ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಪರಿಶಿಷ್ಟ ಸಮುದಾಯಗಳ ಅಭಿವೃದ್ಧಿಗೆ ಮೀಸಲಿಟ್ಟಿದ್ದ 187 ಕೋಟಿ ರೂಪಾಯಿ ಹಣವನ್ನು ಲೂಟಿ ಹೊಡೆದ ಕಳಂಕಿತನಿಗೆ ಕಾಂಗ್ರೆಸ್ ಸರ್ಕಾರ ಮತ್ತೆ ಮಂತ್ರಿಗಿರಿ ನೀಡಿದೆ ಎಂದು ಬಿಜೆಪಿ ನಾಯಕ ಸಿ.ಟಿ. ರವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಪರಿಶಿಷ್ಟ ಸಮುದಾಯಗಳಿಗೆ ಅನ್ಯಾಯ ಎಸಗಿ, ನಿಗಮದ ಹಣವನ್ನು ಹೈಕಮಾಂಡ್‌ಗೆ ಕಪ್ಪ ನೀಡಿದ ಆರೋಪ ಎದುರಿಸುತ್ತಿರುವ ಬಿ. ನಾಗೇಂದ್ರ ಅವರಿಗೆ ಮತ್ತೆ ಸಚಿವ ಸಂಪುಟದಲ್ಲಿ ಮಣೆ ಹಾಕಲಾಗಿದೆ. ಸ್ವತಃ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರೇ ವಾಲ್ಮೀಕಿ ನಿಗಮದಲ್ಲಿ ಭಾರೀ ಅವ್ಯವಹಾರ ನಡೆದಿದೆ ಎಂದು ವಿಧಾನಸಭೆಯಲ್ಲೇ ಒಪ್ಪಿಕೊಂಡಿದ್ದರು. ಆದರೆ, ಈಗ ಅದೇ ಅವ್ಯವಹಾರಕ್ಕೆ ಶಿಕ್ಷೆ ನೀಡುವ ಬದಲು ಸಚಿವ ಸ್ಥಾನದ ಬಹುಮಾನ ನೀಡಲಾಗುತ್ತಿದೆಯೇ ಎಂದು ಪ್ರಶ್ನಿಸಿದರು.
ರಾಜ್ಯದಲ್ಲಿ ಈಗಾಗಲೇ 60% ಕಮಿಷನ್ ಮೂಲಕ ಭ್ರಷ್ಟಾಚಾರದ ತಳಹದಿಯ ಮೇಲೆಯೇ ಸರ್ಕಾರ ನಡೆಯುತ್ತಿದೆ. ಇನ್ನು ನಿಗಮ-ಮಂಡಳಿಗಳ ಹಣ ನುಂಗಿದವರನ್ನೂ ಸಚಿವರನ್ನಾಗಿ ಮಾಡುವ ಮೂಲಕ ಕಾಂಗ್ರೆಸ್ ಕರ್ನಾಟಕಕ್ಕೆ ಹೊಸ ಭ್ರಷ್ಟ ಪರಂಪರೆಯನ್ನು ಪರಿಚಯಿಸುತ್ತಿದೆ. ಒಂದಿಷ್ಟೂ ನಾಚಿಕೆ ಇಲ್ಲದೆ ಸರ್ಕಾರ ನಡೆಸಲಾಗುತ್ತಿದ್ದು, ರಾಜ್ಯದ ಜನತೆ ಈ ಲಂಚಾವತಾರ ಹಾಗೂ ಭ್ರಷ್ಟಾಚಾರವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಮತ್ತು ಮುಂಬರುವ ದಿನಗಳಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.



