ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಆಕಾಶದಲ್ಲಿ ಸಂಭವಿಸಬಹುದಾಗಿದ್ದ ಭೀಕರ ಭಯೋತ್ಪಾದಕ ಸಂಚನ್ನು ಹತ್ತಿಕ್ಕಿ 174 ಪ್ರಯಾಣಿಕರ ಜೀವ ಉಳಿಸಿದ ಭಾರತದ ಅಪ್ರತಿಮ ವೀರ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರ ಸಾಹಸ ಮತ್ತು ಧೈರ್ಯಕ್ಕೆ ಬಿಜೆಪಿ ನಾಯಕ ಸಿ.ಟಿ. ರವಿ ಅವರು ಹೃತ್ಪೂರ್ವಕ ಅಭಿನಂದನೆ ಸಲ್ಲಿಸಿದ್ದಾರೆ.
ದುಬೈನಿಂದ ಟೆಲ್ ಅವಿವ್‌ಗೆ ಸಾಗುತ್ತಿದ್ದ ವಿಮಾನದಲ್ಲಿ ಸಹ-ಪೈಲಟ್ ಕೊಲೆಗಡುಕ ದಾಳಿ ನಡೆಸಿ, ತೀವ್ರವಾಗಿ ಗಾಯಗೊಳಿಸಿದರೂ ಸಹ ಧೃತಿಗೆಡದ ಕ್ಯಾಪ್ಟನ್ ಸ್ಮಿತ್, ಅತ್ಯಂತ ಸಮಯಪ್ರಜ್ಞೆಯಿಂದ ಹೋರಾಡಿ ಕಾಕ್‌ಪಿಟ್ ಅನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡರು. 9/11 ಮಾದರಿಯ ಭೀಕರ ದುರಂತವನ್ನು ತಪ್ಪಿಸುವ ಮೂಲಕ ಭಾರತದ ಹೆಸರನ್ನು ಜಾಗತಿಕ ಮಟ್ಟದಲ್ಲಿ ಎತ್ತಿ ಹಿಡಿದಿದ್ದಾರೆ.
ತೀವ್ರ ಗಾಯಗೊಂಡಿರುವ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರು ಶೀಘ್ರದಲ್ಲೇ ಗುಣಮುಖರಾಗಲಿ ಎಂದು ಆಶಿಸಿರುವ ಸಿ.ಟಿ. ರವಿ, ಅವರ ಈ ಅಪಾರ ಧೈರ್ಯ ಮತ್ತು ಶೌರ್ಯವು ಭಾರತದ 'ವಸುಧೈವ ಕುಟುಂಬಕಂ' (ಇಡೀ ಜಗತ್ತೇ ಒಂದು ಕುಟುಂಬ) ಎಂಬ ಉದಾತ್ತ ತತ್ವಕ್ಕೆ ಅತ್ಯುತ್ತಮ ಸಾಕ್ಷಿಯಾಗಿದೆ ಎಂದು ಶ್ಲಾಘಿಸಿದ್ದಾರೆ.




