ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲೊಂದಾದ ಉಚಿತ ವಿದ್ಯುತ್ ನೀಡುವ ‘ಗೃಹ ಜ್ಯೋತಿ’ ಯೋಜನೆಯ ಫಲಾನುಭವಿಗಳಿಗೆ ಮಹತ್ವದ ಸುದ್ದಿಯೊಂದು ಇಲ್ಲಿದೆ. ಯೋಜನೆಯ ಪಾರದರ್ಶಕತೆ ಕಾಯ್ದುಕೊಳ್ಳುವ ಸಲುವಾಗಿ, ರಾಜ್ಯದಾದ್ಯಂತ ಫಲಾನುಭವಿಗಳ ಮನೆ-ಮನೆ ಪರಿಶೀಲನಾ ಕಾರ್ಯವು ಜುಲೈ 1 ಆರಂಭವಾಗಲಿದೆ.
2023ರ ಜುಲೈನಲ್ಲಿ ಜಾರಿಗೆ ಬಂದ ಈ ಯೋಜನೆಯ ಪುನರ್ ಪರಿಶೀಲನೆಗಾಗಿ ವಿದ್ಯುತ್ ಸರಬರಾಜು ಕಂಪನಿಗಳ ಮೀಟರ್ ರೀಡರ್‌ಗಳು ಹಾಗೂ ಸಿಬ್ಬಂದಿ ನಿಮ್ಮ ಮನೆ ಬಾಗಿಲಿಗೆ ಬರಲಿದ್ದಾರೆ.
ಸ್ಥಳದಲ್ಲೇ ಆಪ್ ಮೂಲಕ ಮಾಹಿತಿ ಸಂಗ್ರಹ
ಎಸ್ಕಾಂ ಸಿಬ್ಬಂದಿಗಳು ಮನೆಗಳಿಗೆ ಭೇಟಿ ನೀಡಿ, ಫಲಾನುಭವಿಗಳ ದಾಖಲೆಗಳನ್ನು ಭೌತಿಕವಾಗಿ ಪರಿಶೀಲಿಸಲಿದ್ದಾರೆ. ಬಳಿಕ ವಿಶೇಷ ಮೊಬೈಲ್ ಆಪ್ ಹಾಗೂ ಸ್ವಯಂ ಘೋಷಣಾ ಪತ್ರದ ಮೂಲಕ ಸ್ಥಳದಲ್ಲೇ ಅರ್ಜಿ ಭರ್ತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಿದ್ದಾರೆ. ಇಂಧನ ಇಲಾಖೆಯ ಪ್ರಕಾರ, ಯೋಜನೆಯ ಅರ್ಹತೆಯನ್ನು ಖಚಿತಪಡಿಸಿಕೊಳ್ಳಲು ಮೀಟರ್ ರೀಡರ್ ಮೂಲಕ ಸ್ಥಳದಲ್ಲೇ ಪರಿಶೀಲನೆ ಮಾಡುವುದು ಒಂದೇ ಮಾರ್ಗವಾಗಿದೆ.
ಸಾರ್ವಜನಿಕರು ಸಿದ್ಧವಾಗಿಟ್ಟುಕೊಳ್ಳಬೇಕಾದ ದಾಖಲೆಗಳು:
ಸಿಬ್ಬಂದಿ ಮನೆಗೆ ಭೇಟಿ ನೀಡಿದಾಗ ಪರಿಶೀಲನೆಗಾಗಿ ಈ ಕೆಳಗಿನ ದಾಖಲೆಗಳನ್ನು ತೋರಿಸಲು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಸಾರ್ವಜನಿಕರಲ್ಲಿ ವಿನಂತಿಸಿದೆ.
ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ (ವೋಟರ್ ಐಡಿ), ರೇಷನ್ ಕಾರ್ಡ್ (ಪಡಿತರ ಚೀಟಿ), ಫಲಾನುಭವಿಯ ಪಾಸ್ ಪೋರ್ಟ್ ಅಳತೆಯ ಭಾವಚಿತ್ರ, ಪ್ಯಾನ್ ಕಾರ್ಡ್, ಜಾತಿ ಪ್ರಮಾಣ ಪತ್ರ, ಬಾಡಿಗೆ ಒಪ್ಪಂದದ ಪತ್ರ (ಬಾಡಿಗೆದಾರರಿಗೆ ಮಾತ್ರ ಅನ್ವಯ).
ರಾಜ್ಯದ 5 ಎಸ್ಕಾಂ ವ್ಯಾಪ್ತಿಯಲ್ಲಿ ತಪಾಸಣೆ
ಕರ್ನಾಟಕದ ಎಲ್ಲಾ ಐದು ವಿದ್ಯುತ್ ಸರಬರಾಜು ಕಂಪನಿಗಳ ವ್ಯಾಪ್ತಿಯಲ್ಲಿ ಈ ಬೃಹತ್ ಪರಿಶೀಲನಾ ಕಾರ್ಯ ಏಕಕಾಲಕ್ಕೆ ನಡೆಯಲಿದೆ.
ಬೆಸ್ಕಾಂ (BESCOM) - ಬೆಂಗಳೂರು ವ್ಯಾಪ್ತಿ, ಹೆಸ್ಕಾಂ (HESCOM) - ಹುಬ್ಬಳ್ಳಿ ವ್ಯಾಪ್ತಿ, ಮೆಸ್ಕಾಂ (MESCOM) - ಮಂಗಳೂರು ವ್ಯಾಪ್ತಿ, ಜೆಸ್ಕಾಂ (GESCOM) - ಕಲಬುರಗಿ ವ್ಯಾಪ್ತಿ, ಸೆಸ್ಕ್ (CESC) - ಮೈಸೂರು ವ್ಯಾಪ್ತಿ.
ಇಂಧನ ಇಲಾಖೆಯ ಮನವಿ: ಇದು ಸರ್ಕಾರದ ನಿಯಮಿತ ಪರಿಶೀಲನಾ ಪ್ರಕ್ರಿಯೆಯಾಗಿದ್ದು, ಸಾರ್ವಜನಿಕರು ಮತ್ತು ಗೃಹ ಜ್ಯೋತಿ ಯೋಜನೆಯ ಫಲಾನುಭವಿಗಳು ತಮ್ಮ ಮನೆಗೆ ಬರುವ ಮೀಟರ್ ರೀಡರ್‌ಗಳಿಗೆ ಸಂಪೂರ್ಣ ಸಹಕಾರ ನೀಡಿ, ಪ್ರಕ್ರಿಯೆಯನ್ನು ಸುಗಮವಾಗಿ ಪೂರ್ಣಗೊಳಿಸಲು ನೆರವಾಗಬೇಕು ಎಂದು ಇಲಾಖೆ ಕೋರಿದೆ.



