ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮುಂಗಾರು ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ತೀವ್ರ ಸಂಕಷ್ಟ ಎದುರಾಗಿರುವ ಕರ್ನಾಟಕದಲ್ಲಿ ಬರಪೀಡಿತ ತಾಲೂಕುಗಳ ಸಂಖ್ಯೆ ಮತ್ತಷ್ಟು ಹೆಚ್ಚಾಗಿದೆ. ಗ್ರೌಂಡ್ ಟ್ರೂಥಿಂಗ್ ಅಂತ್ಯಗೊಂಡಿರುವ ಹೊಸದಾಗಿ 9 ತಾಲೂಕುಗಳನ್ನು ಬರಪೀಡಿತವೆಂದು ರಾಜ್ಯ ಸರ್ಕಾರ ಘೋಷಿಸಿದ್ದು, ಇದರೊಂದಿಗೆ ರಾಜ್ಯದಲ್ಲಿ ಬರಪೀಡಿತ ಒಟ್ಟು ತಾಲೂಕುಗಳ ಸಂಖ್ಯೆ 226ಕ್ಕೆ ತಲುಪಿದೆ.
ಸದಾಶಿವನಗರದ ತಮ್ಮ ನಿವಾಸದ ಬಳಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವ ಡಾ. ಜಿ. ಪರಮೇಶ್ವರ್ ಈ ಕುರಿತು ಮಾಹಿತಿ ನೀಡಿದ್ದು, "ರಾಜ್ಯದಲ್ಲಿ ಬರ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಮತ್ತು ಸಂಕಷ್ಟದಲ್ಲಿರುವ ರೈತರ ಹಿತ ಕಾಪಾಡಲು ನಮ್ಮ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ. ವೈಜ್ಞಾನಿಕ ಮೌಲ್ಯಮಾಪನ ಹಾಗೂ ಸ್ಥಳ ಪರಿಶೀಲನೆಯ ಆಧಾರದ ಮೇಲೆ ಹೊಸದಾಗಿ 9 ತಾಲೂಕುಗಳನ್ನು ಬರಪೀಡಿತವೆಂದು ಘೋಷಿಸಿ ಆದೇಶ ಹೊರಡಿಸಲಾಗಿದೆ" ಎಂದು ಎಕ್ಸ್ ಪೋಸ್ಟ್ ಮೂಲಕ ತಿಳಿಸಿದ್ದಾರೆ.
ಹೊಸದಾಗಿ ಘೋಷಿಸಲಾದ ತಾಲೂಕುಗಳ ವಿವರ:
ತೀವ್ರ ಬರಪೀಡಿತ: ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕು.
ಮಧ್ಯಮ ಬರಪೀಡಿತ: ಬೆಳಗಾವಿ ಜಿಲ್ಲೆಯ ಖಾನಾಪುರ, ಶಿವಮೊಗ್ಗ ಜಿಲ್ಲೆಯ ಹೊಸನಗರ ಮತ್ತು ಸಾಗರ, ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು, ಮೂಡುಬಿದಿರೆ ಹಾಗೂ ಮೂಲ್ಕಿ, ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ಮತ್ತು ದಾಂಡೇಲಿ ಸೇರಿದಂತೆ ಒಟ್ಟು 8 ತಾಲೂಕುಗಳು.
ಉಳಿದ ತಾಲೂಕುಗಳಲ್ಲೂ ಬರ ಪರಿಸ್ಥಿತಿಯ ಮೇಲ್ವಿಚಾರಣೆ ಮುಂದುವರಿಯಲಿದ್ದು, ಮಾನದಂಡಗಳಿಗೆ ಒಳಪಟ್ಟಲ್ಲಿ ಮುಂದಿನ ಹಂತದಲ್ಲಿ ಹೆಚ್ಚುವರಿ ತಾಲೂಕುಗಳನ್ನು ಬರಪೀಡಿತ ಪಟ್ಟಿಗೆ ಸೇರಿಸಲಾಗುವುದು ಎಂದು ಡಿಸಿಎಂ ಸ್ಪಷ್ಟಪಡಿಸಿದ್ದಾರೆ. ಬರದಿಂದ ರೈತರ ಜೀವನೋಪಾಯಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳುವುದು, ಬೆಳೆಹಾನಿಗೆ ಸೂಕ್ತ ಪರಿಹಾರ ಒದಗಿಸುವುದು ಹಾಗೂ ಗ್ರಾಮೀಣ ಜನರ ಹಿತ ಕಾಯುವುದು ಸರ್ಕಾರದ ಪ್ರಮುಖ ಆದ್ಯತೆಯಾಗಿದೆ ಎಂದಿದ್ದಾರೆ.
ಹೆಚ್ಚಿನ ಪರಿಹಾರ ಮೊತ್ತಕ್ಕೆ ಕೇಂದ್ರಕ್ಕೆ ಮನವಿ: ರಾಜ್ಯದಲ್ಲಿ ಬರದಿಂದ ಉಂಟಾಗಿರುವ ಒಟ್ಟು ನಷ್ಟದ ಅಂದಾಜು ಎಷ್ಟೆಂಬುದು ಅಂತಿಮ ಮೆಮೊರಾಂಡಮ್ ಸಿದ್ಧಪಡಿಸುವ ಸಂದರ್ಭದಲ್ಲಿ ಸ್ಪಷ್ಟವಾಗಲಿದೆ. ಅದರ ಪ್ರಮಾಣಕ್ಕೆ ತಕ್ಕಂತೆ ಎನ್ಡಿಆರ್ಎಫ್ ಮಾರ್ಗಸೂಚಿಗಳ ಪ್ರಕಾರ ಪರಿಹಾರದ ಮೊತ್ತವನ್ನು ಲೆಕ್ಕಹಾಕಲಾಗುತ್ತದೆ. ಕಳೆದ ವರ್ಷ ಸುಮಾರು 18,000 ಕೋಟಿ ರೂಪಾಯಿ ಪರಿಹಾರ ಕೋರಲಾಗಿತ್ತು. ಈ ಬಾರಿ ಇಡೀ ರಾಜ್ಯದಲ್ಲಿ ಹೆಚ್ಚಿನ ಪ್ರಮಾಣದ ನಷ್ಟ ಸಂಭವಿಸಿರುವುದರಿಂದ ಕೇಂದ್ರದಿಂದ ಕೋರಲಾಗುವ ಪರಿಹಾರದ ಮೊತ್ತವೂ ಹೆಚ್ಚಾಗುವ ಸಾಧ್ಯತೆಯಿದೆ.
ಬರ ಪರಿಹಾರಕ್ಕೆ ಸಂಬಂಧಿಸಿದಂತೆ ಎನ್ಡಿಆರ್ಎಫ್ ಮಾರ್ಗಸೂಚಿಗಳನ್ನು ಸಡಿಲಗೊಳಿಸುವಂತೆ ಮುಖ್ಯಮಂತ್ರಿ ಮತ್ತು ನಾನು ಒಟ್ಟಾಗಿ ಕೇಂದ್ರಕ್ಕೆ ಪತ್ರ ಬರೆದಿದ್ದೇವೆ. ಇದಕ್ಕೆ ಕೇಂದ್ರ ಕೃಷಿ ಸಚಿವರಿಂದ ಪತ್ರ ಬಂದಿದ್ದು, ವಿಷಯವನ್ನು ಪರಿಶೀಲಿಸುವುದಾಗಿ ತಿಳಿಸಿದ್ದಾರೆ. ಅಂತಿಮ ಮೆಮೊರಾಂಡಮ್ ಸಿದ್ಧವಾದ ಬಳಿಕ ಮುಖ್ಯಮಂತ್ರಿಗಳು ಹಾಗೂ ಇತರರನ್ನು ಒಳಗೊಂಡ ನಿಯೋಗ ದೆಹಲಿಗೆ ತೆರಳಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಿದೆ ಎಂದು ತಿಳಿಸಿದರು.
ಎಸ್ಸಿ-ಎಸ್ಟಿ ಮೀಸಲಾತಿ ಕುರಿತು ಸಚಿವ ಸಂಪುಟ ಸಭೆಯಲ್ಲಿ ಚರ್ಚೆ:
ಎಸ್ಸಿ-ಎಸ್ಟಿ ಮೀಸಲಾತಿಗೆ ಸಂಬಂಧಿಸಿದ ಹೈಕೋರ್ಟ್ ತೀರ್ಪಿನ ವಿಚಾರವಾಗಿ ಇಂದು ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಪ್ರಸ್ತಾಪಿಸಿ ಚರ್ಚಿಸಲಾಗುವುದು ಎಂದು ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ. ಈ ವಿಚಾರದಲ್ಲಿ ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಬೇಕೇ ಅಥವಾ ಸಂವಿಧಾನದ ಒಂಬತ್ತನೇ ಶೆಡ್ಯೂಲ್ಗೆ ಸೇರಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಬೇಕೇ ಎಂಬ ಬಗ್ಗೆ ಸಂಪುಟದಲ್ಲಿ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.



