ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ದೇಶವನ್ನು 60 ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ಪಕ್ಷವು ಕೇವಲ ಅಭಿವೃದ್ಧಿ ಮತ್ತು ಬಡತನ ನಿರ್ಮೂಲನೆಯ ಭಾಷಣಗಳಿಗೆ ಸೀಮಿತವಾಗಿತ್ತು. ಆದರೆ, 2014ರ ನಂತರ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಭಾರತದಲ್ಲಿ ನೈಜ ಪ್ರಗತಿಯ ನಾಗಾಲೋಟ ತಲುಪಿದೆ ಎಂದು ಬಿಜೆಪಿ ಮುಖಂಡ ಸಿ.ಟಿ. ರವಿ ಪ್ರತಿಪಾದಿಸಿದ್ದಾರೆ.
ಕಾಂಗ್ರೆಸ್ ಸರ್ಕಾರದ ವೈಫಲ್ಯ ಹಾಗೂ ಮೋದಿ ಸರ್ಕಾರದ ಸಾಧನೆಗಳನ್ನು ಹೋಲಿಸಿರುವ ಅವರು, ಮೂಲಸೌಕರ್ಯ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಆಗಿರುವ ಅಭಿವೃದ್ಧಿಯ ಅಂಕಿ-ಅಂಶಗಳನ್ನು ಹಂಚಿಕೊಂಡಿದ್ದಾರೆ:
ಕುಡಿಯುವ ನೀರು: ದೇಶದಲ್ಲಿ ಮೊದಲು ಶೇಕಡಾ 17ರಷ್ಟು ಮನೆಗಳಿಗೆ ಮಾತ್ರ ಲಭ್ಯವಿದ್ದ ಟ್ಯಾಪ್ ನೀರು (ನಳ ಸಂಪರ್ಕ), ಇಂದು ಶೇಕಡಾ 82ರಷ್ಟು ಮನೆಗಳಿಗೆ ತಲುಪಿದೆ.
ಸರಕು ಸಾಗಾಣಿಕಾ ಕಾರಿಡಾರ್: ಹಿಂದೆ ಯಾವುದೇ ಸರಕು ಸಾಗಾಣಿಕಾ (ಫ್ರೈಟ್) ಕಾರಿಡಾರ್ ಇಲ್ಲದ ಭಾರತದಲ್ಲಿ, ಪ್ರಸ್ತುತ 2,843 ಕಿಲೋಮೀಟರ್ ಉದ್ದದ ಕಾರಿಡಾರ್ ನಿರ್ಮಿಸಲಾಗಿದೆ.
ಎಕ್ಸ್‌ಪ್ರೆಸ್‌ವೇಗಳು: ಕೇವಲ 1,000 ಕಿಲೋಮೀಟರ್‌ನಷ್ಟಿದ್ದ ಎಕ್ಸ್‌ಪ್ರೆಸ್‌ರಸ್ತೆಗಳ ಜಾಲವು ಈಗ 6,700 ಕಿಲೋಮೀಟರ್‌ಗೆ ವಿಸ್ತರಿಸಿದೆ.
ಸೌರಶಕ್ತಿ ಕ್ಷೇತ್ರ: 2.6 ಗಿಗಾವ್ಯಾಟ್‌ನಷ್ಟಿದ್ದ ಸೌರಶಕ್ತಿ ಉತ್ಪಾದನೆ ಬೃಹತ್ ಪ್ರಮಾಣದಲ್ಲಿ ಬೆಳೆದು 162 ಗಿಗಾವ್ಯಾಟ್‌ಗೆ ಏರಿಕೆಯಾಗಿದೆ.
ಆರೋಗ್ಯ ರಂಗದ ಪ್ರಗತಿ: ದೇಶದಲ್ಲಿ ವೈದ್ಯಕೀಯ ಸೀಟುಗಳು ದುಪ್ಪಟ್ಟಾಗಿದ್ದು, ಏಮ್ಸ್ ಆಸ್ಪತ್ರೆಗಳ ಸಂಖ್ಯೆ 8 ರಿಂದ 23ಕ್ಕೆ ಏರಿಕೆಯಾಗಿದೆ.
ಕಾಂಗ್ರೆಸ್ ನಾಯಕರಿಗೆ ನಿಜಕ್ಕೂ ಅರ್ಹತೆ ಇದ್ದರೆ ಸುಳ್ಳು ಆರೋಪಗಳ ರಾಜಕಾರಣ ಬಿಟ್ಟು, ಅಭಿವೃದ್ಧಿಯ ವಿಷಯದ ಕುರಿತು ಮುಕ್ತ ಚರ್ಚೆಗೆ ಬರಲಿ ಎಂದು ಸಿ.ಟಿ. ರವಿ ನೇರ ಸವಾಲು ಎಸೆದಿದ್ದಾರೆ.




