ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಮಕ್ಕಳ ಕೊರತೆ ಮತ್ತು ಮೂಲಸೌಕರ್ಯಗಳ ಅಭಾವದಿಂದ ರಾಜ್ಯಾದ್ಯಂತ ಹಲವು ಸರ್ಕಾರಿ ಶಾಲೆಗಳು ಮುಚ್ಚುವ ಹಂತ ತಲುಪುತ್ತಿರುವ ಈ ದಿನಗಳಲ್ಲಿ, ನಗರದ ಟಿ.ಬಿ. ವೃತ್ತದ ಬಳಿಯಿರುವ ವಿದ್ಯುತ್ ಕಾಲೋನಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ತನ್ನ ಶಿಕ್ಷಕರ ಬದ್ಧತೆ ಹಾಗೂ ಸಮರ್ಪಣಾ ಮನೋಭಾವದಿಂದ ಎಲ್ಲರ ಗಮನ ಸೆಳೆಯುತ್ತಿದೆ.
1963ರಲ್ಲಿ ಪ್ರಾರಂಭವಾದ ಈ ಶಾಲೆಯಲ್ಲಿ ಪ್ರಸ್ತುತ 1 ರಿಂದ 7ನೇ ತರಗತಿವರೆಗೆ 75 ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಶಾಲೆಯ ಮುಖ್ಯ ಶಿಕ್ಷಕಿ ಎಚ್. ಲೋಕಮ್ಮ, ಶಿಕ್ಷಕರಾದ ಎಂ. ಮಾರುತಿ ಕುಮಾರ್, ಮತ್ತೊಬ್ಬರು ಸಹ ಶಿಕ್ಷಕರು ಹಾಗೂ ಒಬ್ಬರು ಅತಿಥಿ ಶಿಕ್ಷಕರು ಇಲ್ಲಿನ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ಹಗಲಿರುಳು ಶ್ರಮಿಸುತ್ತಿದ್ದಾರೆ.
ಶಿಕ್ಷಕರ ಸ್ವಂತ ಖರ್ಚಿನಲ್ಲಿ ಬಿದಿರಿನ ತಡಿಕೆ ಆವರಣ
ಶಾಲೆಯ ಜಾಗವು ಕೆ.ಇ.ಬಿ (ವಿದ್ಯುತ್ ಇಲಾಖೆ)ಗೆ ಸೇರಿರುವುದರಿಂದ ಶಿಕ್ಷಣ ಇಲಾಖೆಯಿಂದ ಕಾಂಪೌಂಡ್ ನಿರ್ಮಾಣಕ್ಕೆ ಅನುದಾನ ಸಿಗುತ್ತಿಲ್ಲ. ಹೀಗಾಗಿ ಹಂದಿ-ನಾಯಿಗಳ ಕಾಟ ಹೆಚ್ಚಾಗಿ ಮಕ್ಕಳ ಸುರಕ್ಷತೆಗೆ ಧಕ್ಕೆಯುಂಟಾಗಿತ್ತು. ಈ ಸಮಸ್ಯೆಗೆ ಪರಿಹಾರವಾಗಿ ಶಿಕ್ಷಕರೇ ತಮ್ಮ ಸ್ವಂತ ಜೇಬಿನಿಂದ 20 ಸಾವಿರ ರೂಪಾಯಿ ವೆಚ್ಚ ಮಾಡಿ ಬಿದಿರಿನ ತಡಿಕೆಯ ಸುಂದರ ಆವರಣ ನಿರ್ಮಿಸಿದ್ದಾರೆ. ಅಲ್ಲದೆ, ಹತ್ತಾರು ಲೋಡ್ ಮಣ್ಣು ಹಾಕಿಸಿ ತೆಂಗು ಹಾಗೂ ವಿವಿಧ ಗಿಡಗಳನ್ನು ನೆಟ್ಟು ಪೋಷಿಸುತ್ತಿದ್ದಾರೆ.
ದಾನಿಗಳ ನೆರವಿನಿಂದ ಸುಸಜ್ಜಿತ ಸೌಲಭ್ಯ
ಶಾಲಾ ಆವರಣದಲ್ಲಿ ವಾಶ್ ಬೇಸಿನ್, ಟಿವಿ, ಕಂಪ್ಯೂಟರ್ ಹಾಗೂ ನಲಿ-ಕಲಿ ಕೊಠಡಿಗೆ ಅಗತ್ಯವಿರುವ ವ್ಯಾಕರಣ, ಜ್ಞಾನಪೀಠ ಪ್ರಶಸ್ತಿ ವಿಜೇತರು, ರಾಜರು, ವಚನಕಾರರು ಮತ್ತು ರಾಷ್ಟ್ರೀಯ ಹಬ್ಬಗಳ ಕುರಿತಾದ ಪ್ಲೆಕ್ಸ್ ಬೋರ್ಡ್‌ಗಳನ್ನು ದಾನಿಗಳ ನೆರವಿನಿಂದ ಫ್ರೇಮ್ ಹಾಕಿಸಿ ಅಳವಡಿಸಲಾಗಿದೆ. ಇಲಾಖೆ ನೀಡುವ ಸಮವಸ್ತ್ರದ ಜೊತೆಗೆ, ದಾನಿಗಳ ಸಹಾಯದಿಂದ ಪಡೆದ ವಿಶೇಷ ಹಾಗೂ ಆಕರ್ಷಕ ಯೂನಿಫಾರ್ಮ್ ಅನ್ನು ಮಕ್ಕಳು ವಾರದಲ್ಲಿ ಎರಡು ದಿನ ಧರಿಸುತ್ತಾರೆ.
ದಿನನಿತ್ಯದ ಕಲಿವಿನಲ್ಲಿ ಹೊಸತನ
ಪ್ರತಿ ಶನಿವಾರ ಯೋಗ ತರಬೇತಿ ನೀಡಲಾಗುತ್ತಿದ್ದು, ಬೆಳಗಿನ ಪ್ರಾರ್ಥನಾ ವೇಳೆಯಲ್ಲಿ ದಿನಪತ್ರಿಕೆ ಓದುವುದು, ಸಾಮಾನ್ಯ ಜ್ಞಾನದ ಪ್ರಶ್ನೋತ್ತರ, ಮಗ್ಗಿ ಹಾಗೂ ರಾಜ್ಯ-ಜಿಲ್ಲೆಗಳ ಹೆಸರುಗಳನ್ನು ಅಭ್ಯಾಸ ಮಾಡಿಸಲಾಗುತ್ತಿದೆ.

ಸರ್ಕಾರಿ ಶಾಲೆಗಳಿಗೆ ಕಾಯಕಲ್ಪ ನೀಡಿದ ಮಾದರಿ ಶಿಕ್ಷಕರು
"ವಿದ್ಯೆಯ ಜೊತೆಗೆ ಸಮಯ ಪಾಲನೆ ಹಾಗೂ ಉತ್ತಮ ಪರಿಸರ ಸಿಕ್ಕಾಗ ಮಕ್ಕಳು ಸಾಧನೆ ಮಾಡಲು ಸಾಧ್ಯ ಎಂಬುದಕ್ಕೆ ಈ ಶಾಲೆ ಸಾಕ್ಷಿ. ಸರ್ಕಾರಿ ಶಾಲೆಗಳನ್ನು ಶಿಕ್ಷಕರು ಮನಸ್ಸು ಮಾಡಿದರೆ ಪೋಷಕರು ಬೆರಗಾಗುವಂತೆ ಮಾಡಬಹುದು. ನೋಡಲು ಆಗದಂತಿದ್ದ ಶಾಲಾ ವಾತಾವರಣವನ್ನು ಇಂದು ಕಣ್ಣರಳಿಸಿ ನೋಡುವಂತೆ ಮಾಡಿರುವ ಶಿಕ್ಷಕರ ಕಾರ್ಯ ಅಭಿನಂದನಾರ್ಹ." ಗೋ. ಬಸವರಾಜ್, ತಾಲೂಕು ಗೌರವಾಧ್ಯಕ್ಷರು, ಕರ್ನಾಟಕ ರಕ್ಷಣಾ ವೇದಿಕೆ.




