ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ತಾಲೂಕಿನ ದೊಡ್ಡತುಮಕೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೆಜ್ಜೆಗದ ಪಾಳ್ಯದಲ್ಲಿ ಸಾರ್ವಜನಿಕರಿಗೆ ಹಾಗೂ ವಾಹನ ಸವಾರರಿಗೆ ಸಂಪರ್ಕ ಕಲ್ಪಿಸುವ ಅಧಿಕೃತ ಪಿಡಬ್ಲ್ಯೂಡಿ ರಸ್ತೆಗೆ ಅಡ್ಡಲಾಗಿ ಸಿಮೆಂಟ್ ಇಟ್ಟಿಗೆಗಳಿಂದ ಗೋಡೆ ನಿರ್ಮಿಸಿ, ಸಾರ್ವಜನಿಕ ರಸ್ತೆಯನ್ನು ಒತ್ತುವರಿ ಮಾಡಿಕೊಳ್ಳಲು ಯತ್ನಿಸಿದ ಘಟನೆ ನಡೆದಿದೆ.
ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷ ನಾರಾಯಣಸ್ವಾಮಿ ಎಂಬುವವರೇ ಈ ಕೃತ್ಯವೆಸಗಿದ್ದಾರೆಂದು ಆರೋಪಿಸಲಾಗಿದ್ದು, ಅವರ ವಿರುದ್ಧ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗೆಜ್ಜೆಗದ ಪಾಳ್ಯದ ಮುಖ್ಯ ರಸ್ತೆಯಲ್ಲಿ ಯಾರೂ ಊಹಿಸದ ರೀತಿಯಲ್ಲಿ ನಾರಾಯಣಸ್ವಾಮಿ ಅವರು ಸಿಮೆಂಟ್ ಇಟ್ಟಿಗೆಗಳನ್ನು ಬಳಸಿ ನಡುರಸ್ತೆಯಲ್ಲೇ ಅಡ್ಡಗೋಡೆ ಕಟ್ಟಲು ಮುಂದಾಗಿದ್ದರು. ಇದರಿಂದಾಗಿ ಗ್ರಾಮದ ಸಾರ್ವಜನಿಕರಿಗೆ ಮತ್ತು ವಾಹನಗಳ ಸಂಚಾರಕ್ಕೆ ತೀವ್ರ ತೊಂದರೆಯಾಗಿದ್ದು, ದೈನಂದಿನ ಓಡಾಟಕ್ಕೆ ದೊಡ್ಡ ಮಟ್ಟದ ತಡೆ ಉಂಟಾಗಿತ್ತು.
ರಸ್ತೆ ಒತ್ತುವರಿ ಹಾಗೂ ಅಡ್ಡಗೋಡೆ ನಿರ್ಮಾಣದ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ, ಸ್ಥಳೀಯ ಪಿಡಿಒ, ಗ್ರಾಮ ಆಧಿಕಾರಿ ಹಾಗೂ ಪೊಲೀಸ್ ಸಿಬ್ಬಂದಿ ಕೂಡಲೇ ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದರು. ಅಧಿಕಾರಿಗಳು ಸ್ಥಳಕ್ಕೆ ಆಗಮಿಸುತ್ತಿದ್ದಂತೆ ಎಚ್ಚೆತ್ತುಕೊಂಡ ಮಾಜಿ ಗ್ರಾ.ಪಂ ಅಧ್ಯಕ್ಷ ನಾರಾಯಣಸ್ವಾಮಿ ರಸ್ತೆಗೆ ಅಡ್ಡಗೋಡೆ ಕಟ್ಟುವ ಅಕ್ರಮ ಕಾಮಗಾರಿಯನ್ನು ತಕ್ಷಣವೇ ನಿಲ್ಲಿಸಿದ್ದಾರೆ. ಸಾರ್ವಜನಿಕ ರಸ್ತೆಯನ್ನು ಒತ್ತುವರಿ ಮಾಡಲು ಮುಂದಾದವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.




