ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಾಟಕದ ಕರಾವಳಿ ಪ್ರದೇಶವು ಅಪಾರ ಅಭಿವೃದ್ಧಿ ಸಾಧ್ಯತೆಗಳನ್ನು ಹೊಂದಿದ್ದು, ಈ ಭಾಗದ ಭವಿಷ್ಯದ ಬೆಳವಣಿಗೆಗೆ ನೂತನ ರೂಪುರೇಷೆ ಸಿದ್ಧಪಡಿಸುವುದು ರಾಜ್ಯ ಸರ್ಕಾರದ ಮುಖ್ಯ ಉದ್ದೇಶವಾಗಿದೆ ಎಂದು ಕಂದಾಯ ಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ.
ಕರಾವಳಿ ಭಾಗದ ಸಮಗ್ರ ಪ್ರಗತಿ ಹಾಗೂ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಕುರಿತು ಮಾತನಾಡಿದ ಅವರು, ಸರ್ಕಾರದ ಪ್ರಮುಖ ಕಾರ್ಯಯೋಜನೆಗಳನ್ನು ಹಂಚಿಕೊಂಡಿದ್ದಾರೆ.
ಸಂಪುಟ ಸಭೆಯಲ್ಲಿ ಪ್ರವಾಸೋದ್ಯಮ ನೀತಿ ಚರ್ಚೆ: ಕರಾವಳಿ ಭಾಗದ ಜ್ವಲಂತ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಕಂಡುಕೊಳ್ಳುವುದರ ಜೊತೆಗೆ, ಪ್ರದೇಶಕ್ಕೆ ಸೂಕ್ತವಾದ 'ನೂತನ ಪ್ರವಾಸೋದ್ಯಮ ನೀತಿ' ಕುರಿತು ಸಚಿವ ಸಂಪುಟದ ಮುಂದಿನ ಸಭೆಯಲ್ಲಿ ವಿಸ್ತೃತ ಚರ್ಚೆ ನಡೆಸಲಾಗುವುದು.
ಅಂತರರಾಷ್ಟ್ರೀಯ ಮಟ್ಟದ ಕ್ರೀಡೆಗಳಿಗೆ ಪ್ರೋತ್ಸಾಹ: ಕರಾವಳಿಯಲ್ಲಿ ಪ್ರವಾಸೋದ್ಯಮವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯಲು ಅಂತರರಾಷ್ಟ್ರೀಯ ಮಟ್ಟದ 'ಸರ್ಫಿಂಗ್'ನಂತಹ ಜಲಕ್ರೀಡೆಗಳು ಹಾಗೂ ವಿಶೇಷ ಕಾರ್ಯಕ್ರಮಗಳಿಗೆ ಆದ್ಯತೆಯ ಪ್ರೋತ್ಸಾಹ ನೀಡಲಾಗುವುದು.
ಸಾಫ್ಟ್ ಇಂಡಸ್ಟ್ರೀಸ್ ಹಾಗೂ ಉದ್ಯೋಗ ಸೃಷ್ಟಿ: ಪ್ರವಾಸೋದ್ಯಮದ ಜೊತೆಗೆ ಸ್ಥಳೀಯ ಆರ್ಥಿಕ ಚಟುವಟಿಕೆಗಳಿಗೆ ವೇಗ ನೀಡಲು ಮತ್ತು ಯುವಜನತೆಗೆ ವ್ಯಾಪಕ ಉದ್ಯೋಗಾವಕಾಶ ಸೃಷ್ಟಿಸಲು 'ಸಾಫ್ಟ್ ಇಂಡಸ್ಟ್ರಿ'ಗಳನ್ನು ಕರಾವಳಿ ಪ್ರದೇಶದತ್ತ ಆಕರ್ಷಿಸಲು ಸರ್ಕಾರ ತೀರ್ಮಾನಿಸಿದೆ.
"ಕರಾವಳಿ ಬೆಳೆದರೆ, ಕರ್ನಾಟಕ ಪ್ರಜ್ವಲಿಸಲಿದೆ" ಎಂಬ ಆಶಯದೊಂದಿಗೆ ಸರ್ಕಾರ ಕರಾವಳಿ ಜಿಲ್ಲೆಗಳ ಸಮಗ್ರ ವಿಕಾಸಕ್ಕೆ ಬದ್ಧವಾಗಿದೆ ಎಂದು ಅವರು ಆಶಯ ವ್ಯಕ್ತಪಡಿಸಿದ್ದಾರೆ.




