ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಮಗಳ ಕ್ಯಾನ್ಸರ್ ಚಿಕಿತ್ಸೆಗೆ ಇದ್ದಬಿದ್ದ ಆಸ್ತಿ, ಒಡವೆ ಮಾರಿಕೊಂಡು, ಸ್ನೇಹಿತರಿಂದ ಸಾಲ ಮಾಡಿ ಚಿಕಿತ್ಸೆ ಕೊಡಿಸಿರುವ ಕಡು ಬಡತನದ ತಾಯಿಯೊಬ್ಬರು, ಇದೀಗ ಮಗಳ ಜೀವ ಉಳಿಸಲು ಕೊನೆಯ ಹಂತದ ಚಿಕಿತ್ಸೆಗೆ ಹಣವಿಲ್ಲದೆ ದಾನಿಗಳ ಹಾಗೂ ಸಹೃದಯಿಗಳ ನೆರವಿಗಾಗಿ ಕೈಮುಗಿದು ಬೇಡಿಕೊಳ್ಳುತ್ತಿದ್ದಾರೆ.
ಹಿರಿಯೂರು ನಗರದ ಶ್ರೀನಿವಾಸ ನಗರದಲ್ಲಿರುವ ಯಾಜ್ಞವಲ್ಕ್ಯ ಶಾಲೆಯಲ್ಲಿ ಪ್ರೌಢಶಿಕ್ಷಣ ಮುಗಿಸಿದ್ದ ಶಿವಾನಿಗೌಡ ಎಂಬ ಪ್ರಸನ್ನ ವದನದ ಯುವತಿ, ಪ್ರಸ್ತುತ ಮೈಸೂರಿನಲ್ಲಿ ಬಿಸಿಎ (BCA) ಪದವಿ ವ್ಯಾಸಂಗ ಮಾಡುತ್ತಿದ್ದರು. ಶಿಕ್ಷಣದಲ್ಲಿ ಅತ್ಯಂತ ಮುಂಚೂಣಿಯಲ್ಲಿದ್ದು, ಭವಿಷ್ಯದ ಬಗ್ಗೆ ಅಪಾರ ಕನಸುಗಳನ್ನು ಕಟ್ಟಿಕೊಂಡಿದ್ದ ಈಕೆಗೆ ದುರದೃಷ್ಟವಶಾತ್ ರಕ್ತದ ಕ್ಯಾನ್ಸರ್ (Blood Cancer) ಕಾಣಿಸಿಕೊಂಡಿದೆ.
ಬೋನ್ ಮ್ಯಾರೋ ಟ್ರಾನ್ಸ್ಪ್ಲಾಂಟ್ ಅಗತ್ಯ:
ಆರಂಭಿಕ ಹಂತದಲ್ಲಿ ಸೂಕ್ತ ಚಿಕಿತ್ಸೆ ನೀಡಿದ ಪರಿಣಾಮ ಶಿವಾನಿಗೌಡ ಅವರು ಚೇತರಿಸಿಕೊಂಡು ಗುಣಮುಖದ ಹಂತಕ್ಕೆ ತಲುಪಿದ್ದರು. ಆದರೆ, ಅವರು ಪೂರ್ಣಪ್ರಮಾಣದಲ್ಲಿ ಬದುಕುಳಿಯಬೇಕಾದರೆ ತುರ್ತಾಗಿ 'ಬೋನ್ ಮ್ಯಾರೋ ಟ್ರಾನ್ಸ್ಪ್ಲಾಂಟ್' (Bone Marrow Transplant) ಚಿಕಿತ್ಸೆ ಮಾಡಿಸಬೇಕು ಎಂದು ಬೆಂಗಳೂರಿನ ನಾರಾಯಣ ಹೃದ್ಧಾಲಯ (ನಾರಾಯಣ ಆಸ್ಪತ್ರೆ) ವೈದ್ಯರು ತಿಳಿಸಿದ್ದಾರೆ.
ತಾಯಿಯ ಕಣ್ಣೀರಿನ ಆಕ್ರಂದನ:
ಇಲ್ಲಿಯವರೆಗೆ ಮಗಳ ಚಿಕಿತ್ಸೆಗೆ ತಾಯಿ ಚಿತ್ರಾ ಅವರು ತಮ್ಮ ಬಳಿಯಿದ್ದ ಅಲ್ಪಸ್ವಲ್ಪ ಹಣ ಹಾಗೂ ಮಿತ್ರರಿಂದ ಸಂಗ್ರಹಿಸಿದ ಹಣವನ್ನೆಲ್ಲ ಖರ್ಚು ಮಾಡಿದ್ದಾರೆ. ಆದರೆ ಮುಂದಿನ ಹಂತದ ಈ ಬೃಹತ್ ಚಿಕಿತ್ಸೆಗೆ ಅಪಾರ ಪ್ರಮಾಣದ ಹಣದ ಅಗತ್ಯವಿದ್ದು, ಕಡು ಬಡತನದಲ್ಲಿರುವ ಈ ಕುಟುಂಬಕ್ಕೆ ವೆಚ್ಚ ಬರಿಸಲು ಸಾಧ್ಯವಾಗುತ್ತಿಲ್ಲ.
"ನನ್ನ ಮಗಳ ಎಳೆ ಜೀವವನ್ನು ಉಳಿಸಿಕೊಡಿ. ನನ್ನ ಬಳಿಯಿದ್ದದ್ದನ್ನೆಲ್ಲ ಚಿಕಿತ್ಸೆಗೆ ಸುರಿದಿದ್ದೇನೆ. ಮುಂದಿನ ಚಿಕಿತ್ಸೆಗೆ ಹಣವಿಲ್ಲದೆ ದಿಕ್ಕು ತೋಚದಂತಾಗಿದ್ದೇನೆ. ದಯವಿಟ್ಟು ಸಹೃದಯಿ ದಾನಿಗಳು, ಸಾರ್ವಜನಿಕರು ಹಾಗೂ ಸಂಘ-ಸಂಸ್ಥೆಗಳು ಕರುಣೆ ತೋರಿಸಿ ಆರ್ಥಿಕ ಧನಸಹಾಯ ಮಾಡಿ ನನ್ನ ಮಗಳನ್ನು ಉಳಿಸಿಕೊಡಬೇಕಾಗಿ ಕೈ ಮುಗಿದು ಕೇಳಿಕೊಳ್ಳುತ್ತೇನೆ" ಎಂದು ಶಿವಾನಿಗೌಡ ಅವರ ತಾಯಿ ಚಿತ್ರಾ ಅವರು ಕಣ್ಣೀರಿಡುತ್ತಾ ಮನವಿ ಮಾಡಿದ್ದಾರೆ.

ಆರ್ಥಿಕ ನೆರವು ನೀಡಲು ಇಚ್ಛಿಸುವವರು ಸಂಪರ್ಕಿಸಬೇಕಾದ ವಿಳಾಸ ಮತ್ತು ಮೊಬೈಲ್ ಸಂಖ್ಯೆ: 7899336285,
ರೋಗಿಯ ಹೆಸರು: ಶಿವಾನಿಗೌಡ
ತಾಯಿಯ ಹೆಸರು: ಚಿತ್ರಾ
ಸ್ಥಳ: ಹಿರಿಯೂರು
ಸಂಪರ್ಕ ಸಂಖ್ಯೆ (Mobile / Phone Pay / Google Pay): 7899336285,




