ಚಂದ್ರವಳ್ಳಿ ನ್ಯೂಸ್, ಹಿರಿಯೂರು:
"ಮುಂಬರುವ ಹಿರಿಯೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ನಾನು ನಿಸ್ಸಂದೇಹವಾಗಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದು ಖಚಿತ" ಎಂದು ಸಾಮಾಜಿಕ ಹೋರಾಟಗಾರ ಕೆ.ಪಿ. ಶ್ರೀನಿವಾಸ್ ಅಧಿಕೃತವಾಗಿ ಪ್ರಕಟಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಸಚಿವ ಡಿ. ಸುಧಾಕರ್ ಅವರ ಅಕಾಲಿಕ ಮರಣದಿಂದ ತೆರವಾಗಿರುವ ಹಿರಿಯೂರು ವಿಧಾನಸಭಾ ಕ್ಷೇತ್ರಕ್ಕೆ ತಾವು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿರುವುದಾಗಿ ಸ್ಪಷ್ಟಪಡಿಸಿದ್ದಾರೆ.
20 ವರ್ಷಗಳ ಜನಸೇವೆ, ಹೋರಾಟದ ಹಿನ್ನೆಲೆ:
ಕಳೆದ 20 ವರ್ಷಗಳಿಗೂ ಹೆಚ್ಚು ಕಾಲದಿಂದ ತಾಲ್ಲೂಕಿನ ಜನರ ಮಧ್ಯೆಯೇ ಇದ್ದು ಸಾರ್ವಜನಿಕ ಸೇವೆ ಮಾಡಿದ್ದೇನೆ. ಹಲವು ಪ್ರಗತಿಪರ ಸಂಘಟನೆಗಳ ಜೊತೆ ಗುರುತಿಸಿಕೊಂಡು, ನೂರಾರು ಜನಪರ ಹೋರಾಟಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದೇನೆ. ತಾಲ್ಲೂಕಿನ ಪ್ರತಿಯೊಂದು ಹಳ್ಳಿಯಲ್ಲೂ ಜನರೊಂದಿಗೆ ನಿರಂತರ ಸಂಪರ್ಕ ಹೊಂದಿದ್ದು, ಪ್ರತಿಯೊಬ್ಬರಿಗೂ ಚಿರಪರಿಚಿತನಾಗಿದ್ದೇನೆ ಎಂದು ಕೆ.ಪಿ. ಶ್ರೀನಿವಾಸ್ ತಿಳಿಸಿದ್ದಾರೆ.
ಒಳ ಮೀಸಲಾತಿ ದ್ರೋಹಕ್ಕೆ ಪ್ರತ್ಯುತ್ತರ:
ಮಾದಿಗ ಸಮುದಾಯಕ್ಕೆ ಒಳ ಮೀಸಲಾತಿ ಅನುಷ್ಠಾನಗೊಳಿಸುವ ವಿಚಾರದಲ್ಲಿ ಹಾಲಿ ಕಾಂಗ್ರೆಸ್ ಸರ್ಕಾರ ದೊಡ್ಡ ದ್ರೋಹ ಎಸಗಿದೆ. ಈ ರಾಜಕೀಯ ದ್ರೋಹಕ್ಕೆ ಚುನಾವಣೆಯ ಮೂಲಕವೇ ತಕ್ಕ ಪ್ರತ್ಯುತ್ತರ ನೀಡಬೇಕಾದ ಅನಿವಾರ್ಯತೆ ಇದೆ. ತಾಲ್ಲೂಕಿನ ಸಮಗ್ರ ಅಭಿವೃದ್ಧಿ ಹಾಗೂ ಸಾಮಾಜಿಕ ನ್ಯಾಯದ ನೈಜ ಪರಿಕಲ್ಪನೆಯನ್ನು ಇಟ್ಟುಕೊಂಡು ತಾವು ಚುನಾವಣಾ ಅಖಾಡಕ್ಕೆ ಇಳಿಯುತ್ತಿರುವುದಾಗಿ ಅವರು ಹೇಳಿದ್ದಾರೆ.
ಆಸೆ-ಆಮಿಷಗಳಿಗೆ ಬಗ್ಗಲ್ಲ:
"ಅನ್ಯರ ಯಾವುದೇ ರೀತಿಯ ಆಸೆ ಅಥವಾ ಆಮಿಷಗಳು ನನ್ನನ್ನು ಈ ಸ್ಪರ್ಧೆಯಿಂದ ಹಿಂದೆ ಸರಿಸಲು ಸಾಧ್ಯವಿಲ್ಲ. ಒಂದು ನಿಖರವಾದ ಗುರಿಯನ್ನು ಇಟ್ಟುಕೊಂಡು ನಾನು ಈ ಚುನಾವಣಾ ಅಂಗಳಕ್ಕೆ ಬಂದಿದ್ದೇನೆ. ನನಗೆ ಸೋಲು-ಗೆಲುವಿನ ಯಾವುದೇ ಆತಂಕವಿಲ್ಲ. ಚುನಾವಣೆಯಲ್ಲಿ ಸ್ಪರ್ಧಿಸುವುದು ಶತಃಸಿದ್ಧ". ಕೆ.ಪಿ. ಶ್ರೀನಿವಾಸ್, ಸಾಮಾಜಿಕ ಹೋರಾಟಗಾರ.
ತಾಲ್ಲೂಕಿನಾದ್ಯಂತ ಸಾಮಾಜಿಕ ಹೋರಾಟಗಳ ಮೂಲಕ ಜನಪರವಾಗಿ ಶ್ರಮಿಸಿರುವ ನನ್ನ ಮೇಲೆ ಈ ಬಾರಿ ಹಿರಿಯೂರು ತಾಲ್ಲೂಕಿನ ಸಮಸ್ತ ಜನತೆಯ ಆಶೀರ್ವಾದ ಇದ್ದೇ ಇರುತ್ತದೆ ಎಂಬ ದೃಢ ವಿಶ್ವಾಸವನ್ನು ಕೆ.ಪಿ. ಶ್ರೀನಿವಾಸ್ ವ್ಯಕ್ತಪಡಿಸಿದ್ದಾರೆ.



