ಎಂ.ಎಲ್ ಗಿರೀಶ್, ಮಲ್ಲಪ್ಪನಹಳ್ಳಿ.
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ಜಿಲ್ಲೆಯ ಬರಡು ನೆಲ, ಕಡು ಬಿಸಿಲಿಗೆ ಹೆಸರಾದ ಹಿರಿಯೂರು ತಾಲೂಕಿನಾದ್ಯಂತ ಇಂದು ಹೊಸದೊಂದು ಆಶಾಕಿರಣ ಮೂಡುತ್ತಿದೆ. ರಾಜಕೀಯ ಬಣ್ಣದ ಮಾತುಗಳು, ಕೇವಲ ಮತಕ್ಕಾಗಿ ನಡೆಯುವ ಉಪಚುನಾವಣೆಯ ಅಬ್ಬರಗಳ ನಡುವೆ, ಹಿರಿಯೂರಿನ ಪ್ರಜ್ಞಾವಂತರು ಒಟ್ಟಾಗಿ ಹಚ್ಚಿದ ಒಂದು ಜ್ಞಾನದೀಪ ಇಂದು ಪ್ರತಿಯೊಬ್ಬರ ಮನೆಯ ಮನದ ಅಂಗಳಕ್ಕೆ ‘ದೀಪದ ಕುಡಿ’ಯಾಗಿ ಹರಡುತ್ತಿದೆ. ಅದೇ—‘ಮುಕ್ತ ವಿಚಾರ ವೇದಿಕೆ’.
ಇದು ಕೇವಲ ಒಂದು ಚರ್ಚಾ ವೇದಿಕೆಯಲ್ಲ; ಇದು ಹಿರಿಯೂರಿನ ಸ್ವಾಭಿಮಾನದ ಧ್ವನಿ, ಈ ಮಣ್ಣಿನ ಜನರ ಕಣ್ಣೀರು ಮತ್ತು ಕನಸುಗಳ ಪ್ರತಿಬಿಂಬ. ಸ್ಥಳೀಯ ಅಸ್ಮಿತೆಯ ಬಿಂಬ.
ಬತ್ತಿದ ಒಡಲಿಗೆ ಬೇಕಿದೆ ‘ವಿವಿ ಸಾಗರ’ದ ಅಮೃತ ಧಾರೆ:
ವೇದಿಕೆ ಎತ್ತಿಕೊಂಡಿರುವ ಮೊದಲ ಮತ್ತು ಅತ್ಯಂತ ಭಾವುಕ ವಿಷಯವೆಂದರೆ ವಾಣಿ ವಿಲಾಸ ಸಾಗರ (ವಿವಿ ಸಾಗರ). ಮೈಸೂರು ಮಹಾರಾಜರ ದೂರದೃಷ್ಟಿಯ ಕೊಡುಗೆಯಾದ ಈ ಜಲಾಶಯದ ನೀರು ತಾಲೂಕಿನ ನಾಲ್ಕೂ ಹೋಬಳಿಗಳ (ಐಮಂಗಲ, ಧರ್ಮಪುರ, ಹಿರಿಯೂರು, ಕಸಬಾ) ಪ್ರತಿಯೊಂದು ಒಣ ಜಮೀನಿಗೂ ತಲುಪಬೇಕಿದೆ.
ಹಾಲಿ ಅಚ್ಚುಕಟ್ಟು ಪ್ರದೇಶದ ವಿಸ್ತರಣೆ ಕೇವಲ ಕಾಗದದ ಮೇಲಿನ ಯೋಜನೆಯಾಗದೆ, ರೈತನ ಒಣಗುತ್ತಿರುವ ತೆಂಗು, ಅಡಿಕೆ ತೋಟಗಳಿಗೆ ಜೀವ ತುಂಬುವ ಸಂಜೀವಿನಿಯಾಗಬೇಕಿದೆ.
ನೀರೇ ಇಲ್ಲದೆ ಅನ್ನ ನೀಡುವ ರೈತರು ಬದುಕುವುದು ಹೇಗೆ? ಈ ಪ್ರಶ್ನೆಗೆ ಈ ಮುಕ್ತ ವಿಚಾರ ವೇದಿಕೆ ಉತ್ತರ ಹುಡುಕುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ.
ಮರುಜೀವ ಪಡೆಯಬೇಕಿದೆ ‘ವಾಣಿ ಸಕ್ಕರೆ ಕಾರ್ಖಾನೆ’:
ಒಂದು ಕಾಲದಲ್ಲಿ ಹಿರಿಯೂರಿನ ಹೆಮ್ಮೆಯಾಗಿದ್ದ, ಸಾವಿರಾರು ರೈತ ಕುಟುಂಬಗಳಿಗೆ ಅನ್ನ ನೀಡುತ್ತಿದ್ದ ಸ್ಥಗಿತಗೊಂಡಿರುವ ವಾಣಿ ವಿಲಾಸ ಸಕ್ಕರೆ ಕಾರ್ಖಾನೆ ಇಂದು ಮೂಕಪ್ರೇಕ್ಷಕನಂತೆ ನಿಂತಿದೆ. ಕಾರ್ಖಾನೆಯ ಆ ಬೂದು ಬಣ್ಣದ ಗೋಡೆಗಳು ಮತ್ತು ಸ್ತಬ್ಧವಾಗಿರುವ ಯಂತ್ರಗಳು ಈ ಭಾಗದ ರೈತರ ಆರ್ಥಿಕ ಹಿನ್ನಡೆಗೆ ಸಾಕ್ಷಿಯಾಗಿವೆ. ಈ ಕಾರ್ಖಾನೆಗೆ ಮರುಜೀವ ನೀಡುವುದೆಂದರೆ, ಕೇವಲ ಉದ್ಯಮದ ಆರಂಭವಲ್ಲ; ಅದು ಹಿರಿಯೂರಿನ ಕಳೆದುಹೋದ ವೈಭವ ಮತ್ತು ರೈತನ ಹಣೆಬರಹವನ್ನು ಬದಲಾಯಿಸುವ ದಾರಿ.
ಉದ್ಯೋಗಕ್ಕಾಗಿ ವಲಸೆ ಹೋಗುವ ಯುವಕರ ಕಣ್ಣೀರು:
ಹಿರಿಯೂರಿನ ಮಣ್ಣಿನ ಗುಣವೇ ವಿಚಿತ್ರ. ಇಲ್ಲಿ ಬುದ್ಧಿವಂತಿಕೆಗೆ ಕೊರತೆಯಿಲ್ಲ, ಆದರೆ ದುಡಿಯುವ ಕೈಗಳಿಗೆ ಕೆಲಸವಿಲ್ಲ. ಸ್ಥಳೀಯವಾಗಿ ಉದ್ಯೋಗ ಸೃಷ್ಠಿಯಾಗದ ಕಾರಣ, ಇಲ್ಲಿನ ಯುವಕರು ಬೆಂಗಳೂರಿಗೋ ಅಥವಾ ಬೇರೆ ಕಡೆಗೋ ವಲಸೆ ಹೋಗುತ್ತಿದ್ದಾರೆ. ಹೆತ್ತ ತಂದೆ-ತಾಯಿಯನ್ನು ಊರಲ್ಲೇ ಬಿಟ್ಟು, ತುತ್ತು ಅನ್ನಕ್ಕಾಗಿ ದೂರದ ಊರಿನಲ್ಲಿ ಬೆವರು ಹರಿಸುವ ಯುವಕರ ನೋವು ಹೆತ್ತವರಿಗೆ ಗೊತ್ತು.
"ನಮ್ಮೂರಿನಲ್ಲೇ ಕೈಗಾರಿಕೆಗಳು ಆರಂಭವಾಗಿ, ನಮ್ಮ ಮಕ್ಕಳು ನಮ್ಮ ಕಣ್ಣೆದುರೇ ಇದ್ದು ದುಡಿಯುವಂತಾಗಬೇಕು" ಎನ್ನುವ ಮುಕ್ತ ವಿಚಾರ ವೇದಿಕೆಯ ಆಗ್ರಹ ಪ್ರತಿಯೊಬ್ಬ ತಾಯಿಯ ಹೃದಯದ ಹಂಬಲವಾಗಿದೆ.

"ಜಮೀನು ಮಾರಬೇಡಿ" – ರೈತರಲ್ಲಿ ಮೂಡಿಸುತ್ತಿರುವ ಜಾಗೃತಿ:
ಬಡತನ, ಸಾಲಬಾಧೆ ಅಥವಾ ಕೈಗಾರಿಕೆಗಳ ಹೆಸರಿನಲ್ಲಿ ರೈತರು ತಮ್ಮ ಜೀವನಾಡಿಯಾದ ಜಮೀನುಗಳನ್ನು ಮಾರಾಟ ಮಾಡದಂತೆ ಜನಜಾಗೃತಿ ಮೂಡಿಸುತ್ತಿರುವುದು ಈ ವೇದಿಕೆಯ ಅತ್ಯಂತ ಶ್ಲಾಘನೀಯ ಮತ್ತು ಭಾವುಕ ಹೆಜ್ಜೆ.
"ಭೂಮಿ ಕೇವಲ ಮಣ್ಣಲ್ಲ, ಅದು ನಮ್ಮ ತಾಯಿ. ಒಮ್ಮೆ ಮಾರಿದರೆ ಮತ್ತೆ ಸಿಗದು"
ಎಂಬ ಸತ್ಯವನ್ನು ರೈತರಿಗೆ ಮನಮುಟ್ಟುವಂತೆ ಮನವರಿಕೆ ಮಾಡಿಕೊಡಲಾಗುತ್ತಿದೆ. ತಾಯಿಯಂತಹ ಭೂಮಿಯನ್ನು ಉಳಿಸಿಕೊಂಡರೆ ಮಾತ್ರ ಮುಂದಿನ ಪೀಳಿಗೆಗೆ ಭವಿಷ್ಯವಿದೆ ಎಂಬ ಅರಿವು ಹಳ್ಳಿ ಹಳ್ಳಿಗಳಲ್ಲಿ ದೀಪದ ಬೆಳಕಿನಂತೆ ಹರಡುತ್ತಿದೆ.
ದೀಪದ ಕುಡಿಯಾಗಿ ಹರಡುತ್ತಿರುವ ಬದಲಾವಣೆಯ ಅಲೆ:
ಉಪಚುನಾವಣೆಯ ಈ ಸಂದರ್ಭದಲ್ಲಿ ಜಾತಿ, ಧರ್ಮ, ಪಕ್ಷಗಳ ಬೇಲಿಗಳನ್ನು ದಾಟಿ, ಹಿರಿಯೂರಿನ ನೈಜ ಸ್ಥಳೀಯ ಸಮಸ್ಯೆಗಳು ಮತ್ತು ಅಭಿವೃದ್ಧಿಯ ಕುರಿತು ಜನಸಾಮಾನ್ಯರನ್ನು ಎಚ್ಚರಿಸುತ್ತಿರುವ ‘ಮುಕ್ತ ವಿಚಾರ ವೇದಿಕೆ’ ನಿಜಕ್ಕೂ ಕತ್ತಲಲ್ಲಿ ಕರಗುತ್ತಿದ್ದ ಹಿರಿಯೂರಿಗೆ ಒಂದು ‘ದೀಪದ ಕುಡಿ’.
ಈ ದೀಪದ ಕುಡಿ ಸಣ್ಣದಾಗಿ ಆರಂಭವಾಗಿರಬಹುದು, ಆದರೆ ಇದು ಹಿರಿಯೂರಿನ ಪ್ರತಿಯೊಬ್ಬ ಪ್ರಜೆಯ ಮನದಲ್ಲೂ ಸಕಾರಾತ್ಮಕ ಬದಲಾವಣೆಯ ಮಹಾ ಜ್ವಾಲೆಯಾಗಿ ಉರಿಯಲಾರಂಭಿಸಿದೆ. ರಾಜಕಾರಣಿಗಳು ಕೇವಲ ಭರವಸೆಗಳನ್ನು ಕೊಟ್ಟು ಹೋಗುವ ಮುನ್ನ, ಜನರೇ ತಮ್ಮ ಹಕ್ಕುಗಳನ್ನು ಮತ್ತು ತಾಲೂಕಿನ ಅಭಿವೃದ್ಧಿಯ ಅಗತ್ಯಗಳನ್ನು ಪ್ರಶ್ನಿಸುವಂತೆ ಮಾಡಿರುವ ಈ ವೇದಿಕೆಯ ಆಶಯ ಯಶಸ್ವಿಯಾಗಲಿ. ಹಿರಿಯೂರಿನ ಒಣಗಿದ ನೆಲದಲ್ಲಿ ಮತ್ತೆ ಸಮೃದ್ಧಿಯ ಹಸಿರು ಚಿಗುರಲಿ.
ಮೂರೂ ಪಕ್ಷಗಳಲ್ಲಿ ಮೊಳಗಿದ ‘ಸ್ಥಳೀಯ ಅಭ್ಯರ್ಥಿ’ ಸ್ವಾಭಿಮಾನದ ಕೂಗು: ಹಿರಿಯೂರು ಉಪಚುನಾವಣೆಯ ರಣಕಣ ರಂಗೇರುತ್ತಿದ್ದಂತೆ, ತಾಲೂಕಿನ ಗಲ್ಲಿ ಗಲ್ಲಿಗಳಿಂದ, ಹಳ್ಳಿ ಹಳ್ಳಿಗಳಿಂದ ಒಂದು ಸ್ಪಷ್ಟ ಮತ್ತು ತೀವ್ರವಾದ ಧ್ವನಿ ಕೇಳಿಬರುತ್ತಿದೆ.
ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಈ ಮೂರೂ ಪ್ರಮುಖ ರಾಜಕೀಯ ಪಕ್ಷಗಳ ಹೈಕಮಾಂಡ್‌ಗಳಿಗೆ ಇಲ್ಲಿನ ಮತದಾರರು ಮತ್ತು ಸ್ಥಳೀಯ ಕಾರ್ಯಕರ್ತರು ಒಕ್ಕೊರಲಿನಿಂದ ರವಾನಿಸುತ್ತಿರುವ ಸಂದೇಶವೊಂದೇ: "ಈ ಬಾರಿ ನಮ್ಮನ್ನು ಆಳುವವರು ನಮ್ಮ ಮಣ್ಣಿನವರೇ ಆಗಿರಬೇಕು. ಪರಸ್ಥಳದ (ಹೊರಗಿನ) ಅಭ್ಯರ್ಥಿಗಳಿಗೆ ನಮ್ಮಲ್ಲಿ ಜಾಗವಿಲ್ಲ!" ಎನ್ನುವ ಸಂದೇಶ ರವಾನೆ ಮಾಡಲಾಗುತ್ತಿದೆ.
ಇದು ಕೇವಲ ರಾಜಕೀಯ ಪಟ್ಟುಗಳ ಚರ್ಚೆಯಲ್ಲ; ಇದು ಹಿರಿಯೂರಿನ ಜನರ ದಶಕಗಳ ಆಕ್ರೋಶ, ಕಡೆಗಣನೆಗೆ ಒಳಗಾದ ಕಾರ್ಯಕರ್ತರ ಸ್ವಾಭಿಮಾನದ ಹೋರಾಟವಾಗಿ ರೂಪಗೊಳ್ಳುತ್ತಿದೆ.
ಹೊರಗಿನವರ ಹಾರಾಟ – ಸ್ಥಳೀಯರ ಕಣ್ಣೀರು
ಹಿರಿಯೂರು ತಾಲೂಕು ರಾಜಕೀಯವಾಗಿ ಇತಿಹಾಸದಲ್ಲೇ ಹಲವು ಬಾರಿ ಹೊರಗಿನಿಂದ ಬಂದ ನಾಯಕರಿಗೆ ಆಶ್ರಯ ಕೊಟ್ಟಿದೆ. ಚುನಾವಣೆ ಬಂದಾಗ ಹೆಲಿಕಾಪ್ಟರ್‌ನಲ್ಲೋ ಅಥವಾ ಐಷಾರಾಮಿ ಕಾರುಗಳಲ್ಲೋ ಬಂದು, ಭರ್ಜರಿ ಭರವಸೆಗಳ ಮಹಾಪೂರ ಹರಿಸುವುದು, ಸಾವಿರ ಎರಡು ಸಾವಿರ ದುಡ್ಡು ನೀಡಿ ಗೆದ್ದ ಮೇಲೆ ಬೆಂಗಳೂರಿನ ಕೋಣೆಗಳಲ್ಲಿ ಕುಳಿತುಕೊಳ್ಳುವ ‘ವಲಸೆ ಹಕ್ಕಿ’ಗಳ ರಾಜಕಾರಣ ಜನರಿಗೆ ಸಾಕಾಗಿಹೋಗಿದೆ.
ಸ್ಥಳೀಯರ ನೋವು ಯಾರು ಕೇಳಬೇಕು?: ವಾಣಿ ವಿಲಾಸ ಸಕ್ಕರೆ ಕಾರ್ಖಾನೆ ನರಳಿ ಸಾಯುತ್ತಿರುವಾಗ, ವಿವಿ ಸಾಗರದ ನೀರಿಗಾಗಿ ತಾಲೂಕಿನ ರೈತರು ಕಣ್ಣೀರು ಸುರಿಸುತ್ತಿರುವಾಗ, ಉದ್ಯೋಗವಿಲ್ಲದೆ ಯುವಕರು ವಲಸೆ ಹೋಗುತ್ತಿರುವಾಗ ಹೊರಗಿನಿಂದ ಬಂದ ನಾಯಕರಿಗೆ ಇಲ್ಲಿನ ನೆಲದ ಭಾವನೆ ಅರ್ಥವಾಗಲು ಹೇಗೆ ಸಾಧ್ಯ?.
ಪಕ್ಷ ಭೇದವಿಲ್ಲದ ಆಕ್ರೋಶ: ಕಾಂಗ್ರೆಸ್ ಇರಲಿ, ಬಿಜೆಪಿ ಇರಲಿ ಅಥವಾ ಜೆಡಿಎಸ್ ಇರಲಿ; ಸದಾ ಕಾಲ ಪಕ್ಷಕ್ಕಾಗಿ, ನಾಯಕರಿಗಾಗಿ ಹಗಲಿರುಳು ದುಡಿಯುವ ಸ್ಥಳೀಯ ಕಾರ್ಯಕರ್ತರು ಮಾತ್ರ ಚುನಾವಣೆಯ ಹೊತ್ತಿಗೆ ಮೂಲೆಗುಂಪಾಗುತ್ತಿದ್ದಾರೆ. ಹಣ, ಅಧಿಕಾರದ ಬಲದ ಮೇಲೆ ಹೊರಗಿನಿಂದ ಬಂದು ಟಿಕೆಟ್ ಗಿಟ್ಟಿಸಿಕೊಳ್ಳುವವರ ವಿರುದ್ಧ ಮೂರೂ ಪಕ್ಷಗಳ ನಿಷ್ಠಾವಂತ ಕಾರ್ಯಕರ್ತರಲ್ಲಿ ಈ ಬಾರಿ ಸ್ಥಳೀಯ ಅಭ್ಯರ್ಥಿ ಎನ್ನುವ ಜ್ವಾಲಾಮುಖಿ ಬದ್ದವಾಗಿ ಹಬ್ಬಿಟ್ಟಿದೆ.
"ನಮ್ಮ ಸಮಸ್ಯೆಗಳಿಗೆ ನಮ್ಮವನೇ ಸ್ಪಂದಿಸಬೇಕು"-
ಹಿರಿಯೂರಿನ ಜನತೆಗೆ ಈಗ ಕಣ್ಣೆದುರು ಕಾಣುವ ನಾಯಕ ಬೇಕಾಗಿದ್ದಾನೆ.
"ಮಧ್ಯರಾತ್ರಿ ನಮ್ಮ ಮನೆಗೆ ಕಷ್ಟ ಬಂದಾಗ, ನಮ್ಮದೊಂದು ಹಳ್ಳಿಯ ರಸ್ತೆ ಹಾಳಾದಾಗ, ರೈತನಿಗೆ ನೀರು ಸಿಗದಿದ್ದಾಗ ಸ್ಥಳೀಯರು ಚಳ್ಳಕೆರೆಗೋ ಬೆಂಗಳೂರಿಗೋ ಅಥವಾ ಮತ್ಯಾವುದೋ ತಾಲೂಕೋ ಅಥವಾ ಜಿಲ್ಲೆಗೋ ಹುಡುಕಿಕೊಂಡು ಹೋಗಲು ಸಾಧ್ಯವೇ? ನಮಗೆ ಸಿಗುವ, ನಮ್ಮವರೇ ಆದ, ನಮ್ಮ ಹಿರಿಯೂರಿನ ಮಣ್ಣಿನ ಗುಣ-ಲಕ್ಷಣ ಗೊತ್ತಿರುವ ನಾಯಕ ಬೇಕು" ಎನ್ನುವುದು ಜನರ ಭಾವುಕ ಆಗ್ರಹ.
ಮೂರೂ ಪಕ್ಷಗಳಲ್ಲಿ ತಾಲೂಕಿನಲ್ಲೇ ಹುಟ್ಟಿ, ಇಲ್ಲೇ ಬೆಳೆದು, ಜನರ ಕಷ್ಟ-ಸುಖಗಳಿಗೆ ಸ್ಪಂದಿಸುತ್ತಾ ಬಂದಿರುವ ಸಮರ್ಥ ಸ್ಥಳೀಯ ನಾಯಕರ ದಂಡೇ ಇದೆ. ಆದರೆ, ಹೈಕಮಾಂಡ್ ಮಟ್ಟದಲ್ಲಿ ನಡೆಯುವ ತಂತ್ರ-ಪ್ರತಿತಂತ್ರಗಳು ಈ ಸ್ಥಳೀಯ ಪ್ರತಿಭೆಗಳ ರೆಕ್ಕೆ ಕತ್ತರಿಸುತ್ತಿವೆ ಎಂಬ ಬೇಸರ ಎಲ್ಲರಲ್ಲಿದೆ.
ಸ್ವಾಭಿಮಾನದ ಅಲೆ ರಾಜಕೀಯ ಪಕ್ಷಗಳಿಗೆ ಎಚ್ಚರಿಕೆ
ಹಿರಿಯೂರಿನ ಪ್ರಜ್ಞಾವಂತ ಮತದಾರರು ಮತ್ತು ‘ಮುಕ್ತ ವಿಚಾರ ವೇದಿಕೆ’ಯಂತಹ ವೇದಿಕೆಗಳು ಈ ಬಾರಿ ಜಾಗೃತವಾಗಿವೆ. ಸ್ಥಳೀಯ ಅಭ್ಯರ್ಥಿಗಳಿಗೆ ಟಿಕೆಟ್ ನೀಡಬೇಕು ಎನ್ನುವ ಈ ಕೂಗು ದಿನದಿಂದ ದಿನಕ್ಕೆ ಬಲಿತು ‘ಸ್ವಾಭಿಮಾನದ ಅಲೆ’ಯಾಗಿ ಮಾರ್ಪಟ್ಟಿದೆ.
ಯಾವ ಪಕ್ಷ ಸ್ಥಳೀಯ ಜನಸಾಮಾನ್ಯರ, ಕಾರ್ಯಕರ್ತರ ಈ ಭಾವನೆಗೆ ಬೆಲೆ ಕೊಟ್ಟು, ಹಿರಿಯೂರಿನ ಮಣ್ಣಿನ ಮಗನಿಗೆ ಅಥವಾ ಮಗಳಿಗೆ ಟಿಕೆಟ್ ನೀಡುತ್ತದೆಯೋ, ಆ ಪಕ್ಷಕ್ಕೆ ಮತದಾರರು ಮೊದಲ ಆದ್ಯತೆ ನೀಡುವ ಮುನ್ಸೂಚನೆ ಸಿಗುತ್ತಿದೆ. ಇನ್ನಾದರೂ ಹೈಕಮಾಂಡ್ ನಾಯಕರು ಹಿರಿಯೂರನ್ನು ಕೇವಲ ಒಂದು ‘ಮತಗಳ ಬ್ಯಾಂಕ್’ ಎಂದು ತಿಳಿಯುವುದನ್ನು ಬಿಟ್ಟು, ಇಲ್ಲಿನ ಜನರ ಆತ್ಮಗೌರವಕ್ಕೆ ಮನ್ನಣೆ ನೀಡಬೇಕಿದೆ. ಹೊರಗಿನವರ ಅಬ್ಬರಕ್ಕೆ ಹಿರಿಯೂರಿನ ಸ್ವಾಭಿಮಾನ ಬಲಿಯಾಗಬಾರದು ಎನ್ನುವುದೇ ಈ ಉಪಚುನಾವಣೆಯ ಮಹತ್ವದ ಆಶಯ.



