ಚಂದ್ರವಳ್ಳಿ ನ್ಯೂಸ್, ಮೂಡಿಗೆರೆ:
ಅತಿ ಸಣ್ಣ ಕಾರಣಕ್ಕೆ ಮನನೊಂದ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಮನಕಲಕುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ದೇವವೃಂದ ಗ್ರಾಮದಲ್ಲಿ ನಡೆದಿದೆ.
ಘಟನೆಯ ವಿವರ:
ದೇವವೃಂದ ಗ್ರಾಮದ ನಿವಾಸಿ ನಟೇಶ್ ಎಂಬುವವರ ಪುತ್ರಿ ಸೌಜನ್ಯ ಪೂಜಾರಿ (22) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ತಂದೆ ನಟೇಶ್ ಅವರು ಮನೆಯಲ್ಲಿ ತರಕಾರಿ ತಂದು ಸಾಂಬಾರ್ ಮಾಡಲು ಮಗಳಿಗೆ ತಿಳಿಸಿದ್ದರು. ಆದರೆ, ಮಧ್ಯಾಹ್ನದ ವೇಳೆ ನಟೇಶ್ ಊಟಕ್ಕೆ ಮನೆಗೆ ಬಂದಾಗ ಸೌಜನ್ಯ ಸಾಂಬಾರ್ ಮಾಡಿರಲಿಲ್ಲ ಎನ್ನಲಾಗಿದೆ.
ಈ ವಿಷಯವಾಗಿ ತಂದೆ ನಟೇಶ್ ಅವರು ಮಗಳಿಗೆ ಬೈದಿದ್ದಾರೆ. ಮಗಳು ಸಾಂಬಾರ್ ಮಾಡದ ಕಾರಣ ನಟೇಶ್ ಅವರು ಪಕ್ಕದ ಮನೆಯಿಂದ ಸಾಂಬಾರ್ ತರಲು ತೆರಳಿದ್ದಾರೆ. ಈ ವೇಳೆ ತಂದೆಯ ಮಾತಿನಿಂದ ತೀವ್ರವಾಗಿ ನೊಂದ ಸೌಜನ್ಯ, ಮನೆಯಲ್ಲಿ ಯಾರೂ ಇಲ್ಲದ ಸಮಯ ನೋಡಿ ನೇಣಿಗೆ ಶರಣಾಗಿದ್ದಾಳೆ.
ಪೊಲೀಸ್ ದೂರು:
ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಗೋಣಿಬೀಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. ಸಣ್ಣ ವಿಚಾರಕ್ಕೆ ತುಂಬು ಯೌವನದ ಯುವತಿ ಪ್ರಾಣ ಕಳೆದುಕೊಂಡಿರುವುದು ಗ್ರಾಮದಲ್ಲಿ ಶೋಕದ ಛಾಯೆ ಮೂಡಿಸಿದೆ.


