ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ತಾಲೂಕು ವ್ಯವಸಾಯೋತ್ಪನ್ನಗಳ ಮಾರಾಟ ಸಹಕಾರ ಸಂಘದ (TAPCMS) ವಿರುದ್ಧ ನೀಡಿರುವ ದೂರಿಗೆ ಸಂಬಂಧಿಸಿದಂತೆ ತಕ್ಷಣವೇ ಸೂಕ್ತ ಕಾನೂನು ಕ್ರಮ ಕೈಗೊಂಡು, ಸಂಘದ ಆಡಳಿತ ಮಂಡಳಿಯನ್ನು ವಜಾಗೊಳಿಸುವಂತೆ ಒತ್ತಾಯಿಸಿ ಹಿರಿಯೂರಿನ ನಿವಾಸಿ ಧ್ರುವ ಕುಮಾರ್ ಎಂ.ಸಿ. ಅವರು ಚಿತ್ರದುರ್ಗದ ಸಹಕಾರ ಸಂಘಗಳ ಉಪನಿಬಂಧಕರಿಗೆ ಪತ್ರ ಬರೆದಿದ್ದಾರೆ.
ದೂರಿನ ಹಿನ್ನೆಲೆ:
ಧ್ರುವ ಕುಮಾರ್ ಅವರು ತಾಲೂಕು ವ್ಯವಸಾಯೋತ್ಪನ್ನಗಳ ಮಾರಾಟ ಸಹಕಾರ ಸಂಘದ ವಿರುದ್ಧ 2025ರ ಏಪ್ರಿಲ್ 5 ರಂದೇ ಉಪನಿಬಂಧಕರ ಕಚೇರಿಗೆ ಅಧಿಕೃತ ದೂರು ಸಲ್ಲಿಸಿದ್ದರು.
ಈ ದೂರಿನ ಅನ್ವಯ ಉಪನಿಬಂಧಕರ ಕಚೇರಿಯು 2025ರ ಸೆಪ್ಟೆಂಬರ್ 24 ರಂದು ಸಂಘದ ಅಧ್ಯಕ್ಷರಿಗೆ ಅಂತಿಮ ತಿಳುವಳಿಕೆ ಪತ್ರವನ್ನು ರವಾನಿಸಿತ್ತು. ಈ ಪತ್ರದಲ್ಲಿ, ನೋಟಿಸ್ ತಲುಪಿದ 7 ದಿನಗಳ ಒಳಗಾಗಿ ಸೂಕ್ತ ಕ್ರಮ ಕೈಗೊಳ್ಳಬೇಕು, ತಪ್ಪಿದಲ್ಲಿ ಸಹಕಾರ ಸಂಘಗಳ ಕಾಯ್ದೆ 1959ರ ಕಲಂ 29 ಸಿ ಅಡಿಯಲ್ಲಿ ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಲಾಗಿತ್ತು.
ಅಧಿಕಾರಿಗಳ ವಿಳಂಬ ನೀತಿಗೆ ಅಸಮಾಧಾನ:
ಅಂತಿಮ ತಿಳುವಳಿಕೆ ಪತ್ರ ನೀಡಿ ಸುಮಾರು 7 ತಿಂಗಳಿಗೂ ಹೆಚ್ಚು ಕಾಲ ಕಳೆದಿದ್ದರೂ ಸಹಕಾರ ಸಂಘವು ಯಾವುದೇ ಕ್ರಮ ಕೈಗೊಂಡಿಲ್ಲ ಮತ್ತು ಉಪನಿಬಂಧಕರೂ ಸಹ ಈವರೆಗೆ ಯಾವುದೇ ಮುಂದಿನ ಶಿಸ್ತು ಕ್ರಮ ಜರುಗಿಸಿಲ್ಲ ಎಂದು ಧ್ರುವ ಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಕುರಿತು ಹಲವು ಬಾರಿ ಕಚೇರಿಗೆ ಖುದ್ದಾಗಿ ಭೇಟಿ ನೀಡಿ ಮೌಖಿಕವಾಗಿ ಪ್ರತ್ಯುತ್ತರ ಕೋರಿದರೂ ಅಧಿಕಾರಿಗಳಿಂದ ಸೂಕ್ತ ಸ್ಪಂದನೆ ಸಿಕ್ಕಿರಲಿಲ್ಲ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಇತ್ತೀಚೆಗೆ ಮೇ 19, 2026 ರಂದು ದೂರುದಾರರು ಕಚೇರಿಗೆ ಭೇಟಿ ನೀಡಿದಾಗ, ಅಧಿಕಾರಿಗಳು ಎರಡು ದಿನಗಳ ಒಳಗಾಗಿ ಪ್ರತ್ಯುತ್ತರ ನೀಡುವುದಾಗಿ ಹಾಗೂ ಅಂತಿಮ ತಿಳುವಳಿಕೆ ಪತ್ರದ ಜೆರಾಕ್ಸ್ ಪ್ರತಿಯನ್ನು ನೀಡಿ ಶಿಸ್ತು ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರು.
ಆಡಳಿತ ಮಂಡಳಿ ವಜಾಕ್ಕೆ ಮನವಿ:
ಅಧಿಕಾರಿಗಳು ನೀಡಿದ್ದ ಗಡುವು ಮುಗಿದ ಹಿನ್ನೆಲೆಯಲ್ಲಿ ಮೇ 21 ರಂದು ಮತ್ತೊಮ್ಮೆ ಪತ್ರ ಬರೆದಿರುವ ದೂರುದಾರರು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಳಂಬ ಮಾಡದೆ ಅಗತ್ಯ ಶಿಸ್ತು ಕ್ರಮ ಜರುಗಿಸಿ ತಕ್ಷಣವೇ ಸಂಘದ ಆಡಳಿತ ಮಂಡಳಿಯನ್ನು ವಜಾಗೊಳಿಸಬೇಕು ಮತ್ತು ತಮ್ಮ ಮೂಲ ದೂರಿಗೆ ತ್ವರಿತವಾಗಿ ಲಿಖಿತ ಪ್ರತ್ಯುತ್ತರ ನೀಡಬೇಕು ಎಂದು ಸಹಕಾರ ಸಂಘಗಳ ಉಪನಿಬಂಧಕರಲ್ಲಿ ಸಂಘದ ಸದಸ್ಯರಾದ ಓಂಕಾರಪ್ಪ, ಸಿರಿಯಪ್ಪ, ಶಿವಪ್ರಸಾದ್ ಗೌಡ, ಧ್ರುವ ಕುಮಾರ್ ಅವರುಗಳು ಮನವಿ ಮಾಡಿದ್ದಾರೆ.



