ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯ ರಾಜಕೀಯದ ಮಹತ್ವದ ಬೆಳವಣಿಗೆಯಲ್ಲಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಅಧಿಕೃತವಾಗಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನೂತನ ನಾಯಕನಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸಿದ್ದರಾಮಯ್ಯ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಈಗ 'ಕನಕಪುರ ಬಂಡೆ' ಖ್ಯಾತಿಯ ಡಿ.ಕೆ. ಶಿವಕುಮಾರ್ ಅವರು ರಾಜ್ಯದ 25ನೇ ಮುಖ್ಯಮಂತ್ರಿಯಾಗಿ ಸಾರಥ್ಯ ವಹಿಸಿಕೊಳ್ಳುವುದು ದೃಢಪಟ್ಟಿದೆ.
ಶನಿವಾರ ಸಂಜೆ ವಿಧಾನಸೌಧದಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಹಿರಿಯ ನಾಯಕರು ಹಾಗೂ ವೀಕ್ಷಕರ ಸಭೆಯಲ್ಲಿ ಡಿ.ಕೆ. ಶಿವಕುಮಾರ್ ಅವರನ್ನು ಶಾಸಕಾಂಗ ಪಕ್ಷದ ನಾಯಕನನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಜೂನ್ 3 ರಂದು ಮುಹೂರ್ತ ನಿಗದಿ:
ಎಲ್ಲಾ ಕುತೂಹಲಗಳಿಗೆ ತೆರೆ ಎಳೆದಿರುವ ಡಿ.ಕೆ. ಶಿವಕುಮಾರ್, ಮುಂಬರುವ ಜೂನ್ 3ರ ಬುಧವಾರದಂದು ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಜೂನ್ 3 ರಂದು ಸಂಜೆ 5:15 ಕ್ಕೆ ರಾಜಭವನದ ಗ್ಲಾಸ್ ಹೌಸ್‌ನಲ್ಲಿ (ಲೋಕಭವನ) ಈ ಅಧಿಕಾರ ಸ್ವೀಕಾರ ಸಮಾರಂಭ ನಡೆಯಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಸುದ್ದಿಗೋಷ್ಠಿಯ ಮುಖ್ಯಾಂಶಗಳು:
ಈ ಐತಿಹಾಸಿಕ ಬದಲಾವಣೆಯ ಬೆನ್ನಲ್ಲೇ ಕೆಪಿಸಿಸಿ ಕಾರ್ಯಾಧ್ಯಕ್ಷ ಜಿ.ಸಿ. ಚಂದ್ರಶೇಖರ್ ಅವರು ಜಂಟಿ ಸುದ್ದಿಗೋಷ್ಠಿ ನಡೆಸಿ ಸಮಾರಂಭದ ರೂಪರೇಷೆಗಳನ್ನು ಹಂಚಿಕೊಂಡಿದ್ದಾರೆ.
ಸರಳತೆಗೆ ಆದ್ಯತೆ: ಇದೇ ಮೊದಲ ಬಾರಿಗೆ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿ ಪೀಠ ಅಲಂಕರಿಸುತ್ತಿದ್ದರೂ, ಹೈಕಮಾಂಡ್ ಸೂಚನೆಯಂತೆ ಯಾವುದೇ ರೀತಿಯ ಆಡಂಬರವಿಲ್ಲದೆ ಅತ್ಯಂತ ಸರಳವಾಗಿ ಕಾರ್ಯಕ್ರಮ ಆಯೋಜಿಸಲಾಗಿದೆ.
ಸಾರ್ವಜನಿಕರಿಗೆ ನಿರ್ಬಂಧ: ಭದ್ರತೆ ಹಾಗೂ ಇಂಧನ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮಕ್ಕೆ ಸಾರ್ವಜನಿಕರಿಗೆ ಮತ್ತು ಕಾರ್ಯಕರ್ತರಿಗೆ ಪಾಸ್‌ಗಳನ್ನು ವಿತರಿಸುತ್ತಿಲ್ಲ. ರಾಜಭವನದ ಒಳಗೆ ಕೇವಲ ಆಹ್ವಾನಿತರಿಗೆ ಮಾತ್ರ ಅವಕಾಶವಿರಲಿದೆ.
ಬೆಂಗಳೂರಿಗೆ ಬರಬೇಡಿ: ರಾಜ್ಯದ ವಿವಿಧ ಮೂಲೆಗಳಿಂದ ಜನರನ್ನು ಕರೆತರಲು ಮೊದಲು ಹಮ್ಮಿಕೊಂಡಿದ್ದ 10,000 ದಿಂದ 15,000 ಬಸ್‌ಗಳ ಬುಕಿಂಗ್ ಅನ್ನು ಸಾರಿಗೆ ದಟ್ಟಣೆ ಹಾಗೂ ಇಂಧನ ಬಿಕ್ಕಟ್ಟಿನ ಕಾರಣದಿಂದ ರದ್ದುಗೊಳಿಸಲಾಗಿದೆ. ಆದ್ದರಿಂದ ಅಭಿಮಾನಿಗಳು ಯಾರೂ ಬೆಂಗಳೂರಿಗೆ ಬರಬಾರದು ಎಂದು ವಿನಂತಿಸಲಾಗಿದೆ.
ಮುಂದಿನ ನಡೆ: ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ತಕ್ಷಣವೇ ಡಿ.ಕೆ. ಶಿವಕುಮಾರ್ ಅವರು ಜನರ ಆಶೀರ್ವಾದ ಪಡೆಯಲು ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಿಗೆ ಅಧಿಕೃತ ಪ್ರವಾಸ ಕೈಗೊಳ್ಳಲಿದ್ದಾರೆ ಎಂದು ಚಂದ್ರಶೇಖರ್ ಪ್ರಕಟಿಸಿದ್ದಾರೆ. ನೂತನ ಸಿಎಂ ಜೊತೆಗೆ ಮೊದಲ ಹಂತದಲ್ಲಿ 8 ರಿಂದ 10 ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆಯಿದೆ.



