಯಿ ಯಶೋಗಾಥೆಗಳನ್ನು ಹೊಂದಿರುವ ಆಯ್ದ ಫಲಾನುಭವಿಗಳನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಖುದ್ದಾಗಿ ಭೇಟಿಯಾಗಿ ಸಂವಾದ ನಡೆಸಲಿದ್ದಾರೆ.
ರಾಜ್ಯದ ಯಜಮಾನಿಯರ ಖಾತೆಗೆ ಮಾಸಿಕ ಧನಸಹಾಯ ತಲುಪಿಸುವ ಈ ಯೋಜನೆ ಲಕ್ಷಾಂತರ ಕುಟುಂಬಗಳ ದಿನನಿತ್ಯದ ನಿರ್ವಹಣೆಗೆ ಆಸರೆಯಾಗಿದ್ದು, ಈಗ ಅದರ 3 ವರ್ಷಗಳ ಯಶಸ್ಸನ್ನು ಜನಸಾಮಾನ್ಯರ ಅನುಭವಗಳ ಮೂಲಕವೇ ಸಂಭ್ರಮಿಸಲು ಸರ್ಕಾರ ಮುಂದಾಗಿದೆ.




