ಚಂದ್ರವಳ್ಳಿ ನ್ಯೂಸ್, ಶಿರಾ:
ಈ ಹಿಂದೆ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರಿಗೆ ದಯಾಮರಣ ಕೋರಿ ಅರ್ಜಿಸಲ್ಲಿಸಿ ಗಮನ ಸೆಳೆದಿದ್ದ ಮಹಿಳೆಯೊಬ್ಬರು, ತನ್ನಿಬ್ಬರು ಎಳೆಯ ಮಕ್ಕಳೊಂದಿಗೆ ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ತುಮಕೂರು ಜಿಲ್ಲೆಯ ಶಿರಾ ನಗರದ ಹೊರವಲಯದಲ್ಲಿ ನಡೆದಿದೆ.
ರಾಬಿಯಾ ಪಾಷಾ (39) ಹಾಗೂ ಆಕೆಯ ಮಕ್ಕಳಾದ ತಮನ್ನಾ (9) ಮತ್ತು ಸಿಮ್ರಾನ್ (5) ಆತ್ಮಹತ್ಯೆ ಮಾಡಿಕೊಂಡ ದುರದೃಷ್ಟಕರ ಮೃತರು.
ನಿವೇಶನಕ್ಕಾಗಿ ಸುದೀರ್ಘ ಹೋರಾಟ ನಡೆಸಿದ್ದ ರಾಬಿಯಾ:
2025ರಲ್ಲಿ ತುಮಕೂರಿನಲ್ಲಿ ನಡೆದಿದ್ದ ಸರ್ಕಾರದ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಕಾರ್ಯಕ್ರಮದ ವೇಳೆ, ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರಾಬಿಯಾ ಮನವಿ ಸಲ್ಲಿಸಿ ನಿವೇಶನಕ್ಕಾಗಿ ಹೋರಾಟ ನಡೆಸಿದ್ದರು. ರಾಬಿಯಾ ಮನವಿಗೆ ಸ್ಪಂದಿಸಿದ್ದ ಸಿಎಂ, 20/30 ಅಳತೆಯ ನಿವೇಶನ ಮಂಜೂರು ಮಾಡುವಂತೆ ಸ್ಥಳದಲ್ಲೇ ಆದೇಶಿಸಿದ್ದರು.
ಆದರೆ, ಸಿಎಂ ಆದೇಶ ನೀಡಿ ಒಂದೂವರೆ ವರ್ಷ ಕಳೆದರೂ ಸ್ಥಳೀಯ ಅಧಿಕಾರಿಗಳು ನಿವೇಶನ ನೀಡದೆ ಸತಾಯಿಸುತ್ತಿದ್ದರು ಎನ್ನಲಾಗಿದೆ. ಇದರಿಂದ ತೀವ್ರ ಬೇಸತ್ತಿದ್ದ ರಾಬಿಯಾ, ಡಾ. ಜಿ. ಪರಮೇಶ್ವರ್ ನೇತೃತ್ವದಲ್ಲಿ ತುಮಕೂರಿನಲ್ಲಿ ನಡೆದಿದ್ದ 'ಜನಸ್ಪಂದನ' ಕಾರ್ಯಕ್ರಮದಲ್ಲಿ ಸಾರ್ವಜನಿಕವಾಗಿಯೇ ಆಕ್ರೋಶ ಹೊರಹಾಕಿದ್ದರು. ಸಿಎಂ ಆದೇಶಕ್ಕೂ ಬೆಲೆ ಸಿಗುತ್ತಿಲ್ಲವೆಂದು ಬೇಸತ್ತು, ಗೃಹ ಸಚಿವರಿಗೆ ದಯಾಮರಣ ಕೋರಿ ಮನವಿ ಸಲ್ಲಿಸಿ ಸುದ್ದಿಯಾಗಿದ್ದರು.
ಸರ್ಕಾರದಿಂದ ಜಾಗ ಸಿಕ್ಕರೂ ಮುಗಿಯದ ದುರಂತ:
ಆ ವೇಳೆ ಮಹಿಳೆಯನ್ನು ಕರೆಸಿ ಸಮಸ್ಯೆ ಆಲಿಸಿದ್ದ ಪರಮೇಶ್ವರ್ ಅವರು, ಶಿರಾ ನಗರದ ಹೊರವಲಯದಲ್ಲಿ ಸರ್ಕಾರದಿಂದ ನಿವೇಶನ ಒದಗಿಸಿ, ಮನೆ ನಿರ್ಮಿಸಿಕೊಡಲು ಕ್ರಮ ಕೈಗೊಂಡಿದ್ದರು. ಸರ್ಕಾರದಿಂದ ಜಾಗ ಸಿಕ್ಕು, ಮನೆ ನಿರ್ಮಾಣವಾಗುತ್ತಿದ್ದರೂ ಸಹ ಮಹಿಳೆ ಈ ರೀತಿ ಮಕ್ಕಳೊಂದಿಗೆ ಆತ್ಮಹತ್ಯೆಯಂತಹ ಭೀಕರ ನಿರ್ಧಾರ ಕೈಗೊಂಡಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಅಶೋಕ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶಿರಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆತ್ಮಹತ್ಯೆಗೆ ನಿಖರ ಕಾರಣ ಏನೆಂಬುದರ ಕುರಿತು ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.




