ಚಂದ್ರವಳ್ಳಿ ನ್ಯೂಸ್, ಚಿಕ್ಕಮಗಳೂರು:
ಕಾಫಿನಾಡು ಚಿಕ್ಕಮಗಳೂರು ಎಂದರೆ ಕೇವಲ ಪ್ರಕೃತಿ ಸೌಂದರ್ಯ ಮತ್ತು ಹಸಿರು ತೋಟಗಳಿಗೆ ಮಾತ್ರ ಪ್ರಸಿದ್ಧ ಎಂದುಕೊಂಡರೆ ಅದು ನಿಮ್ಮ ತಪ್ಪು! ಈಗ ವಾಣಿಜ್ಯ ನಗರಿ ಮುಂಬೈನ ಕ್ರೀಡಾ ಅಖಾಡದಲ್ಲಿ ಮಲೆನಾಡಿನ ಯುವಕನೊಬ್ಬ ಹೊಸ ಇತಿಹಾಸ ಬರೆದಿದ್ದಾನೆ. ರಾಷ್ಟ್ರಮಟ್ಟದ ಬಾಡಿ ಬಿಲ್ಡಿಂಗ್ ಸ್ಪರ್ಧೆಯಲ್ಲಿ ಎದುರಾಳಿಗಳಿಗೆ ಕಠಿಣ ಪೈಪೋಟಿ ನೀಡಿ ದೇಶದ ಗಮನ ಸೆಳೆದ ಆ ಪ್ರತಿಭೆಯೇ ರೇವಂತ್ ಪ್ರಸಾದ್.
ವಿದ್ಯಾಭ್ಯಾಸದ ಜೊತೆಯಲ್ಲೇ ಬಾಡಿ ಬಿಲ್ಡಿಂಗ್ ಸಾಧನೆ
20 ವರ್ಷದ ಈ ಯುವ ಸಾಧಕನ ಸಾಧನೆಯ ಹಿಂದೆ ರೋಚಕ ಮತ್ತು ಸ್ಪೂರ್ತಿದಾಯಕ ಕಥೆಯಿದೆ. ಪ್ರಸ್ತುತ ಬೆಂಗಳೂರಿನ ಪ್ರತಿಷ್ಠಿತ ಎಂ.ಎಸ್. ರಾಮಯ್ಯ ಕಾಲೇಜಿನಲ್ಲಿ ಬಿಬಿಎ ಹಾಗೂ ಎಲ್‌ಎಲ್‌ಬಿ ವ್ಯಾಸಂಗ ಮಾಡುತ್ತಿರುವ ರೇವಂತ್, ಓದಿನ ಜೊತೆ ಜೊತೆಯಲ್ಲೇ ಅತ್ಯಂತ ಕಠಿಣವಾದ ಬಾಡಿ ಬಿಲ್ಡಿಂಗ್ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿದ್ದರು.
ದಿನನಿತ್ಯದ ಕಠಿಣ ಅಭ್ಯಾಸ, ಕಟ್ಟುನಿಟ್ಟಿನ ಆಹಾರ ಪದ್ಧತಿ ಮತ್ತು ಅಪಾರ ಪರಿಶ್ರಮದ ಮೂಲಕ ತಮ್ಮ ದೇಹವನ್ನು ದಂಡಿಸಿರುವ ರೇವಂತ್ ಪ್ರಸಾದ್, ಈಗ ಮುಂಬೈನಲ್ಲಿ ನಡೆದ ರಾಷ್ಟ್ರೀಯ ಮಟ್ಟದ ವೇದಿಕೆಯಲ್ಲಿ ಮಲೆನಾಡು ಹಾಗೂ ಕರ್ನಾಟಕ ಹೆಮ್ಮೆ ಪಡುವಂತಹ ಸಾಧನೆ ಮಾಡಿದ್ದಾರೆ. ಓದಿನ ಒತ್ತಡದ ನಡುವೆಯೂ ಕ್ರೀಡಾ ಕ್ಷೇತ್ರದಲ್ಲಿ ಇವರು ತೋರಿರುವ ಈ ಸಾಧನೆ ಇಂದಿನ ಯುವ ಪೀಳಿಗೆಗೆ ಮಾದರಿಯಾಗಿದೆ.



