ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಆಫ್ರಿಕಾ ಚಿನ್ನದ ಗಣಿಗಾರಿಕೆ ಸಂಸ್ಥೆಯಲ್ಲಿ ತಮಗೆ ಶೇಕಡಾ 40ರಷ್ಟು ಪಾಲಿದೆ ಎಂದು ಜಾರಿ ನಿರ್ದೇಶನಾಲಯ ಆರೋಪಿಸಿರುವ ಹಿನ್ನೆಲೆಯಲ್ಲಿ, ತಮ್ಮ ಬಳಿ ದಾಖಲೆಗಳಿದ್ದರೆ ಇಡಿ ಅಧಿಕಾರಿಗಳು ಅದನ್ನು ಸಾಬೀತುಪಡಿಸಲಿ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಸವಾಲು ಹಾಕಿದ್ದಾರೆ.
ಬೆಂಗಳೂರಿನ ತಮ್ಮ ನಿವಾಸದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಆಫ್ರಿಕಾದ ಗಣಿಗಳಲ್ಲಿ ಷೇರು ಇದೆ ಎಂಬ ಬಗ್ಗೆ ಇಡಿ ಪ್ರೆಸ್ ನೋಟ್ನಲ್ಲಿ ಕೇವಲ ಶಂಕೆ ವ್ಯಕ್ತಪಡಿಸಲಾಗಿದೆ ವಿನಃ ಯಾವುದೇ ಅಂತಿಮ ನಿರ್ಧಾರಕ್ಕೆ ಬಂದಿಲ್ಲ ಎಂದರು.
"ನಮಗೆ ನೋಟಿಸ್ ನೀಡಲಿ, ಅವರ ದಾಖಲೆಗಳನ್ನು ಅವರು ಕೊಡಲಿ, ನಮ್ಮ ದಾಖಲೆಗಳನ್ನು ನಾವು ಕೊಡುತ್ತೇವೆ. ಎಲ್ಲದಕ್ಕೂ ಸೂಕ್ತ ಸ್ಪಷ್ಟೀಕರಣ ನೀಡುತ್ತೇವೆ" ಎಂದು ಸ್ಪಷ್ಟಪಡಿಸಿದರು.
ಪಿಡಬ್ಲ್ಯೂಡಿ ಇಲಾಖೆಯಲ್ಲಿ ಲಂಚ ಪಡೆದಿರುವ ಆರೋಪದ ಕುರಿತು ಪ್ರತಿಕ್ರಿಯಿಸಿ, ಅದೆಲ್ಲವೂ ಕೇವಲ ಶಂಕೆ ಎಂದು ಹೇಳಲಾಗಿದೆ. ಮೊದಲು ವಿಚಾರಣೆ ನಡೆಸಲಿ, ಆಮೇಲೆ ನೋಡೋಣ ಎಂದರು.
ಇಡಿಯ ಈ ಕ್ರಮ ರಾಜಕೀಯವಾಗಿ ಡ್ಯಾಮೇಜ್ ಮಾಡುವ ಉದ್ದೇಶ ಹೊಂದಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿ, "ಸಾಧಾರಣವಾಗಿ ಇದರಿಂದ ಡ್ಯಾಮೇಜ್ ಆಗುತ್ತದೆ. ಆದರೆ ಇಡಿಗಿಂತ ಮೊದಲು ನಮಗೆ ಪಬ್ಲಿಕ್ ನ್ಯಾಯಾಲಯವೇ ಮುಖ್ಯ" ಎಂದರು.
ಇಡಿಗೆ ದೂರು ಕೊಟ್ಟವರು ಯಾರು ಎಂಬುದು ತಮಗೆ ಗೊತ್ತಿದೆ ಎಂದು ತಿಳಿಸಿದ ಸಚಿವರು, ವಿಜಯ್ ಮಲ್ಯ ತಮ್ಮನ್ನು ಬೆಂಬಲಿಸಿ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ವಿಚಾರಕ್ಕೆ "ಅವರಿಗೆ ಥ್ಯಾಂಕ್ಸ್" ಎಂದು ಪ್ರತಿಕ್ರಿಯಿಸಿದರು.
ಟಾರ್ಗೆಟ್ ರಾಜಕಾರಣವಾಗಬಾರದು - ಯು.ಟಿ. ಖಾದರ್:
ಧಾರವಾಡದಲ್ಲಿ ಈ ಕುರಿತು ಪ್ರತಿಕ್ರಿಯಿಸಿರುವ ಆರೋಗ್ಯ ಸಚಿವ ಯು.ಟಿ. ಖಾದರ್, ಸಚಿವ ಸತೀಶ್ ಜಾರಕಿಹೊಳಿ ಮೇಲಿನ ಇಡಿ ದಾಳಿ ವಿಚಾರವಾಗಿ ಮಾತನಾಡಿ, ಸಣ್ಣ ಸಮುದಾಯದಿಂದ ಬಂದು ದೊಡ್ಡ ಸ್ಥಾನಕ್ಕೇರಿದ ಸತೀಶ್ ಜಾರಕಿಹೊಳಿ ಅವರನ್ನು ಯಾಕೆ ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಪ್ರಶ್ನಿಸಿದರು.
ಟಾರ್ಗೆಟ್ ರಾಜಕಾರಣ ಯಾಕೆ ಮಾಡುತ್ತಾರೆ ಎಂಬುದನ್ನು ನಾಯಕರು ಆತ್ಮಾವಲೋಕನ ಮಾಡಿಕೊಳ್ಳಬೇಕು. ಶೇಕಡಾ 88ರಷ್ಟು ಕಾಂಗ್ರೆಸ್ ನಾಯಕರೆ ಟಾರ್ಗೆಟ್ ಆಗುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಆರೋಗ್ಯ ಇಲಾಖೆ ಹಾಗೂ ಆಹಾರ ಸುರಕ್ಷತೆ ಕುರಿತು ಖಾದರ್ ಪ್ರಮುಖ ಘೋಷಣೆಗಳು:
ಆಸ್ಪತ್ರೆಗಳ ಅಭಿವೃದ್ಧಿ: ಧಾರವಾಡ ಜಿಲ್ಲಾಸ್ಪತ್ರೆಯಲ್ಲಿ ರೋಗಿಗಳ ಒತ್ತಡ ಹೆಚ್ಚಿರುವ ಕಾರಣ ಸಾಮರ್ಥ್ಯ ಹೆಚ್ಚಿಸಲು ಒಂದು ಸಾವಿರ ಬೆಡ್ಗಳ ಆಸ್ಪತ್ರೆ ನಿರ್ಮಿಸುವ ಯೋಜನೆ ರೂಪಿಸಲಾಗಿದೆ.
ಕಲಬೆರಕೆ ಆಹಾರ ತಡೆ: ಹೋಟೆಲ್ಗಳಲ್ಲಿ ಜನರಿಗೆ ಮೋಸ ಮಾಡುವುದನ್ನು ತಡೆಯಲು ಮೇಲ್ಮಟ್ಟದಿಂದ ಕೆಳಗಿನವರೆಗೆ ತಪಾಸಣೆ ಆರಂಭಿಸಲಾಗಿದೆ. ಪ್ರತಿ ಜನನಿಬಿಡ ಪ್ರದೇಶದಲ್ಲೂ ಈ ಬಗ್ಗೆ ಜಾಗೃತಿ ಮೂಡಿಸಲಾಗುವುದು.
ನಕಲಿ ವೈದ್ಯರ ಹಾವಳಿ: ನಕಲಿ ವೈದ್ಯರ ಬಗ್ಗೆ ಮಾಹಿತಿ ಸಿಕ್ಕರೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ದಾಳಿ ವೇಳೆ ನಕಲಿ ವೈದ್ಯರು ಸಿಕ್ಕರೆ, ಜಿಲ್ಲಾ ಆರೋಗ್ಯ ಅಧಿಕಾರಿಯ ಗಮನಕ್ಕೆ ಬಾರದೆ ಇದು ನಡೆಯಲು ಸಾಧ್ಯವಿಲ್ಲದ ಕಾರಣ ನೇರವಾಗಿ ಡಿಎಚ್ಒ ಮೇಲೆಯೂ ಕ್ರಮ ಜರುಗಿಸಲಾಗುವುದು ಎಂದು ಖಾದರ್ ಎಚ್ಚರಿಕೆ ನೀಡಿದರು.
ತಂಬಾಕು ನಿಷೇಧ ಗೊಂದಲ: ಪಾನ್ ಮಸಾಲ್ನಲ್ಲಿ ನಿಕೋಟಿನ್ ಅಥವಾ ಇತರೆ ನಿಷೇಧಿತ ವಸ್ತುಗಳು ಮಿಶ್ರಣವಾಗಿದ್ದರೆ ಮಾತ್ರ ಕಾನೂನು ಕ್ರಮ ಜರುಗಿಸಲಾಗುತ್ತದೆ. ಗುಣಮಟ್ಟದ ಅಡಿಕೆ ಹಾಗೂ ಸಾಂಪ್ರದಾಯಿಕ ಮಸಾಲೆ ಪದಾರ್ಥಗಳಿಗೆ ಯಾವುದೇ ತೊಂದರೆಯಿಲ್ಲ ಎಂದು ಸ್ಪಷ್ಟಪಡಿಸಿದರು.




