ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ಜಿಲ್ಲಾ ಖಾದಿ ಪರಸ್ಪರ ಸಹಕಾರ ಸಂಘಕ್ಕೆ ಸೇರಿದ ಸುಮಾರು 5 ಕೋಟಿ ರೂಪಾಯಿ ಮೌಲ್ಯದ ವಾಣಿಜ್ಯೋಪಯೋಗಿ ಕಟ್ಟಡ ಮತ್ತು ಖಾಲಿ ನಿವೇಶನವನ್ನು ನಕಲಿ ದಾಖಲೆ ಸೃಷ್ಟಿಸಿ, ಕಡಿಮೆ ಬೆಲೆಗೆ ಅಕ್ರಮವಾಗಿ ನೋಂದಣಿ (ಕ್ರಯಪತ್ರ) ಮಾಡಿಕೊಳ್ಳುವ ಮೂಲಕ ಕೋಟ್ಯಂತರ ರೂಪಾಯಿ ವಂಚನೆ ಎಸಗಲಾಗಿದೆ ಎಂದು ಸಂಘದ ಸದಸ್ಯರಾದ ಎಸ್.ಕೆ. ಮಹಾಸ್ವಾಮಿ ಬಿನ್ ಕಣವಪ್ಪ ಮತ್ತು ಇತರೆ ಶೇರುದಾರರು ಗಂಭೀರ ಆರೋಪ ಮಾಡಿದ್ದಾರೆ.
ಈ ಕುರಿತು ಚಿತ್ರದುರ್ಗದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ವಂಚನೆಯ ಸಂಪೂರ್ಣ ವಿವರಗಳನ್ನು ಬಹಿರಂಗಪಡಿಸಲಾಗಿದ್ದು, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಲಾಗಿದೆ.
ಹಗರಣದ ಹಿನ್ನೆಲೆ ಮತ್ತು ಆರೋಪಗಳು:
ಆಸ್ತಿಯ ವಿವರ: ಚಿತ್ರದುರ್ಗ ತಾಲೂಕು, ಭರಮಸಾಗರ ಹೋಬಳಿಯ ಭರಮಸಾಗರ ಗ್ರಾಮದ ಹಳೆಯ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 4ರ ಪಕ್ಕದಲ್ಲಿರುವ, ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದ ಎದುರಿನ ಪಂಚಾಯಿತಿ ಖಾತೆ ನಂ. 759 ರಲ್ಲಿದ್ದ 1393.55 ಚದರ ಮೀಟರ್ ವಿಸ್ತೀರ್ಣದ ಜಾಗ ಹಾಗೂ ಅದರಲ್ಲಿರುವ 1000 ಚದರ ಮೀಟರ್ ವಿಸ್ತೀರ್ಣದ ವಾಣಿಜ್ಯ ಕಟ್ಟಡ ಈ ವಿವಾದಕ್ಕೆ ಒಳಗಾಗಿದೆ. ಇದರ ವಾಸ್ತವ ಮೌಲ್ಯ 5,00,00,000 ರೂ. (ಐದು ಕೋಟಿ) ಗಿಂತಲೂ ಹೆಚ್ಚಾಗಿದೆ.
ಅಕ್ರಮ ಹರಾಜು ಪ್ರಕ್ರಿಯೆ: 02.02.2023 ರಂದು ಈ ಸ್ವತ್ತಿಗೆ ಸಂಬಂಧಿಸಿದಂತೆ ನಡೆಸಲಾದ ಹರಾಜು ಪ್ರಕ್ರಿಯೆಯು ಕಾನೂನಾತ್ಮಕವಾಗಿ ನಡೆದಿಲ್ಲ ಎಂದು ಸಹಕಾರ ಸಂಘಗಳ ಉಪ ನಿಬಂಧಕರು ಈ ಹಿಂದೆಯೇ ಆದೇಶಿಸಿ, ಸದರಿ ಹರಾಜನ್ನು ರದ್ದುಪಡಿಸಿದ್ದರು.
ನಕಲಿ ದಾಖಲೆ ಮತ್ತು ಕಡಿಮೆ ಮೊತ್ತಕ್ಕೆ ನೋಂದಣಿ: ಹರಾಜು ಪ್ರಕ್ರಿಯೆ ರದ್ದಾಗಿದ್ದರೂ ಸಹ, ಒಳಸಂಚು ನಡೆಸಿ ವಾಣಿಜ್ಯೋಪಯೋಗಿ ಆಸ್ತಿಯನ್ನು ಕೇವಲ "ಖಾಲಿ ನಿವೇಶನ" ಎಂದು ಸುಳ್ಳು ದಾಖಲೆ ಸೃಷ್ಟಿಸಲಾಗಿದೆ. 5 ಕೋಟಿ ರೂ. ಮೌಲ್ಯದ ಈ ಆಸ್ತಿಯನ್ನು ಕೇವಲ 40,00,000 ರೂ. (ನಾಲ್ವತ್ತು ಲಕ್ಷ) ಗಳಿಗೆ ಭರಮಸಾಗರದ ಪ್ರಭಾವಿ ಕಾಂಗ್ರೆಸ್ ಮುಖಂಡರಾದ ಹೆಚ್.ಎನ್. ತಿಪ್ಪೇಸ್ವಾಮಿ ಬಿನ್ ಹೆಚ್.ಎನ್. ನಿಂಗಪ್ಪ ಎಂಬುವವರ ಹೆಸರಿಗೆ 25.10.2023 ರಂದು ಚಿತ್ರದುರ್ಗ ತಾಲೂಕು ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಕ್ರಯಪತ್ರ ರಿಜಿಸ್ಟರ್ ಮಾಡಿಕೊಡಲಾಗಿದೆ. ಇದರಿಂದ ಸರ್ಕಾರಕ್ಕೆ ಬರಬೇಕಾದ ಮುದ್ರೆ ಮತ್ತು ನೋಂದಣಿ ಶುಲ್ಕಕ್ಕೂ ಕೋಟ್ಯಂತರ ರೂಪಾಯಿ ವಂಚನೆಯಾಗಿದೆ.
ಶಾಮೀಲಾಗಿರುವ ಪ್ರಮುಖ ವ್ಯಕ್ತಿಗಳು:
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಎಸ್.ಕೆ ಮಹಾಸ್ವಾಮಿ, ಬಿ.ಎಸ್.ಕೆಂಚಪ್ಪ, ತಿಮ್ಮಣ್ಣ ಮತ್ತು ಪ್ರಕಾಶ್ ಇವರುಗಳು ನೀಡಿದ ವಿವರಗಳ ಪ್ರಕಾರ, ಈ ವಂಚನಾ ಜಾಲದಲ್ಲಿ ಕೆಲ ವ್ಯಕ್ತಿಗಳು ನೇರವಾಗಿ ಶಾಮೀಲಾಗಿದ್ದಾರೆ ಎಂದು ಆರೋಪಿಸಿದ್ದಾರೆ:
ಚಿತ್ರದುರ್ಗದ ಹಿಂದಿನ ಸಬ್ ರಿಜಿಸ್ಟ್ರಾರ್ ಶ್ರೀಮತಿ ತುಳಸಿ ಲಕ್ಷ್ಮಿ ಅವರ ಮಾರ್ಗದರ್ಶನ ಹಾಗೂ ಕರ್ತವ್ಯ ಲೋಪದಿಂದಲೇ ಈ ಅಕ್ರಮ ನೋಂದಣಿ ನಡೆದಿದೆ ಎಂದು ಅವರು ಆರೋಪಿಸಿದರು.
ಟಿ. ವೀರಣ್ಣ ಪಿ.ಡಿ.ಓ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಭರಮಸಾಗರ ಗ್ರಾಮ ಪಂಚಾಯಿತಿ ಅಕ್ರಮವಾಗಿ ಖಾತೆ ಬದಲಾವಣೆ ಹಾಗೂ ನಕಲಿ ದಾಖಲೆ ಸೃಷ್ಟಿಗೆ ಸಹಕರಿಸಿದ ಆರೋಪ.
ಚಿತ್ರದುರ್ಗ ಜಿಲ್ಲಾ ಖಾದಿ ಪರಸ್ಪರ ಸಹಕಾರ ಸಂಘದ ಅಧ್ಯಕ್ಷ ಮೋಕ್ಷಪ್ಪ ಬಿನ್ ಕಣವಪ್ಪ, ಹೆಚ್.ಎನ್. ತಿಪ್ಪೇಸ್ವಾಮಿ ಬಿನ್ ಹೆಚ್.ಎನ್. ನಿಂಗಪ್ಪ ಕ್ರಯದಾರರು / ಖರೀದಿ ಮಾಡಿದ ಪ್ರಭಾವಿ ವ್ಯಕ್ತಿಗಳಾಗಿದ್ದಾರೆ ಎಂದು ಅವರು ದೂರಿದ್ದಾರೆ.
ಕಾನೂನು ಕ್ರಮಕ್ಕೆ ಆಗ್ರಹ:
ಈ ಮಹಾ ವಂಚನೆಯು ಶೇರುದಾರರ ಗಮನಕ್ಕೆ ಬಂದ ತಕ್ಷಣ, ಸಹಕಾರ ಸಂಘಗಳ ಉಪ ನಿಬಂಧಕರು ಸಂಘದ ಅಧ್ಯಕ್ಷ ಹಾಗೂ ಕಾರ್ಯದರ್ಶಿಗೆ ನೋಟಿಸ್ ಜಾರಿ ಮಾಡಿದ್ದರು. ಅದಕ್ಕೆ ಉತ್ತರಿಸಿದ್ದ ಅಧ್ಯಕ್ಷ ಮೋಕ್ಷಪ್ಪ, "ನನಗೆ ತಿಳಿಯದಂತೆ ರಿಜಿಸ್ಟರ್ ಆಗಿರುತ್ತದೆ" ಎಂದು ಹಾರಿಕೆ ಉತ್ತರ ನೀಡಿ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಯತ್ನಿಸಿದ್ದಾರೆ ಎಂದು ದೂರಿದ್ದಾರೆ.
ಖಾದಿ ಸಂಘದ ಆಸ್ತಿಯನ್ನು ಉಳಿಸಲು ಮತ್ತು ಸರ್ಕಾರಕ್ಕೆ ವಂಚಿಸಿರುವ ಕಂದಾಯವನ್ನು ವಸೂಲಿ ಮಾಡಲು, ಮುಖ್ಯಮಂತ್ರಿಗಳ ಕಾರ್ಯಾಲಯ, ಮುದ್ರೆ ಮತ್ತು ನೋಂದಣಿ ಇಲಾಖೆಯ ಮಹಾ ಪರಿವೀಕ್ಷಕರು, ಸಹಕಾರ ಸಂಘಗಳ ಜಂಟಿ ಮತ್ತು ಉಪ ನಿಬಂಧಕರು ಹಾಗೂ ಚಿತ್ರದುರ್ಗ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ರಕ್ಷಣಾಧಿಕಾರಿಗಳು ತಕ್ಷಣವೇ ಮಧ್ಯಪ್ರವೇಶಿಸಬೇಕು. ತಪ್ಪಿತಸ್ಥ ಅಧಿಕಾರಿಗಳು ಹಾಗೂ ವ್ಯಕ್ತಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ (ವಂಚನೆ ಪ್ರಕರಣ) ದಾಖಲಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಜಂಟಿ ಸಹಿ ಉಳ್ಳ ಮನವಿಯ ಮೂಲಕ ಶೇರುದಾರರು ಹಾಗೂ ಸಾರ್ವಜನಿಕರು ಒತ್ತಾಯಿಸಿದ್ದಾರೆ.



