ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸ್ಯಾಂಡಲ್‌ವುಡ್ ನಟಿ ಕೃಷಿ ತಾಪಂಡ ಅವರು ವಾಸವಿರುವ ರಾಜರಾಜೇಶ್ವರಿ ನಗರದ (ಆರ್.ಆರ್. ನಗರ) 'ಎಲಿಗೇಟ್ ಅಪಾರ್ಟ್‌ಮೆಂಟ್'ನಲ್ಲಿ ಅವರ ಆಪ್ತ ಗೆಳೆಯ, ಉದ್ಯಮಿ ವೈಶಾಕ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರ ಅಂತ್ಯಕ್ರಿಯೆ ಗುರುವಾರ ಸಂಜೆ ಚಾಮರಾಜಪೇಟೆ ಚಿತಾಗಾರದಲ್ಲಿ ನೆರವೇರಿದೆ.
ಘಟನೆಗೆ ಸಂಬಂಧಿಸಿದಂತೆ ವೈಶಾಖ್ ಪತ್ನಿ ಮೇಘನಾ ಅವರು ನೀಡಿದ ದೂರಿನ ಮೇರೆಗೆ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ಚುರುಕುಗೊಳಿಸಿದ್ದಾರೆ.
ಘಟನೆ ನಡೆದ ದಿನ ಏನಾಯ್ತು? ಪೊಲೀಸರ ಮುಂದೆ ಕೃಷಿ ಹೇಳಿಕೆ:
ದುರಂತ ಸಂಭವಿಸಿದ ದಿನವೇ ನಟಿ ಕೃಷಿ ತಾಪಂಡ ಅವರಿಂದ ಪೊಲೀಸರು ಅಧಿಕೃತ ಹೇಳಿಕೆ ಪಡೆದಿದ್ದು, ಆ ವೇಳೆ ನಟಿ ಆ ರಾತ್ರಿ ನಡೆದ ಘಟನೆಯನ್ನು ವಿವರವಾಗಿ ಬಿಚ್ಚಿಟ್ಟಿದ್ದಾರೆ.
ಮನೆಯಲ್ಲಿ ಇರಲಿಲ್ಲ ನಟಿ: "ನಾನು ಕಳೆದ ಮೂರು ದಿನಗಳಿಂದ ವೈಯಕ್ತಿಕ ಕಾರಣಗಳಿಗಾಗಿ ಮನೆಯಲ್ಲಿ ಇರಲಿಲ್ಲ, ಕ್ಷೇಮವನಕ್ಕೆ ಹೋಗಿದ್ದೆ."
ಡ್ಯೂಪ್ಲಿಕೇಟ್ ಕೀ ಬಳಸಿ ಎಂಟ್ರಿ: "ಬುಧವಾರ ರಾತ್ರಿ ಸುಮಾರು 11 ಗಂಟೆಗೆ ಫ್ಲ್ಯಾಟ್‌ಗೆ ವಾಪಸ್ ಬಂದಾಗ ಬಾಗಿಲು ಒಳಗಿನಿಂದ ಲಾಕ್ ಆಗಿತ್ತು. ನಮ್ಮ ಫ್ಲಾಟ್‌ಗೆ ಒಟ್ಟು ಎರಡು ಕೀಗಳಿದ್ದವು. ಒಂದು ಕೀ ನನ್ನ ಬಳಿ, ಮತ್ತೊಂದು ವೈಶಾಖ್ ಬಳಿ ಇರುತ್ತಿತ್ತು. ನನ್ನಲ್ಲಿದ್ದ ಕೀ ಬಳಸಿ ಬಾಗಿಲು ತೆರೆದು ಒಳಗೆ ಹೋದೆ."
ಸೀರೆ ಕತ್ತರಿಸಿ ಮೃತದೇಹ ಕೆಳಗಿಳಿಸಿದ ನಟಿ: "ಬಾಗಿಲು ತೆರೆದು ಬೆಡ್‌ರೂಮ್‌ಗೆ ಹೋದಾಗ ವೈಶಾಖ್ ಫ್ಯಾನ್‌ಗೆ ನೇಣು ಬಿಗಿದುಕೊಂಡಿರುವುದು ಕಂಡುಬಂತು. ತಕ್ಷಣ ನಾನೇ ಸೀರೆಯನ್ನು ಕತ್ತರಿಸಿ ಮೃತದೇಹವನ್ನು ಕೆಳಗಿಳಿಸಿದೆ. ಆ ಬಳಿಕ ಪೊಲೀಸರಿಗೆ ಮತ್ತು ವೈಶಾಖ್ ಕುಟುಂಬಸ್ಥರಿಗೆ ತಕ್ಷಣ ಮಾಹಿತಿ ನೀಡಿದೆ" ಎಂದು ಕೃಷಿ ತಿಳಿಸಿದ್ದಾರೆ.
ನಟಿಯ ಮೊಬೈಲ್ ಪರಿಶೀಲಿಸಿದ ಪೊಲೀಸರು:
ತನಿಖೆಯ ಭಾಗವಾಗಿ ಆರ್‌ಆರ್ ನಗರ ಪೊಲೀಸರು ನಟಿ ಕೃಷಿ ತಾಪಂಡ ಅವರ ಮೊಬೈಲ್ ಫೋನ್ ಅನ್ನು ಕೂಲಂಕಷವಾಗಿ ಪರಿಶೀಲನೆ ನಡೆಸಿದ್ದಾರೆ.
ನಟಿಯ ಮೊಬೈಲ್‌ನಲ್ಲಿದ್ದ ಇತ್ತೀಚಿನ ಕರೆಗಳ ಪಟ್ಟಿ, ಮೆಸೇಜ್‌ಗಳು ಹಾಗೂ ವಾಟ್ಸಾಪ್ ಚಾಟ್‌ಗಳನ್ನು ಖಾಕಿ ಪಡೆ ಜಾಲಾಡಿದೆ. ಆದರೆ, ಪ್ರಾಥಮಿಕ ತನಿಖೆಯಲ್ಲಿ ಯಾವುದೇ ಅನುಮಾನಾಸ್ಪದ ಸಂದೇಶಗಳು ಅಥವಾ ಮಾಹಿತಿ ಪತ್ತೆಯಾಗದ ಹಿನ್ನೆಲೆಯಲ್ಲಿ, ನಟಿಯಿಂದ ಅಧಿಕೃತ ಹೇಳಿಕೆ ಬರೆಸಿಕೊಂಡು ಮೊಬೈಲ್ ಅನ್ನು ಅವರಿಗೆ ವಾಪಸ್ ನೀಡಿದ್ದಾರೆ.
ಉದ್ಯಮಿಯ ಆತ್ಮಹತ್ಯೆಗೆ ನಿಖರ ಕಾರಣವೇನು ಎಂಬ ನಿಟ್ಟಿನಲ್ಲಿ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.



