ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯದಲ್ಲಿ ಹಾಲಿನ ದರ ಹಾಗೂ ಬಸ್‌ಟಿಕೆಟ್‌ದರ ಏರಿಕೆಗೆ ಸಚಿವ ಸಂಪುಟ ಅನುಮೋದನೆ ನೀಡಿರುವುದನ್ನು ಖಂಡಿಸಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಕಾಂಗ್ರೆಸ್‌ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಸರ್ಕಾರದ ಈ ನಿರ್ಧಾರವು ‘ಬಡವರ ಸುಲಿಗೆ ಮತ್ತು ಆಡಳಿತಾತ್ಮಕ ದಿವಾಳಿತನಕ್ಕೆ ಸಾಕ್ಷಿ’ ಎಂದು ಅವರು ಆರೋಪಿಸಿದ್ದಾರೆ.
ಈ ಕುರಿತು ಸರಣಿ ವಾಗ್ದಾಳಿ ನಡೆಸಿರುವ ಅವರು, "ಒಬ್ಬರಿಂದ ಕಿತ್ತುಕೊಂಡು ಇನ್ನೊಬ್ಬರಿಗೆ ಕೊಡುವ ತುಘಲಕ್ ತೀರ್ಮಾನದ ಮೂಲಕ ಈ ಭ್ರಷ್ಟ, ಜನವಿರೋಧಿ ಸರ್ಕಾರ ತನ್ನ ವೈಫಲ್ಯವನ್ನು ಮುಚ್ಚಿಕೊಳ್ಳಲು ಹೊರಟಿದೆ. ರೈತರಿಗೆ ನೀಡಬೇಕಾದ ಪ್ರೋತ್ಸಾಹ ಧನವನ್ನು ಬಾಕಿ ಉಳಿಸಿಕೊಂಡು ಸಂಕಷ್ಟಕ್ಕೆ ತಳ್ಳಲಾಗುತ್ತಿದೆ, ಇನ್ನೊಂದೆಡೆ ಹಾಲಿನ ದರವನ್ನು ಲೀಟರ್‌ಗೆ 8 ರೂಪಾಯಿ ಏರಿಸಿ ಜನಸಾಮಾನ್ಯರ ಜೇಬಿಗೆ ಕನ್ನ ಹಾಕಲಾಗುತ್ತಿದೆ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಹಾಲಿನ ದರವನ್ನು ಐದನೇ ಬಾರಿ ಹೆಚ್ಚಿಸಲಾಗಿದೆ ಹಾಗೂ 'ಹಾಲು ಒಕ್ಕೂಟಗಳ ನಿರ್ವಹಣೆ' ನೆಪದಲ್ಲಿ ಈ ಬೆಲೆ ಏರಿಕೆ ಮಾಡಿ ಜನರಿಗೆ ದ್ರೋಹ ಎಸಗಲಾಗಿದೆ ಎಂದು ವಿಜಯೇಂದ್ರ ಕಿಡಿಕಾರಿದ್ದಾರೆ.
ಅಲ್ಲದೆ, ಅವೈಜ್ಞಾನಿಕ ಗ್ಯಾರಂಟಿ ಯೋಜನೆಗಳಿಂದ ಸಾರಿಗೆ ಸಂಸ್ಥೆಗಳು ದಿವಾಳಿ ಅಂಚಿಗೆ ತಲುಪಿದ್ದು, ನಿರ್ವಹಣೆಯ ಹೊರೆಯನ್ನು ಬಸ್ ದರ ಏರಿಕೆಯ ಮೂಲಕ ಜನರ ಮೇಲೆಯೇ ಹೊರಿಸಲಾಗುತ್ತಿದೆ ಎಂದು ಅವರು ಹರಿದಾಯ್ದಿದ್ದಾರೆ. ವಿದ್ಯುತ್, ಆಸ್ತಿ ನೋಂದಣಿ ಶುಲ್ಕ, ಬಸ್ ದರ ಹಾಗೂ ಹಾಲಿನ ದರಗಳನ್ನು ಸಾಲು ಸಾಲಾಗಿ ಏರಿಕೆ ಮಾಡುತ್ತಾ ಬಡ ಮತ್ತು ಮಧ್ಯಮ ವರ್ಗದವರ ಮೇಲೆ ಸಂಕಷ್ಟ ಹೊರಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಸಾರ್ವಜನಿಕರ ಹಿತದೃಷ್ಟಿಯಿಂದ ಈ ಜನವಿರೋಧಿ ದರ ಏರಿಕೆ ಪ್ರಸ್ತಾವನೆಯನ್ನು ಸರ್ಕಾರ ತಕ್ಷಣವೇ ಕೈಬಿಡಬೇಕು ಮತ್ತು ರೈತರಿಗೆ ನೀಡಬೇಕಾದ ಬಾಕಿ ಪ್ರೋತ್ಸಾಹ ಧನವನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿರುವ ಅವರು, ಇಲ್ಲವಾದಲ್ಲಿ ಬಿಜೆಪಿ ರಾಜ್ಯಾದ್ಯಂತ ಬೀದಿಗಿಳಿದು ಬೃಹತ್ ಹೋರಾಟ ನಡೆಸಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.




