ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಪ್ರೀತಿಯ ಹೆಸರಿನಲ್ಲಿ ಯುವತಿಯೊಬ್ಬಳನ್ನು ನಂಬಿಸಿ ಕರೆತಂದು, ಪ್ರಿಯಕರನೇ ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ರಾಜಧಾನಿಯ ಮಹಾಲಕ್ಷ್ಮಿ ಲೇಔಟ್‌ನಲ್ಲಿ ಭಾನುವಾರ ರಾತ್ರಿ ನಡೆದಿದೆ. ಮದುವೆ ನಿರಾಕರಿಸಿದಳು ಎಂಬ ಒಂದೇ ಕಾರಣಕ್ಕೆ 23 ವರ್ಷದ ಅಂಜಲಿ ಎಂಬಾಕೆಯನ್ನು ಆಕೆಯ ಪ್ರಿಯಕರ ರಾಜೀವ್ ಕುತ್ತಿಗೆಗೆ ಇರಿದು ಹತ್ಯೆ ಮಾಡಿದ್ದಾನೆ.
ಊಟಕ್ಕೆಂದು ಕರೆದು ಜೀವ ತೆಗೆದ ಕಿರಾತಕ!:
ಪೊಲೀಸ್ ಮೂಲಗಳ ಪ್ರಕಾರ, ಅಂಜಲಿ ಮತ್ತು ಆರೋಪಿ ರಾಜೀವ್ ಒಂದೇ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದು, ಕಳೆದ 3-4 ವರ್ಷಗಳಿಂದ ಪ್ರೀತಿಸುತ್ತಿದ್ದರು. ಇವರ ಪ್ರೇಮದ ವಿಚಾರ ಎರಡು ಕುಟುಂಬಗಳಿಗೂ ತಿಳಿದಿತ್ತು. ಆದರೆ, ರಾಜೀವ್ ಅಪರಾಧ ಹಿನ್ನೆಲೆ ಹೊಂದಿದ್ದರಿಂದ ಅಂಜಲಿ ಪೋಷಕರು ಈ ಮದುವೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು.
ಮನೆಯವರ ನಿರ್ಧಾರಕ್ಕೆ ಗೌರವ ಕೊಟ್ಟ ಅಂಜಲಿ, ಇತ್ತೀಚೆಗೆ ರಾಜೀವ್‌ನಿಂದ ದೂರವಿರಲು ಪ್ರಯತ್ನಿಸುತ್ತಿದ್ದಳು. ಇದರಿಂದ ಕೆರಳಿದ್ದ ರಾಜೀವ್, ಮದುವೆಯಾಗುವಂತೆ ನಿರಂತರವಾಗಿ ಒತ್ತಾಯಿಸುತ್ತಿದ್ದ. ಭಾನುವಾರ ರಾತ್ರಿ 9:30ರ ಸುಮಾರಿಗೆ ಮಹಾಲಕ್ಷ್ಮಿ ಲೇಔಟ್‌ನ ಪೈಪ್ ಲೈನ್ ರಸ್ತೆಗೆ ಅಂಜಲಿಯನ್ನು ಊಟದ ನೆಪದಲ್ಲಿ ಕರೆಸಿಕೊಂಡಿದ್ದ ರಾಜೀವ್, ಮತ್ತೆ ಮದುವೆ ಪ್ರಸ್ತಾಪ ಎತ್ತಿದ್ದಾನೆ. ಅಂಜಲಿ ನಿರಾಕರಿಸುತ್ತಿದ್ದಂತೆ ಇಬ್ಬರ ನಡುವೆ ಜೋರು ಗಲಾಟೆಯಾಗಿದ್ದು, ಆಕ್ರೋಶಗೊಂಡ ರಾಜೀವ್ ತಾನು ತಂದಿದ್ದ ಚಾಕುವಿನಿಂದ ಅಂಜಲಿಯ ಕುತ್ತಿಗೆಗೆ ಮನಬಂದಂತೆ ಇರಿದಿದ್ದಾನೆ.
ಚಿಕಿತ್ಸೆ ಫಲಕಾರಿಯಾಗದ ಸಾವು: ರಕ್ತದ ಮಡುವಿನಲ್ಲಿ ಬಿದ್ದಿದ್ದ ಅಂಜಲಿಯನ್ನು ಸ್ಥಳೀಯರು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದರಾದರೂ, ತೀವ್ರ ರಕ್ತಸ್ರಾವದಿಂದಾಗಿ ಆಕೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾಳೆ.
ಆಸ್ಪತ್ರೆಗೆ ಶವ ರವಾನೆ: ಸದ್ಯ ಯುವತಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಎಂ.ಎಸ್. ರಾಮಯ್ಯ ಆಸ್ಪತ್ರೆಗೆ ರವಾನಿಸಲಾಗಿದೆ.
ಕೆಲವೇ ನಿಮಿಷಗಳಲ್ಲಿ ಆರೋಪಿ ಅರೆಸ್ಟ್: ಘಟನೆ ನಡೆದ ತಕ್ಷಣ ಕಾರ್ಯಪ್ರವೃತ್ತರಾದ ಮಹಾಲಕ್ಷ್ಮಿ ಲೇಔಟ್ ಪೊಲೀಸರು, ಸ್ಥಳಕ್ಕೆ ಧಾವಿಸಿ ಕೃತ್ಯ ಎಸಗಿ ಪರಾರಿಯಾಗಲು ಯತ್ನಿಸುತ್ತಿದ್ದ ಆರೋಪಿ ರಾಜೀವ್‌ನನ್ನು ಕೆಲವೇ ನಿಮಿಷಗಳಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪೊಲೀಸ್ ತನಿಖೆ ತೀವ್ರ:
ಕೃತ್ಯಕ್ಕೆ ಬಳಸಲಾದ ಆಯುಧವನ್ನು ವಶಪಡಿಸಿಕೊಳ್ಳಲಾಗಿದ್ದು, ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ. ಬಂಧಿತ ಆರೋಪಿ ರಾಜೀವ್‌ನನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.



