ಚಂದ್ರವಳ್ಳಿ ನ್ಯೂಸ್, ಕುಣಿಗಲ್:
ಕುಣಿಗಲ್ ತಾಲ್ಲೂಕಿನ ಹುಲಿಯೂರುದುರ್ಗದ ಎಸ್ಎಲ್ವಿ ಕಲ್ಯಾಣ ಮಂಟಪದಲ್ಲಿ ಜಿಲ್ಲಾ ಆಡಳಿತ ಮತ್ತು ಪ್ರಜಾ ಸೇವಾ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ 'ಪ್ರಜಾ ಸೇವಾ ಆಂದೋಲನ'ವನ್ನು ಕಂದಾಯ ಸಚಿವ ಡಾ. ಜಿ. ಪರಮೇಶ್ವರ್ ಉದ್ಘಾಟಿಸಿ, ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಿ ಅವರ ಸಮಸ್ಯೆಗಳನ್ನು ಆಲಿಸಿದರು.
ವಿವಿಧ ಹಳ್ಳಿಗಳಿಂದ ಆಗಮಿಸಿದ್ದ ಸಾರ್ವಜನಿಕರು ಪಿಂಚಣಿ, ವಸತಿ ಸೌಲಭ್ಯ, ರಸ್ತೆ, ಕುಡಿಯುವ ನೀರು, ವಿದ್ಯುತ್, ಆರೋಗ್ಯ, ಶಿಕ್ಷಣ ಹಾಗೂ ಇತರೆ ಸರ್ಕಾರಿ ಸೇವೆಗಳು ಮತ್ತು ಸೌಲಭ್ಯಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಸಚಿವರ ಗಮನಕ್ಕೆ ತಂದರು.
ಅರ್ಹರಿಗೆ ತ್ವರಿತ ಸ್ಪಂದನೆ ಹಾಗೂ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ: ಸಾರ್ವಜನಿಕರು ಸಲ್ಲಿಸುವ ಪ್ರತಿಯೊಂದು ಅರ್ತಿಗೂ ಸೂಕ್ತ ಸ್ಪಂದನೆ ಮತ್ತು ಪರಿಹಾರ ಸಿಗಬೇಕು. ಅರ್ಹ ಅರ್ಜಿಗಳನ್ನು ಆದ್ಯತೆಯ ಮೇರೆಗೆ ಪರಿಶೀಲಿಸಿ, ನಿಗದಿತ ಕಾಲಮಿತಿಯೊಳಗೆ ವಿಲೇವಾರಿ ಮಾಡಬೇಕು ಹಾಗೂ ದೀರ್ಘಕಾಲಿಕ ಸಮಸ್ಯೆಗಳ ಕುರಿತು ತುರ್ತು ಕ್ರಮ ಕೈಗೊಳ್ಳಬೇಕೆಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸಚಿವರು ಕಡಗಣನೆಗೆ ಅವಕಾಶವಿಲ್ಲದಂತೆ ಸೂಚನೆ ನೀಡಿದರು.
ಆಡಳಿತ ಜನಸ್ನೇಹಿಯಾಗಬೇಕು: ಸಾರ್ವಜನಿಕರು ತಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ಕಚೇರಿಯಿಂದ ಕಚೇರಿಗೆ ಅಲೆಯುವಂತಾಗಬಾರದು. ಆಡಳಿತವನ್ನು ಜನರ ಬಳಿಗೆ ಕೊಂಡೊಯ್ಯುವುದು, ನೇರವಾಗಿ ಅಹವಾಲು ಆಲಿಸಿ ಸಾಧ್ಯವಾದೆಡೆ ಸ್ಥಳದಲ್ಲೇ ಪರಿಹಾರ ನೀಡುವುದು ಈ ಆಂದೋಲನದ ಮುಖ್ಯ ಉದ್ದೇಶವಾಗಿದೆ ಎಂದರು.
ಅರ್ಹ ಫಲಾನುಭವಿಗಳಿಗೆ ಸೌಲಭ್ಯ: ಸರ್ಕಾರದ ಯೋಜನೆಗಳು ಮತ್ತು ಕಲ್ಯಾಣ ಸೌಲಭ್ಯಗಳು ಯಾವುದೇ ವಿಳಂಬವಿಲ್ಲದೆ ಅರ್ಹ ಫಲಾನುಭವಿಗಳಿಗೆ ತಲುಪಬೇಕು. ಯಾವುದೇ ಅರ್ಹ ವ್ಯಕ್ತಿ ಸರ್ಕಾರಿ ಬೆಂಬಲದಿಂದ ವಂಚಿತರಾಗಬಾರದು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಈ ಕಾರ್ಯಕ್ರಮದಲ್ಲಿ ಕುಣಿಗಲ್ ಶಾಸಕ ಡಾ. ಎಚ್.ಡಿ. ರಂಗನಾಥ್, ಜಿಲ್ಲಾಧಿಕಾರಿ ಶುಭಾ ಕಲ್ಯಾಣ್, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಶ್ವಿಜ, ತಹಶೀಲ್ದಾರ್ ಹಾಗೂ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.




