ಚಂದ್ರವಳ್ಳಿ ನ್ಯೂಸ್ ಬೆಂಗಳೂರು: "ಬಿಜೆಪಿಯವರ ಎದೆ ಸೀಳಿದರೆ ಭ್ರಷ್ಟಾಚಾರ ಮಾತ್ರ ಕಾಣುತ್ತದೆ. ರಾಜ್ಯದ ಎಲ್ಲಾ ಹಗರಣಗಳ ಮೂಲವನ್ನು ಕೆದಕಿದರೆ ಅದು ಅಂತಿಮವಾಗಿ ಬಿಜೆಪಿಯ ಬಾಗಿಲಿಗೇ ಬಂದು ನಿಲ್ಲುತ್ತದೆ" ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.
ಸಾಲು ಸಾಲು ನೇಮಕಾತಿ ಹಗರಣಗಳಲ್ಲಿ ಭಾಗಿಯಾಗಿರುವ ಕೆಪಿಎಸ್‌ಸಿ (KPSC) ಮಾಜಿ ಅಧ್ಯಕ್ಷ ಶಿವಶಂಕರಪ್ಪ, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ಕುಟುಂಬದ ಹತ್ತಿರದ ಸಂಬಂಧಿ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರೇ ನೀಡಿರುವ ಹೇಳಿಕೆಯನ್ನು ಪ್ರಸ್ತಾಪಿಸಿರುವ ಖರ್ಗೆ,
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವಿರುದ್ಧ ಸಾಲು ಸಾಲು ಪ್ರಶ್ನೆಗಳನ್ನು ತೂರಿದ್ದಾರೆ.
ಪ್ರಿಯಾಂಕ್ ಖರ್ಗೆ ಅವರ ನೇರ ಪ್ರಶ್ನೆಗಳು:
ಪಾಲುದಾರರೇ?: ಬಿಜೆಪಿ ಸರ್ಕಾರವೇ ನೇಮಿಸಿದ್ದ ಕೆಪಿಎಸ್‌ಸಿ ಅಧ್ಯಕ್ಷನ ಸಾಲು ಸಾಲು ಅಕ್ರಮಗಳಲ್ಲಿ ಬಿ.ವೈ. ವಿಜಯೇಂದ್ರ ಅವರೂ ಪಾಲುದಾರರೇ?
ಪ್ರತಿಭಟನೆ ನಾಟಕವೇ?: ಕೆಪಿಎಸ್‌ಸಿ ವಿಚಾರದಲ್ಲಿ ನಿಮ್ಮ ಒಳಮರ್ಮಗಳು ಎಲ್ಲಿ ಬಯಲಾಗುತ್ತವೆಯೋ ಎಂಬ ಭಯದಿಂದಲೇ ವಿಜಯೇಂದ್ರ ಅವರು ಪ್ರತಿಭಟನೆಯ ನಾಟಕ ಶುರು ಮಾಡಿದ್ದಾರೆಯೇ?
ಶಿವಶಂಕರಪ್ಪ ಯಾರು?: ವಿಜಯೇಂದ್ರ ಹಾಗೂ ಶಿವಶಂಕರಪ್ಪ ನಡುವಿನ ನಿಜವಾದ ಸಂಬಂಧವೇನು? ಅಷ್ಟೊಂದು ಭ್ರಷ್ಟ ವ್ಯಕ್ತಿಯನ್ನು ನಿಮ್ಮ ಸರ್ಕಾರ ಕೆಪಿಎಸ್‌ಸಿ ಅಧ್ಯಕ್ಷ ಸ್ಥಾನಕ್ಕೆ ನೇಮಿಸಿದ್ದೇಕೆ? ಆತ ನಿಮ್ಮ ವ್ಯವಹಾರಗಳಿಗೆ ಬೇನಾಮಿಯೇ?
ಫೋಟೋ ಭಕ್ತಿ ಏಕೆ?: ಯಡಿಯೂರಪ್ಪ ಮತ್ತು ವಿಜಯೇಂದ್ರ ಅವರ ಫೋಟೋಗಳನ್ನು ಮನೆಯಲ್ಲಿ ಇಟ್ಟುಕೊಂಡು ಪೂಜಿಸುವಷ್ಟು ಕೃತಜ್ಞತೆ ಆತನಿಗೆ ನಿಮ್ಮ ಮೇಲೇಕೆ?
ಮೌನವೇಕೆ?: ಇದುವರೆಗೆ ಆ ಭ್ರಷ್ಟ ಕೆಪಿಎಸ್‌ಸಿ ಮಾಜಿ ಅಧ್ಯಕ್ಷನ ವಿರುದ್ಧ ವಿಜಯೇಂದ್ರ ಅವರು ಒಂದೇ ಒಂದು ಮಾತು ಆಡದಿರಲು ಕಾರಣವೇನು?
"ವಿಜಯೇಂದ್ರ ಅವರಲ್ಲಿ ಎಳ್ಳಷ್ಟು ನೈತಿಕತೆ ಇದ್ದರೆ, ಯಡಿಯೂರಪ್ಪ ಕುಟುಂಬದ ಆಳ-ಅಗಲ ಬಲ್ಲ ಅವರದ್ದೇ ಪಕ್ಷದ ನಾಯಕ ಯತ್ನಾಳ್ ಎತ್ತಿರುವ ಈ ಗಂಭೀರ ಆರೋಪಗಳಿಗೆ ಮತ್ತು ನನ್ನ ಈ ನೇರ ಪ್ರಶ್ನೆಗಳಿಗೆ ಉತ್ತರ ನೀಡುವ ನೈತಿಕ ಧೈರ್ಯ ತೋರಿಸಲಿ" ಎಂದು ಸಚಿವ ಪ್ರಿಯಾಂಕ್ ಖರ್ಗೆ ಸವಾಲು ಹಾಕಿದ್ದಾರೆ.



