ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯದ ಹಲವು ಭಾಗಗಳಲ್ಲಿ ಮುಂದುವರಿದಿರುವ ಒಣ ಹವಾಮಾನ ಮತ್ತು ಮಳೆಯಿಲ್ಲದ ವಾತಾವರಣವನ್ನು ಗಂಭೀರವಾಗಿ ಪರಿಗಣಿಸಿರುವ ಕರ್ನಾಟಕ ಸರ್ಕಾರ, ಗುರುವಾರ ಹೊಸದಾಗಿ 23 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿದೆ. ಇದರೊಂದಿಗೆ ರಾಜ್ಯದಲ್ಲಿ ಒಟ್ಟು ಬರಪೀಡಿತ ತಾಲೂಕುಗಳ ಸಂಖ್ಯೆ 124ಕ್ಕೆ ತಲುಪಿದೆ.
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರ ನಡೆಸಿದ ಸಮಗ್ರ ವೈಜ್ಞಾನಿಕ ಮೌಲ್ಯಮಾಪನ ಮತ್ತು ಸ್ಥಳ ಪರಿಶೀಲನೆ ವರದಿಯ ಆಧಾರದ ಮೇಲೆ, ಕಂದಾಯ ಇಲಾಖೆಯ ವಿಪತ್ತು ನಿರ್ವಹಣಾ ವಿಭಾಗವು ಈ ಆದೇಶ ಹೊರಡಿಸಿದೆ.
ಈ ಘೋಷಣೆಯು ತಕ್ಷಣದಿಂದಲೇ ಜಾರಿಗೆ ಬಂದಿದ್ದು, ಮುಂದಿನ 6 ತಿಂಗಳವರೆಗೆ ಚಾಲ್ತಿಯಲ್ಲಿರಲಿದೆ.
ಎರಡನೇ ಹಂತದ ಘೋಷಣೆ: ಮೊದಲ ಹಂತದಲ್ಲಿ ಆಗಸ್ಟ್ 27ರಂದು ಖಾರಿಫ್ ಹಂಗಾಮಿನ ಹಿನ್ನೆಲೆಯಲ್ಲಿ 101 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿತ್ತು. ಸಚಿವ ಸಂಪುಟ ಉಪ-ಸಮಿತಿಯ ನಿರ್ದೇಶನದಂತೆ ಈಗ ಹೆಚ್ಚುವರಿಯಾಗಿ 23 ತಾಲೂಕುಗಳನ್ನು ಸೇರಿಸಲಾಗಿದೆ.
ತೀವ್ರ ಹಾಗೂ ಮಧ್ಯಮ ಬರ ವರ್ಗೀಕರಣ: ಹೊಸದಾಗಿ ಘೋಷಿಸಲಾದ 23 ತಾಲೂಕುಗಳ ಪೈಕಿ 21 ತಾಲೂಕುಗಳನ್ನು ತೀವ್ರ ಬರಪೀಡಿತ ಹಾಗೂ 2 ತಾಲೂಕುಗಳನ್ನು ಮಧ್ಯಮ ಬರಪೀಡಿತ ಎಂದು ವರ್ಗೀಕರಿಸಲಾಗಿದೆ.
ಯಾವೆಲ್ಲಾ ತಾಲೂಕುಗಳು ಬರಪೀಡಿತ?:
ತೀವ್ರ ಬರಪೀಡಿತ ತಾಲೂಕುಗಳು: ತಿಪಟೂರು (ತುಮಕೂರು), ಕಾರಟಗಿ (ಕೊಪ್ಪಳ), ಮಾನವಿ, ಸಿಂಧನೂರು, ಸಿರ್ವಾರ (ರಾಯಚೂರು), ಅಫಜಲಪುರ, ಆಳಂದ, ಚಿತ್ತಾಪುರ, ಕಲಬುರಗಿ, ಯಡ್ರಾಮಿ, ಶಹಾಬಾದ್ (ಕಲಬುರಗಿ), ಭಾಲ್ಕಿ (ಬೀದರ್), ಬಸವನ ಬಾಗೇವಾಡಿ, ಬಬಲೇಶ್ವರ, ತಿಕೋಟಾ (ವಿಜಯಪುರ), ರಟ್ಟಿಹಳ್ಳಿ (ಹಾವೇರಿ), ಹುಬ್ಬಳ್ಳಿ, ನವಲಗುಂದ, ಹುಬ್ಬಳ್ಳಿ ನಗರ, ಅಣ್ಣಿಗೇರಿ (ಧಾರವಾಡ) ಹಾಗೂ ಕಡೂರು (ಚಿಕ್ಕಮಗಳೂರು).
ಮಧ್ಯಮ ಬರಪೀಡಿತ ತಾಲೂಕುಗಳು: ಕೊಡಗು ಜಿಲ್ಲೆಯ ಪೊನ್ನಂಪೇಟೆ ಮತ್ತು ವಿರಾಜಪೇಟೆ ತಾಲೂಕುಗಳು.
ಅಧಿಕಾರಿಗಳಿಗೆ ನಿರ್ದೇಶನ: ರಾಜ್ಯ ವಿಪತ್ತು ಪರಿಹಾರ ನಿಧಿಯ ಮಾರ್ಗಸೂಚಿಯಡಿ ಅಗತ್ಯ ತುರ್ತು ಪರಿಹಾರ ಕಾರ್ಯಗಳನ್ನು ಕೈಗೊಳ್ಳಲು ಆಯಾ ಜಿಲ್ಲಾಧಿಕಾರಿಗಳಿಗೆ ಅಧಿಕಾರ ನೀಡಲಾಗಿದೆ. ಅಲ್ಲದೆ, ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳು ಜಂಟಿಯಾಗಿ ಬೆಳೆ ನಷ್ಟದ ಸಮೀಕ್ಷೆ ನಡೆಸಿ ಶೀಘ್ರ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ.
ಸೆಪ್ಟೆಂಬರ್ ತಿಂಗಳಿನಲ್ಲೂ ವಾಡಿಕೆಗಿಂತ ಕಡಿಮೆ ಮಳೆಯಾಗುವ ಮುನ್ಸೂಚನೆ ಇರುವುದರಿಂದ ಕೆಎಸ್‌ಎನ್‌ಡಿಎಂಸಿ ಪ್ರತಿ ವಾರ ಬರ ಪರಿಸ್ಥಿತಿಯನ್ನು ಕೂಲಂಕಷವಾಗಿ ಪರಿಶೀಲಿಸಲಿದ್ದು, ಅರ್ಹತೆಯ ಆಧಾರದ ಮೇಲೆ ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಇತರ ತಾಲೂಕುಗಳನ್ನೂ ಬರಪೀಡಿತವೆಂದು ಘೋಷಿಸಲಾಗುವುದು ಎಂದು ಸರ್ಕಾರ ತಿಳಿಸಿದೆ.




