ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಶಾಲೆಯೊಂದರ ಪಕ್ಕದಲ್ಲೇ ಬೆಟ್ಟದಂತೆ ಕೂಡಿಬೀಳುತ್ತಿದ್ದ ಕಸದ ರಾಶಿ, ನಿತ್ಯವೂ ಮೂಗು ಮುಚ್ಚಿಕೊಂಡು ಓಡಾಡುತ್ತಿದ್ದ ಹಾದಿ, ಕೊನೆಗೂ ನರಕಯಾತನೆಯಿಂದ ಮುಕ್ತಿ ಪಡೆದಿದೆ. ಬಾಬುಸಾಹೇಬ್‌ಪಾಳ್ಯದ ಈ ಸಣ್ಣ ಸುಧಾರಣೆ ಇದೀಗ ಸ್ಥಳೀಯರಿಗೆ ದೊಡ್ಡ ನೆಮ್ಮದಿ ನೀಡಿದೆ.
ಕೆಲವು ದಿನಗಳ ಹಿಂದಷ್ಟೇ ಬೃಹತ್ ತ್ಯಾಜ್ಯ ಡಂಪಿಂಗ್ ಯಾರ್ಡ್‌ನಂತಿದ್ದ ಈ ಜಾಗ ಸಂಪೂರ್ಣ ಸ್ವಚ್ಛಗೊಂಡಿದ್ದು, ಈ ಸಣ್ಣ ಆದರೆ ಮಹತ್ವದ ಬದಲಾವಣೆಯ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿವೆ. ಸಚಿವ ಕೃಷ್ಣ ಭೈರೇಗೌಡ ಅವರು ಈ ಕುರಿತು ಸಂತಸ ಹಂಚಿಕೊಂಡಿದ್ದಾರೆ.
ಸ್ವಚ್ಛಗೊಂಡ ಜಾಗದ ಚಿತ್ರಗಳನ್ನು ಹಂಚಿಕೊಂಡು ಮಾತನಾಡಿರುವ ಅವರು, "ಸಣ್ಣ ಸಣ್ಣ ಸುಧಾರಣೆಗಳೇ ಪ್ರಗತಿಯ ದಾರಿ. ಶಾಲೆಯ ಪಕ್ಕದಲ್ಲಿದ್ದ ಬೃಹತ್ ತ್ಯಾಜ್ಯದ ಜಾಗ ಇಂದು ಸ್ವಚ್ಛವಾಗಿರುವುದನ್ನು ಕಂಡು ಸ್ನೇಹಿತರೊಬ್ಬರು ಹರ್ಷ ವ್ಯಕ್ತಪಡಿಸಿದ್ದಾರೆ. ಈ ಬದಲಾವಣೆ ಸಣ್ಣದೆನಿಸಿದರೂ, ಸುತ್ತಮುತ್ತಲಿನ ಜನರ ದಿನನಿತ್ಯದ ಜೀವನದ ಮೇಲೆ ದೊಡ್ಡ ಧನಾತ್ಮಕ ಪರಿಣಾಮ ಬೀರುತ್ತದೆ" ಎಂದಿದ್ದಾರೆ.
"ಬದಲಾವಣೆ ಅಥವಾ ಪ್ರಗತಿ ಯಾವಾಗಲೂ ದೊಡ್ಡ ಮಟ್ಟದಲ್ಲೇ ಇರಬೇಕೆಂದೇನೂ ಇಲ್ಲ. ಸಮಸ್ಯೆಗಳು ಸವಾಲಾಗಿ ನಿಂತಾಗ, ಇಂತಹ ಸಣ್ಣ ಸಣ್ಣ ಗೆಲುವುಗಳೇ ನಮಗೆ ಧೈರ್ಯ ತುಂಬುತ್ತವೆ. ಸಣ್ಣ ಬದಲಾವಣೆಗಳು ಸದಾ ಮೌಲ್ಯಯುತವಾಗಿದ್ದು, ಕಾಲಕ್ರಮೇಣ ಅವು ದೊಡ್ಡ ಯಶಸ್ಸಿಗೆ ನಾಂದಿಯಾಗುತ್ತವೆ" ಎಂದು ಸಚಿವರು ಅಭಿಪ್ರಾಯಪಟ್ಟಿದ್ದಾರೆ.
ಸಾರ್ವಜನಿಕರ ಹಿತದೃಷ್ಟಿಯಿಂದ ಕೈಗೊಂಡ ಈ ಕಾರ್ಯಕ್ಕೆ ಸ್ಥಳೀಯ ನಿವಾಸಿಗಳು ಹಾಗೂ ಶಾಲಾ ವಿದ್ಯಾರ್ಥಿಗಳ ಪೋಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.




