ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ :
ಆತ್ರೇಯ ಆಯುರ್ವೇದ ವೈದ್ಯಕೀಯ ಕಾಲೇಜು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ವಿದ್ಯಾರ್ಥಿಗಳಿಗೆ ಆಗುತ್ತಿರುವ ಅನ್ಯಾಯವನ್ನು ಖಂಡಿಸಿ ಸೆ. 08 ರಂದು ನಗರದ ಸೋಮೇಶ್ವರ ದೇವಸ್ಥಾನದಿಂದ ವಿದ್ಯಾರ್ಥಿಗಳೊಂದಿಗೆ ಪ್ರತಿಭಟನಾ ಮೆರವಣಿಗೆ ಮೂಲಕ ಜಿಲ್ಲಾಡಳಿತ ಭವನ ತಲುಪಿ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಧರಣಿ ಮಾಡಲಾಗುವುದು ಎಂದು ಕನ್ನಡಿಗರ ಕರ್ನಾಟಕ ರಕ್ಷಣಾ ವೇದಿಕೆಯ ಸಂಸ್ಥಾಪಕ ಅಧ್ಯಕ್ಷರಾದ ಬಿ. ಎಸ್. ಚಂದ್ರಶೇಖರ್ ತಿಳಿಸಿದರು.
ನಗರದ ಪ್ರವಾಸಿಮಂದಿರದಲ್ಲಿ ಕರವೇ ಕನ್ನಡಿಗರ ಬಣ ಹಾಗೂ ಆತ್ರೇಯ ಆಯುರ್ವೇದ ವೈದ್ಯಕೀಯ ಕಾಲೇಜು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಪೋಷಕರು ಹಾಗೂ ವಿದ್ಯಾರ್ಥಿಗಳ ವತಿಯಿಂದ ಕರೆಯಲಾಗಿದ್ದ ಸುದ್ದಿ ಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಆಯುರ್ವೇದ ವೈದ್ಯಕೀಯ ಕಾಲೇಜು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಅನಿಶ್ಚಿತತೆಯ ಬಗ್ಗೆ ಕ್ರಮಕೈಗೊಳ್ಳುವಂತೆ ಈಗಾಗಲೇ ಮಾನ್ಯ ಜಿಲ್ಲಾಧಿಕಾರಿಗಳಿಗೆ, ಮಾನ್ಯ ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಸಚಿವರಿಗೆ, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಮಾನ್ಯ ಗೌರವಾನ್ವಿತ ಕುಲವತಿಗಳಿಗೆ, ಮಾನ್ಯ ಕೇಂದ್ರ ಆಯುಷ್ ಸಚಿವರಿಗೆ ಮನವಿ ಪತ್ರವನ್ನು ಸಲ್ಲಿಸಿದ್ದೇವೆ. ಆದರೆ, ಇಂದಿನ ಈವರೆಗೂ ಯಾವುದೇ ಪ್ರತಿಕ್ರಿಯೆ ಅಥವಾ ಯಾವುದೇ ವಿದ್ಯಾರ್ಥಿ ಪರ ಬೆಳವಣಿಗೆಗಳು ಕಂಡುಬರದ ಕಾರಣ ಸರ್ಕಾರ ಮಧ್ಯ ಪ್ರವೇಶಿಸಿ, ಜವಾಬ್ದಾರಿಯನ್ನು ತೆಗೆದುಕೊಂಡು ಆತಂತ್ರದಲ್ಲಿರುವ ವಿದ್ಯಾರ್ಥಿಗಳಿಗೆ ನ್ಯಾಯ ದೊರಕಿಸಿಕೊಡಬೇಕೆಂಬ ಬೇಡಿಕೆಗಳನ್ನಿಟ್ಟು ದೊಡ್ಡಬಳ್ಳಾಪುರ ನಗರದ ಸ್ವಯಂಭುವೇಶ್ವರ (ಸೋಮೇಶ್ವರ) ದೇವಸ್ಥಾನದಿಂದ ಆರಂಭಿಸಿ ಜಿಲ್ಲಾಡಳಿತ ಭವನದ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲು ತೀರ್ಮಾನಿಸಿದ್ದೇವೆ ಎಂದರು.
ವಿಜಯ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಎ. ನಂಜಪ್ಪ ಮಾತನಾಡಿ ಆತ್ರೇಯ ಆಯುರ್ವೇದ ವೈದ್ಯಕೀಯ ಕಾಲೇಜು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರವು ಬ್ಯಾಂಕಿನ ವಶಕ್ಕೆ ಒಳಪಟ್ಟಿದೆ.ಕಾಲೇಜು ಮುಚ್ಚಲ್ಪಟ್ಟು ಎರಡು ತಿಂಗಳುಗಳು ಕಳೆದಿದೆ. ಯಾವುದೇ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯವು ಕಾನೂನು, ಆಡಳಿತಾತ್ಮಕ ಅಥವಾ ಆರ್ಥಿಕ ಅನಿಶ್ಚಿತತೆಯಲ್ಲಿರುವ ಸಂದರ್ಭದಲ್ಲಿ ಹೊಸ ವಿದ್ಯಾರ್ಥಿಗಳಿಗೆ ಪ್ರವೇಶ ನೀಡುವುದು, ಅವರ ಶೈಕ್ಷಣಿಕ ಜೀವನ, ಕ್ಲಿನಿಕಲ್ ತರಬೇತಿ, ಇಂಟರ್ನ್‌ಶಿಪ್, ಪರೀಕ್ಷೆಗಳು, ಪದವಿ ಪೂರ್ಣಗೊಳಿಸುವಲ್ಲಿ ಸಮಸ್ಯೆ ಉಂಟಾಗಿದೆ. ಇದನ್ನು ಆಡಳಿತ ಮಂಡಳಿ ಸಂಪೂರ್ಣ ನಿರ್ಲಕ್ಷಿಸುತ್ತಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.ಮಕ್ಕಳ ಭವಿಷ್ಯದ ವೃತ್ತಿಜೀವನದ ಮೇಲೆ ಬೀರುವ ಪರಿಣಾಮವನ್ನು ಅರಿತು ಅಧಿಕಾರಿಗಳು ಕೂಡಲೇ ಕ್ರಮಕ್ಕೆ ಮುಂದಾಗಬೇಕಿದೆ ಎಂದರು.
ಸುದ್ದಿ ಗೋಷ್ಠಿಯಲ್ಲಿ ಕನ್ನಡಿಗರ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯ ಮುಖಂಡರಾದ ಪಿ. ವಾಸು, ಜಿಲ್ಲಾ ಕಾರ್ಯಧ್ಯಕ್ಷ ಪ್ರದೀಪ್, ತಾಲ್ಲೂಕು ಅಧ್ಯಕ್ಷ ವಿನಯ್ ಆರಾಧ್ಯ, ಕಾಲೇಜಿನ ಹಳೇ ವಿದ್ಯಾರ್ಥಿ ಯಮನಗೌಡ ಪಾಟೀಲ್, ವಿನಾಯಕ ಉಪ್ಪಾರ ಸೇರಿದಂತೆ ಹಲವು ವಿದ್ಯಾರ್ಥಿಗಳು ಹಾಜರಿದ್ದರು.




