ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಹೊರ ರಾಜ್ಯಗಳಲ್ಲಿ ನಡೆಯುತ್ತಿರುವ ದೇವಸ್ಥಾನಗಳ ಹುಂಡಿ ಕಳ್ಳತನ ಹಾಗೂ ಕಾಣಿಕೆ ಹಣ ದುರ್ಬಳಕೆ ಪ್ರಕರಣಗಳಿಂದ ಎಚ್ಚೆತ್ತಿರುವ ಕರ್ನಾಟಕ ಸರ್ಕಾರ, ರಾಜ್ಯದ ಮುಜರಾಯಿ ದೇವಾಲಯಗಳಲ್ಲಿ ಭದ್ರತೆ ಮತ್ತು ಪಾರದರ್ಶಕತೆ ಹೆಚ್ಚಿಸಲು ಕಠಿಣ ಕ್ರಮಕ್ಕೆ ಮುಂದಾಗಿದೆ. ದೇವಾಲಯಗಳ ಹುಂಡಿ, ನಗದು ಹಾಗೂ ಚಿನ್ನ-ಬೆಳ್ಳಿ ವಸ್ತುಗಳ ರಕ್ಷಣೆಗಾಗಿ ಕಂದಾಯ ಇಲಾಖೆಯು (ಮುಜರಾಯಿ) ವಿಸ್ತೃತ ಮಾರ್ಗಸೂಚಿಯನ್ನು ಪ್ರಕಟಿಸಿದೆ.
ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ (ಕಂದಾಯ ಇಲಾಖೆ) ರಾಜೇಂದರ್ ಕುಮಾರ್ ಕಟಾರಿಯಾ ಅವರು ಈ ಕುರಿತು ಕಟ್ಟುನಿಟ್ಟಿನ ಸುತ್ತೋಲೆ ಹೊರಡಿಸಿದ್ದು, ಜಿಲ್ಲಾಧಿಕಾರಿಗಳು, ತಹಶೀಲ್ದಾರ್ ಹಾಗೂ ಪೊಲೀಸ್ ಇಲಾಖೆಗೆ ಸ್ಪಷ್ಟ ನಿರ್ದೇಶನ ನೀಡಿದ್ದಾರೆ.
ಮುಜರಾಯಿ ಇಲಾಖೆ ಜಾರಿಗೆ ತಂದಿರುವ 19 ಪ್ರಮುಖ ನಿಯಮಗಳ ವಿವರ ಇಲ್ಲಿದೆ:
1. ಸಿಸಿಟಿವಿ ಹದ್ದಿನ ಕಣ್ಣು ಮತ್ತು ಪೊಲೀಸ್ ಕಂಟ್ರೋಲ್ ರೂಂಗೆ ಲೈವ್:
ನಾಲ್ಕು ದಿಕ್ಕಿನಿಂದ ನಿಗಾ: ಹುಂಡಿಯ ಸುತ್ತಲೂ 4 ದಿಕ್ಕಿನಿಂದ ಕಾಣುವಂತೆ ವೆಬ್ ಕ್ಯಾಮೆರಾಗಳನ್ನು ಅಳವಡಿಸಬೇಕು. ಇದನ್ನು ತಹಶೀಲ್ದಾರ್ ಕಚೇರಿಯಿಂದಲೇ ನೇರ ವೀಕ್ಷಣೆ ಮಾಡಲು ವ್ಯವಸ್ಥೆ ಇರಬೇಕು.
ಸುಧಾರಿತ ಕ್ಯಾಮೆರಾ: ಕ್ಯಾಮೆರಾಗಳಿಗೆ ಬಣ್ಣ ಅಥವಾ ಸ್ಪ್ರೇ ಹೊಡೆದು ಕಳ್ಳತನ ಮಾಡುವುದನ್ನು ತಡೆಯಲು ಅತ್ಯಾಧುನಿಕ ಸುಧಾರಿತ ಸಿಸಿಟಿವಿಗಳನ್ನೇ ಬಳಸಬೇಕು.
ಕೇಂದ್ರ ಸರ್ವರ್ ಮತ್ತು ಪೊಲೀಸ್ ಕನೆಕ್ಷನ್: ಧಾರ್ಮಿಕ ದತ್ತಿ ಇಲಾಖೆಯ ಕೇಂದ್ರ ಕಚೇರಿಯಲ್ಲಿ ಸರ್ವರ್ ಅಳವಡಿಸಿ ಮೇಲ್ವಿಚಾರಣೆ ನಡೆಸುವುದರ ಜೊತೆಗೆ, ದೇವಸ್ಥಾನದ ಸಿಸಿಟಿವಿ ಲೈವ್ ಫೀಡ್ ಅನ್ನು ಸ್ಥಳೀಯ ಪೊಲೀಸ್ ಠಾಣೆಯ ನಿಯಂತ್ರಣ ಕೊಠಡಿಗೆ ಕಲ್ಪಿಸಬೇಕು.
2. ಡಿಜಿಟಲ್ ದೇಣಿಗೆ ಮತ್ತು ನಕಲಿ ಕ್ಯೂಆರ್ ಕೋಡ್ ತಡೆ:
ಯುಪಿಐ ಪಾವತಿಗೆ ಉತ್ತೇಜನ: ಜೇಬುಗಳ್ಳತನ ತಪ್ಪಿಸಲು ಕ್ಯೂಆರ್ ಕೋಡ್ ಮೂಲಕ ಡಿಜಿಟಲ್ ದೇಣಿಗೆ ಹಾಗೂ ಸೇವಾ ಟಿಕೆಟ್, ಪ್ರಸಾದ ವಿತರಣೆಗೂ ಯುಪಿಐ, ಭೀಮ್ ಪಾವತಿ ವ್ಯವಸ್ಥೆ ತರಬೇಕು. ಇದನ್ನು ದೇವಾಲಯದ ಲೆಕ್ಕಪತ್ರದೊಂದಿಗೆ ಲಿಂಕ್ ಮಾಡಬೇಕು.
ಹುಂಡಿ ಬಳಿ ಮಾತ್ರ ಕೋಡ್: ಕ್ಯೂಆರ್ ಕೋಡ್ ಅನ್ನು ಕೇವಲ ಹುಂಡಿಯ ಪಕ್ಕದಲ್ಲಿ ಮಾತ್ರ ಇಡಬೇಕು. ಕಿಡಿಗೇಡಿಗಳು ಹುಂಡಿ ಮೇಲಿರುವ ಕೋಡ್ ಮೇಲೆ ತಮ್ಮ ನಕಲಿ ಕ್ಯೂಆರ್ ಕೋಡ್ ಅಂಟಿಸದಂತೆ ಅಧಿಕಾರಿಗಳು ನಿರಂತರ ತಪಾಸಣೆ ನಡೆಸಬೇಕು.
3. ಹುಂಡಿ ಎಣಿಕೆಗೆ ಕಟ್ಟುನಿಟ್ಟಿನ ಟೈಮ್ ಟೇಬಲ್:
ಕ್ಯಾಲೆಂಡರ್ ನಿಗದಿ: ಹುಂಡಿ ಎಣಿಕೆಗೆ ಮುಂಚಿತವಾಗಿಯೇ ಕ್ಯಾಲೆಂಡರ್‌ನಲ್ಲಿ ದಿನಾಂಕ ನಿಗದಿಪಡಿಸಬೇಕು ಮತ್ತು ಕಂದಾಯ ಅಧಿಕಾರಿಗಳ ಸಮ್ಮುಖದಲ್ಲೇ ಎಣಿಕೆ ನಡೆಯಬೇಕು.
ಅವಧಿ ನಿಗದಿ: ಹೆಚ್ಚು ಆದಾಯವಿರುವ ದೇವಾಲಯಗಳಲ್ಲಿ ವಾರಕ್ಕೊಮ್ಮೆ ಮತ್ತು ಸಾಧಾರಣ ಆದಾಯವಿರುವ ದೇವಾಲಯಗಳಲ್ಲಿ 15 ದಿನಕ್ಕೊಮ್ಮೆ ಕಡ್ಡಾಯವಾಗಿ ಹುಂಡಿ ಎಣಿಕೆ ಮಾಡಬೇಕು. ಸಂಬಂಧಪಟ್ಟ ತಹಶೀಲ್ದಾರ್ ಇದರ ನೇರ ಉಸ್ತುವಾರಿ ವಹಿಸಬೇಕು.
ಚಿನ್ನ/ಬೆಳ್ಳಿ ಮೌಲ್ಯಮಾಪನ: ಹುಂಡಿಯಲ್ಲಿ ಸಿಗುವ ಚಿನ್ನ ಮತ್ತು ಬೆಳ್ಳಿ ವಸ್ತುಗಳನ್ನು ಎಣಿಕೆ ನಡೆದ ದಿನವೇ ಜಿಲ್ಲಾ ಅಥವಾ ಉಪ-ವಿಭಾಗದ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಮೌಲ್ಯಮಾಪನ ಮಾಡಿಸಬೇಕು.
4. ಸಿಬ್ಬಂದಿಗೆ ಫೇಸ್ ರೆಕಗ್ನಿಷನ್ ಮತ್ತು ಖಾಸಗಿ ವ್ಯಕ್ತಿಗಳಿಗೆ ನೋ ಎಂಟ್ರಿ:
ಸ್ವಂತ ಹಣ ಘೋಷಣೆ ಕಡ್ಡಾಯ: ಎಣಿಕೆ ಕೊಠಡಿಗೆ ಪ್ರವೇಶಿಸುವ ಸಿಬ್ಬಂದಿಗೆ ಫೇಸ್ ರೆಕಗ್ನಿಷನ್ (ಮುಖ ಗುರುತಿಸುವಿಕೆ) ಕಡ್ಡಾಯಗೊಳಿಸಲಾಗಿದೆ. ಒಳಹೋಗುವ ಮುನ್ನ ಸಿಬ್ಬಂದಿ ತಮ್ಮ ಬಳಿ ಇರುವ ಸ್ವಂತ ಹಣವನ್ನು ಘೋಷಿಸಿಕೊಳ್ಳಬೇಕು.
ಖಾಸಗಿಯವರಿಗೆ ನಿಷೇಧ: ಹುಂಡಿ ಎಣಿಕೆ ಕಾರ್ಯಕ್ಕೆ ಸಾರ್ವಜನಿಕರನ್ನು ಅಥವಾ ಯಾವುದೇ ಖಾಸಗಿ ವ್ಯಕ್ತಿಗಳನ್ನು ಬಳಸುವಂತಿಲ್ಲ. ಕೇವಲ ಸರ್ಕಾರಿ, ಬ್ಯಾಂಕ್ ಹಾಗೂ ಗೃಹರಕ್ಷಕ ಸಿಬ್ಬಂದಿ ಮಾತ್ರ ಇದರಲ್ಲಿ ಪಾಲ್ಗೊಳ್ಳಬೇಕು.
ಸಂಪೂರ್ಣ ವಿಡಿಯೋ ಶೂಟಿಂಗ್: ಹುಂಡಿ ಸ್ಥಳಾಂತರ, ಹಣ ಹೊರತೆಗೆಯುವುದು ಹಾಗೂ ಪ್ರತಿಯೊಬ್ಬ ಸಿಬ್ಬಂದಿ ಎಣಿಕೆ ಮುಗಿಸಿ ಹೊರಬರುವವರೆಗೆ ದಿನಾಂಕ ಮತ್ತು ಸಮಯ ದಾಖಲಾಗುವಂತೆ ಸಂಪೂರ್ಣ ವಿಡಿಯೋ ಚಿತ್ರೀಕರಣ ಮಾಡಬೇಕು.
ಅಧಿಕಾರಿಗಳೇ ನೇರ ಹೊಣೆ: ಹುಂಡಿ ಎಣಿಕೆ ಸಮಯದಲ್ಲಿ ಅಥವಾ ದೇವಸ್ಥಾನದಲ್ಲಿ ಯಾವುದೇ ರೀತಿಯ ಕಳ್ಳತನ, ಹಣ ದುರ್ಬಳಕೆ ಪ್ರಕರಣ ಕಂಡುಬಂದರೆ ದೇವಸ್ಥಾನದ ಆಡಳಿತ ಮಂಡಳಿ ಮತ್ತು ತಾಲೂಕು ಮಟ್ಟದ ಅಧಿಕಾರಿಗಳನ್ನೇ ನೇರ ಹೊಣೆಗಾರರನ್ನಾಗಿ ಮಾಡಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸುತ್ತೋಲೆಯಲ್ಲಿ ಎಚ್ಚರಿಸಲಾಗಿದೆ.
ಸರ್ಕಾರದ ಈ ಹೊಸ ಕ್ರಾಂತಿಕಾರಕ ಮಾರ್ಗಸೂಚಿಗಳಿಂದಾಗಿ ರಾಜ್ಯದ ಮುಜರಾಯಿ ದೇವಾಲಯಗಳ ಆಡಳಿತದಲ್ಲಿ ಮತ್ತಷ್ಟು ಪಾರದರ್ಶಕತೆ ಬರಲಿದ್ದು, ಭಕ್ತರು ದೇವರಿಗೆ ಅರ್ಪಿಸುವ ಕಾಣಿಕೆಗೆ ಸಂಪೂರ್ಣ ಭದ್ರತೆ ಸಿಗಲಿದೆ.



