ಚಂದ್ರವಳ್ಳಿ ನ್ಯೂಸ್, ನವದೆಹಲಿ:
ಭಾರತೀಯ ರಾಷ್ಟ್ರೀಯ ಖನಿಜ ಅಭಿವೃದ್ಧಿ ನಿಗಮದ ಕಾರ್ಮಿಕರ ಮತ್ತು ಕಾರ್ಯನಿರ್ವಾಹಕರೇತರ ನೌಕರರ ಶ್ರಮವನ್ನು ಗುರುತಿಸುವ ನಿಟ್ಟಿನಲ್ಲಿ 2022-2026ರ ಅವಧಿಗೆ ವೇತನ ಪರಿಷ್ಕರಣೆಗೆ ಅನುಮೋದನೆ ನೀಡಲಾಗಿದೆ ಎಂದು ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವ ಹೆಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.
ಪರಿಷ್ಕೃತ ವೇತನ ಶ್ರೇಣಿಯ ಪ್ರಕಾರ, ಎಲ್ಲಾ ದರ್ಜೆಯ ನೌಕರರ ಕನಿಷ್ಠ ಮೂಲ ವೇತನವನ್ನು 18,100–23,500 ರಿಂದ 26,950–35,000 ಕ್ಕೆ ಏರಿಸಲಾಗಿದ್ದು, ಶೇಕಡಾ 49 ರಷ್ಟು ಗಣನೀಯ ಹೆಚ್ಚಳವಾಗಿದೆ. ಅಲ್ಲದೆ, ಗರಿಷ್ಠ ವೇತನ ಶ್ರೇಣಿಯನ್ನು 31,850–41,320 ರಿಂದ 65,640–85,190 ಕ್ಕೆ ಹೆಚ್ಚಿಸಲಾಗಿದ್ದು, ಇದು ದುಪ್ಪಟ್ಟಿಗಿಂತಲೂ ಅಧಿಕವಾಗಿದೆ.
ಈ ನೂತನ ಪರಿಷ್ಕರಣೆಯು ಶೇ. 100 ರಷ್ಟು ಕ್ಷೇಮಾಭಿವೃದ್ಧಿ ಭತ್ಯೆ ಹಾಗೂ ಶೇ. 15 ರಷ್ಟು ಕನಿಷ್ಠ ಗ್ಯಾರಂಟಿ ಸೌಲಭ್ಯವನ್ನು ಒಳಗೊಂಡಿದೆ. ಭಾರತದ ಖನಿಜ ಭದ್ರತೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಕಾರ್ಮಿಕರ ಕಲ್ಯಾಣ ಮತ್ತು ಗೌರವಕ್ಕೆ ನಮ್ಮ ಸರ್ಕಾರ ಬದ್ಧವಾಗಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ 'ವಿಕಸಿತ ಭಾರತ'ದ ಕನಸನ್ನು ನನಸು ಮಾಡಲು ಶ್ರಮಿಸುತ್ತಿರುವ ಭಾರತದ ಶ್ರಮಶಕ್ತಿಯನ್ನು ಬಲಪಡಿಸಲು ನಾವು ಸದಾ ಶ್ರಮಿಸುತ್ತೇವೆ. ಎನ್‌ಎಂಡಿಸಿಯ ಎಲ್ಲಾ ನೌಕರರಿಗೆ ಹಾಗೂ ಅವರ ಕುಟುಂಬದವರಿಗೆ ನನ್ನ ಶುಭ ಹಾರೈಕೆಗಳು ಎಂದು ಕುಮಾರಸ್ವಾಮಿ ಅವರು ತಿಳಿಸಿದ್ದಾರೆ.



