ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ಜಿಲ್ಲೆಯ ಎರಡನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು (ಪೋಕ್ಸೋ) ಅಪ್ರಾಪ್ತೆ ಬಾಲಕಿಯ ಅಪಹರಣ ಹಾಗೂ ಅತ್ಯಾಚಾರ ಎಸಗಿದ್ದ ಆರೋಪಿಗೆ 20 ವರ್ಷಗಳ ಕಠಿಣ ಕಾರುವಾಸ ಮತ್ತು ₹10,000 ದಂಡ ವಿಧಿಸಿ ಆದೇಶ ಹೊರಡಿಸಿದೆ.
ಘಟನೆಯ ವಿವರ:
ಹೊಳಲ್ಕೆರೆ ತಾಲೂಕಿನ ಕೊಡಗವಳ್ಳಿ ಗ್ರಾಮದ ಮಂಜುನಾಥ.ಎಸ್ (33) ಶಿಕ್ಷೆಗೆ ಗುರಿಯಾದ ದೋಷಿಯಾಗಿದ್ದಾನೆ.
2024ರ ಜನವರಿ 15ರಂದು ಮಧ್ಯಾಹ್ನ 12:20ರ ಸುಮಾರಿಗೆ ಆರೋಪಿಯು ಅಪ್ರಾಪ್ತ ಬಾಲಕಿಯನ್ನು ಬಲವಂತವಾಗಿ ಅಪಹರಿಸಿಕೊಂಡು ಹೋಗಿ, ಹೊಳಲ್ಕೆರೆ ತಾಲೂಕಿನ ಮಾಳೇನಹಳ್ಳಿ ಗ್ರಾಮದ ಬಳಿ ಬಾಲಕಿಯ ಇಚ್ಛೆಗೆ ವಿರುದ್ಧವಾಗಿ ಅತ್ಯಾಚಾರವೆಸಗಿದ್ದನು.
ಪೊಲೀಸ್ ತನಿಖೆ ಮತ್ತು ದೋಷಾರೋಪಣೆ: ಈ ಘಟನೆಗೆ ಸಂಬಂಧಿಸಿದಂತೆ ಹೊಳಲ್ಕೆರೆ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ಸಂಖ್ಯೆ 15/2024ರಲ್ಲಿ ಪ್ರಕರಣ ದಾಖಲಾಗಿತ್ತು.
ಪೊಲೀಸ್ ಇನ್ಸ್ಪೆಕ್ಟರ್ ಎಂ.ಬಿ. ಚಿಕ್ಕಣ್ಣನವರ್ ಅವರು ತನಿಖೆ ನಡೆಸಿ, ಆರೋಪಿಯ ವಿರುದ್ಧ ಕಲಮ್ 363, 506, 376 ಐಪಿಸಿ ಮತ್ತು ಕಲಮ್ 4 ಪೋಕ್ಸೋ ಕಾಯ್ದೆಯಡಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.
ನ್ಯಾಯಾಲಯದ ತೀರ್ಪು ಮತ್ತು ಪರಿಹಾರ:
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯದ ಮಾನ್ಯ 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ (ಪೋಕ್ಸೋ) ನ್ಯಾಯಾಧೀಶರಾದ ಗಂಗಾಧರ ಚನ್ನಬಸಪ್ಪ ಹಡಪದ ಅವರು ಅಕ್ಟೋಬರ್ 13, 2026ರಂದು ಅಂತಿಮ ತೀರ್ಪು ಪ್ರಕಟಿಸಿದ್ದಾರೆ. ಆರೋಪಿಗೆ ಒಟ್ಟು 20 ವರ್ಷಗಳ ಕಠಿಣ ಶಿಕ್ಷೆ ಹಾಗೂ ರೂ. 10,000 ದಂಡ ವಿಧಿಸಲಾಗಿದೆ.
ಇದರೊಂದಿಗೆ, ಪ್ರಕರಣದ ಸಂತ್ರಸ್ತ ಬಾಲಕಿಗೆ ರೂ. 4,00,000 ಪರಿಹಾರ ನೀಡುವಂತೆ ನ್ಯಾಯಾಲಯ ಆದೇಶಿಸಿದೆ. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕರಾದ ಹೆಚ್.ಆರ್. ಜಗದೀಶ್ ಅವರು ವಾದ ಮಂಡಿಸಿದ್ದರು.




