ಚಂದ್ರವಳ್ಳಿ ನ್ಯೂಸ್, ಕ್ಯಾದಿಗುಂಟೆ:
ಕ್ಯಾದಿಗುಂಟೆ ಗ್ರಾಮದ ಶ್ರೀ ವಿನಾಯಕ ಗೆಳೆಯರ ಬಳಗದ ವತಿಯಿಂದ ವಿನಾಯಕ ವಿಸರ್ಜನಾ ಕಾರ್ಯಕ್ರಮಕ್ಕೆ ಬದಲಾಗಿ ಸಮಾಜಮುಖಿ ಕೆಲಸ ಮಾಡುವ ಮೂಲಕ ಮಾದರಿಯಾಗಿದ್ದಾರೆ.
ಶ್ರೀ ವಿನಾಯಕನ ವಿಸರ್ಜನಾ ಕಾರ್ಯಕ್ರಮಕ್ಕಾಗಿ ಪಟಾಕಿಗಳನ್ನು ಸಿಡಿಸಲು ಸಿದ್ಧಪಡಿಸಿದ್ದ ರೂ. 15,000 ಹಣವನ್ನು ಪಟಾಕಿಗಳಿಗೆ ಖರ್ಚು ಮಾಡುವ ಬದಲು, ಆ ಹಣದಿಂದ ಸರ್ಕಾರಿ ಪ್ರಾಥಮಿಕ ಶಾಲೆಯ ಮಕ್ಕಳ ಶಿಕ್ಷಣಕ್ಕೆ ನೆರವಾಗಲು ಗೆಳೆಯರ ಬಳಗದಿಂದ ತೀರ್ಮಾನಿಸಲಾಯಿತು.
ಅದರಂತೆ ಈ ದಿನ ಕ್ಯಾದಿಗುಂಟೆ ಸರ್ಕಾರಿ ಪ್ರಾಥಮಿಕ ಪಾಠಶಾಲೆಯ ಮಕ್ಕಳಿಗೆ ನೋಟ್ ಪುಸ್ತಕ ಹಾಗೂ ಪೆನ್ನುಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿನ್ ಎನ್. ರವರು, "ಸಂಭ್ರಮಾಚರಣೆ ಕೇವಲ ಪಟಾಕಿ ಸಿಡಿಸುವುದಕ್ಕೆ ಮಾತ್ರ ಸೀಮಿತವಾಗಬಾರದು, ಬಡ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ನೆರವಾಗುವ ಮೂಲಕ ಆಚರಣೆ ಅರ್ಥಪೂರ್ಣವಾಗಬೇಕು" ಎಂಬ ಉದ್ದೇಶದಿಂದ ಈ ಕಾರ್ಯ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಈ ಸತ್ಕಾರ್ಯದ ಸಂದರ್ಭದಲ್ಲಿ ಶಾಲೆಯ ಶಿಕ್ಷಕ ವೃಂದದವರು ಉಪಸ್ಥಿತರಿದ್ದು, ಗೆಳೆಯರ ಬಳಗದ ಈ ಸಾಮಾಜಿಕ ಕಳಕಳಿಯ ಕೆಲಸವನ್ನು ಪ್ರಶಂಸಿಸಿದರು.




