ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕಾಂಗ್ರೆಸ್ ಸರ್ಕಾರದ ಸಾಲು ಸಾಲು ಹಗರಣಗಳು, ರೈತರ ಮೇಲಿನ ನಿರ್ಲಕ್ಷ್ಯ ಹಾಗೂ ಯುವಕರ ಭವಿಷ್ಯದ ಜೊತೆಗಿನ ಆಟದ ವಿರುದ್ಧ ಬಿಜೆಪಿ ಹಮ್ಮಿಕೊಂಡಿರುವ ‘ಬಳ್ಳಾರಿ ಚಲೋ’ ಪಾದಯಾತ್ರೆಯು ಹಳೇದರೋಜಿಯಿಂದ ಕುಡುತಿನಿವರೆಗೆ ತಲುಪಿದ್ದು, ಈ ವೇಳೆ ಬಿಜೆಪಿ ನಾಯಕ ಸಿ.ಟಿ. ರವಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಅಕ್ರಮ ಪ್ರಕರಣದಲ್ಲಿ ಕೇವಲ ಒಬ್ಬರ ರಾಜೀನಾಮೆ ಪಡೆದರೆ ಸಾಲದು, ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವ ಸರ್ಕಾರದ ಎಲ್ಲ 'ವಿಕೆಟ್ಗಳು' ಬೀಳಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಬಾಕಿ ಹಣದ ಲೆಕ್ಕ ಕೇಳಿದ ನಾಯಕರು: ಗೃಹಲಕ್ಷ್ಮಿ ಯೋಜನೆಯ 3 ತಿಂಗಳ ಬಾಕಿ ಹಣ ಎಲ್ಲಿ ಹೋಯಿತು ಎಂಬುದಕ್ಕೆ ರಾಜ್ಯ ಸರ್ಕಾರ ಸಾರ್ವಜನಿಕರಿಗೆ ಸ್ಪಷ್ಟ ಲೆಕ್ಕ ನೀಡಬೇಕು ಎಂದು ಸಿ.ಟಿ. ರವಿ ಒತ್ತಾಯಿಸಿದರು.
ವಿವಿಧ ಹಗರಣ, ಜನವಿರೋಧಿ ನೀತಿಗಳ ವಿರುದ್ಧ ಸಮರ: ಕೆಪಿಎಸ್ಸಿ ನೇಮಕಾತಿಯಲ್ಲಿ ಪ್ರಾಮಾಣಿಕ ಅಭ್ಯರ್ಥಿಗಳಿಗೆ ಆಗಿರುವ ಅನ್ಯಾಯ, ಬರ ಪರಿಹಾರ ನೀಡದೆ ರೈತರನ್ನು ಕೈಬಿಟ್ಟ ಧೋರಣೆ ಹಾಗೂ ಬಿಜೆಪಿ ಸರ್ಕಾರ ಹೆಚ್ಚಿಸಿದ್ದ ಎಸ್ಸಿ/ಎಸ್ಟಿ ಮೀಸಲಾತಿಯನ್ನು ಕಡಿತಗೊಳಿಸಿದ ಸರ್ಕಾರದ ಜನವಿರೋಧಿ ನೀತಿಯ ವಿರುದ್ಧ ನಮ್ಮ ಹೋರಾಟ ನಿರಂತರವಾಗಿರುತ್ತದೆ ಎಂದು ಎಚ್ಚರಿಸಿದರು.
ಪ್ರಮುಖ ಮುಖಂಡರ ಭಾಗಿ: ಪಾದಯಾತ್ರೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಮಾಜಿ ಉಪಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ, ಮಾಜಿ ಸಚಿವರಾದ ಶ್ರೀರಾಮುಲು, ಎನ್. ಮಹೇಶ್, ಕರುಣಾಕರ ರೆಡ್ಡಿ, ಎಂ.ಪಿ. ರೇಣುಕಾಚಾರ್ಯ, ಶಾಸಕರಾದ ಬಾಲಚಂದ್ರ ಜಾರಕಿಹೊಳಿ, ಬಿ.ಎನ್. ಚಂದ್ರಪ್ಪ, ಶರಣು ಸಲಗರ, ಎಂ. ಕೃಷ್ಣಪ್ಪ, ವಿಧಾನ ಪರಿಷತ್ ಸದಸ್ಯ ನವೀನ್, ಮಾಜಿ ಸಂಸದ ಮುನಿಸ್ವಾಮಿ, ಮಾಜಿ ಶಾಸಕ ರಾಜೂಗೌಡ ಸೇರಿದಂತೆ ಹಲವು ಹಿರಿಯ ನಾಯಕರು ಹಾಗೂ ಸಾವಿರಾರು ಕಾರ್ಯಕರ್ತರು ಹೆಜ್ಜೆ ಹಾಕಿದರು.




