ಚಂದ್ರವಳ್ಳಿ ನ್ಯೂಸ್, ತುಮಕೂರು:
ಸಮೃದ್ಧ, ಸುಸ್ಥಿರ ಹಾಗೂ ಸಮತೋಲಿತ ಕರ್ನಾಟಕ ನಿರ್ಮಾಣದ ನಿಟ್ಟಿನಲ್ಲಿ ತುಮಕೂರಿನ ಎಸ್.ಐ.ಟಿ ಬಿರ್ಲಾ ಆಡಿಟೋರಿಯಂನಲ್ಲಿ ಆಯೋಜಿಸಲಾಗಿದ್ದ 'ಕರ್ನಾಟಕ ಸಮಗ್ರ ಅಭಿವೃದ್ಧಿ ವೇದಿಕೆ'ಯ ಚಿಂತನ ಸಮಾವೇಶದಲ್ಲಿ ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಭಾಗವಹಿಸಿ, ರಾಜ್ಯದ ಅಭಿವೃದ್ಧಿ ಕುರಿತು ವಿಷಯ ತಜ್ಞರು ಹಾಗೂ ಗಣ್ಯರೊಂದಿಗೆ ಸಂವಾದ ನಡೆಸಿದರು.
ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ವಿಕಸಿತ ಭಾರತ ನಿರ್ಮಾಣದ ಕನಸು ನನಸಾಗಲು ದೇಶದ ಜನಸಂಖ್ಯೆಯಲ್ಲಿ ಶೇ 60ಕ್ಕೂ ಹೆಚ್ಚಿರುವ ಯುವಶಕ್ತಿಯ ಸದ್ಬಳಕೆ ಅತ್ಯಗತ್ಯ. ಯುವಜನರ ಪ್ರತಿಭೆಯನ್ನು ಪೋಷಿಸಿ, ಅವರನ್ನು ರಾಜ್ಯದ ಪ್ರಗತಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವುದು ನಮ್ಮ ಆದ್ಯತೆಯಾಗಬೇಕು ಎಂದರು.
ಇದೇ ವೇಳೆ ರಾಜ್ಯದಲ್ಲಿ ಉದ್ಯೋಗ ಸೃಷ್ಟಿಯ ಕುರಿತು ಮಾತನಾಡಿದ ವಿಜಯೇಂದ್ರ, ಕರ್ನಾಟಕದಲ್ಲಿರುವ ಪ್ರವಾಸೋದ್ಯಮದ ಅಗಾಧ ಅವಕಾಶಗಳನ್ನು ಸಂಪೂರ್ಣವಾಗಿ ಬಳಸಿಕೊಂಡಲ್ಲಿ ಬೃಹತ್ ಪ್ರಮಾಣದಲ್ಲಿ ಹೊಸ ಉದ್ಯೋಗಗಳನ್ನು ಸೃಷ್ಟಿಸಲು ಸಾಧ್ಯವಿದೆ ಎಂದು ಅಭಿಪ್ರಾಯಪಟ್ಟರು.
ಸಮಾವೇಶದಲ್ಲಿ ನಾಡಿನ ಶ್ರೇಷ್ಠ ಸಾಧಕರು, ಹಿರಿಯರಾದ ಡಾ. ವೇಣುಗೋಪಾಲ್ ಆರ್., ಚಿಂತಕರು, ಉದ್ಯಮಿಗಳು, ವೃತ್ತಿಪರರು, ಮಾಜಿ ಹಿರಿಯ ಅಧಿಕಾರಿಗಳು ಹಾಗೂ ನಗರಾಭಿವೃದ್ಧಿ ತಜ್ಞರು ಭಾಗವಹಿಸಿ ತಮ್ಮ ವಿಚಾರಗಳನ್ನು ಹಂಚಿಕೊಂಡರು. ಈ ಚಿಂತನ ಮಂಥನದಲ್ಲಿ ಮೂಡಿಬಂದ ಸಲಹೆಗಳು ಹಾಗೂ ಅಭಿವೃದ್ಧಿಯ ದೂರದೃಷ್ಟಿ ವಾಸ್ತವ ನೆಲೆಗಟ್ಟಿನಲ್ಲಿ ಅತ್ಯಂತ ಪ್ರಾಯೋಗಿಕವಾಗಿದ್ದು, ರಾಜ್ಯದ ಎಲ್ಲ ಜಿಲ್ಲೆಗಳ ಸರ್ವಾಂಗೀಣ ಪ್ರಗತಿಗೆ ಹೊಸ ದಿಕ್ಸೂಚಿ ನೀಡಿದೆ ಎಂದು ಅವರು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ತುಮಕೂರು ಶಾಸಕರಾದ ಜ್ಯೋತಿ ಗಣೇಶ್, ಪ್ರಮುಖರಾದ ಜಿ. ಸುರೇಶ್, ಡಾ. ಶ್ರೀನಿವಾಸ ಬಳ್ಳಿ, ಎಸ್.ವಿ.ಎಸ್. ಪ್ರಸಾದ್, ಮದನ್ ಪದಕಿ ಸೇರಿದಂತೆ ಹಲವಾರು ಗಣ್ಯರು ಹಾಗೂ ವಿಷಯ ತಜ್ಞರು ಉಪಸ್ಥಿತರಿದ್ದರು.




