ಚಂದ್ರವಳ್ಳಿ ನ್ಯೂಸ್, ಧರ್ಮಪುರ:
ಕೇಂದ್ರ ಸಚಿವ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರ ವಿರುದ್ಧ ವಿನಾಕಾರಣ ಟೀಕೆ ಮಾಡುತ್ತಿರುವ ಶಾಸಕ ಬಾಲಕೃಷ್ಣ ಅವರಿಗೆ ಈ ಭಾಗದಲ್ಲಿ ಯಾವುದೇ ಅಸ್ತಿತ್ವವಿಲ್ಲ ಎಂದು ಬಿಜೆಪಿ ಹಾಗೂ ಎನ್‌ಡಿಎ ಮುಖಂಡ, ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ದ್ಯಾಮೇಗೌಡ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಅವರು, ಕಾಂಗ್ರೆಸ್ ನಾಯಕರು ಹಾಗೂ ಬಾಲಕೃಷ್ಣ ಅವರ ವಿರುದ್ಧ ಅವರು ವಾಗ್ದಾಳಿ ನಡೆಸಿ, ಆದಿವಾಸಿ ದ್ರಾವಿಡ ಮೂಲ ನಿವಾಸಿಗಳಾದ ಕುಂಚಿಟಿಗರು, ಕಾಡುಗೊಲ್ಲರಿಗೆ ಸಂಪುಟದಲ್ಲಿ ಸ್ಥಾನ ಮಾನ ನೀಡದೇ ಕಾಂಗ್ರೆಸ್ ಈ ಎರಡು ವರ್ಗಗಳನ್ನು ಕಡೆಗಣಿಸಿರುವುದರಿಂದ ಕಾಂಗ್ರೆಸ್ ಪಕ್ಷ ಅದರ ಫಲವನ್ನು ಉಪ ಚುನಾವಣೆಯಲ್ಲಿ ಅನುಭವಿಸಲಿದೆ ಎಂದು ವಾಗ್ದಾಳಿ ಮಾಡಿದ್ದಾರೆ.
ದೇವೇಗೌಡರ ಕೊಡುಗೆ: ಧರ್ಮಪುರ ಭಾಗದಲ್ಲಿ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಮತ್ತು ಕುಮಾರಸ್ವಾಮಿ ಅವರ ಕೊಡುಗೆ ಅಪಾರವಾಗಿದೆ. ದೇವೇಗೌಡರು ಹಾಗೂ ಕುಮಾರಸ್ವಾಮಿಯವರು ಧರ್ಮಪುರ ಭಾಗಕ್ಕೆ ಕಾಲಿಟ್ಟರೆ ಇಲ್ಲಿನ ಚಿತ್ರಣವೇ ಬದಲಾಗಲಿದೆ.
ಧೂಳಿಗೆ ಸಮಾನ: ಕುಮಾರಸ್ವಾಮಿ ಅವರ ಬಗ್ಗೆ ಮಾತನಾಡುವ ಅರ್ಹತೆ ಬಾಲಕೃಷ್ಣ ಅವರಿಗಿಲ್ಲ. ಕುಮಾರಸ್ವಾಮಿ ಅವರ ಮುಂದೆ ಬಾಲಕೃಷ್ಣ ಧೂಳಿಗೆ ಸಮಾನ.
ಕಾಂಗ್ರೆಸ್‌ಗೆ ಜನ ಬೆಂಬಲವಿಲ್ಲ: ಧರ್ಮಪುರ ಭಾಗದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಶೇಕಡಾ ಒಂದರಷ್ಟೂ ಜನಬೆಂಬಲವಿಲ್ಲ. ಕುಂಚಿಟಿಗ ಸಮುದಾಯವೂ ಸೇರಿದಂತೆ ಯಾವುದೇ ವರ್ಗದ ಜನರು ಕಾಂಗ್ರೆಸ್ ಪರವಾಗಿಲ್ಲ.
ಬಾಲಕೃಷ್ಣ ಅವರ ಹವಾಲ ಮತ್ತು ಟೀಕೆಗಳು ಈ ಭಾಗದಲ್ಲಿ ನಡೆಯುವುದಿಲ್ಲ ಎಂದು ದ್ಯಾಮೇಗೌಡ ಅವರು ಟೀಕಿಸಿದ್ದಾರೆ. ಬಿಡದಿ ರೈತರನ್ನ ಹಾಳು ಮಾಡಿದ್ದು ರೈತ ವಿರೋಧಿ ನಡೆ ಅನುಸರಿಸುತ್ತಿರುವ ಸಚಿವ ಬಾಲಕೃಷ್ಣ ಅವರಿಗೆ ಮುಂಬರುವ ಚುನಾವಣೆಯಲ್ಲಿ ಮಾಗಡಿಯಲ್ಲೂ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ದ್ಯಾಮೇಗೌಡ ಭವಿಷ್ಯ ನುಡಿದರು.
ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಕುಂಚಿಟಿಗ ಜಾತಿಯ ಏಕೈಕ ಶಾಸಕ, ಹಿರಿಯ ಮುತ್ಸದ್ದಿ ಟಿ.ಬಿ ಜಯಚಂದ್ರ ಅವರಿಗೆ ಸಚಿವ ಸ್ಥಾನ ನೀಡದೇ ಇಡೀ ಕುಂಚಿಟಿಗ ಒಕ್ಕಗಲಿಗರಿಗೆ ಮಹಾ ಮೋಸ ಮಾಡಿದ್ದು ಸಮುದಾಯವು ತಕ್ಕ ಪಾಠ ಕಲಿಸಲು ಕಾಯುತ್ತಿದೆ ಎಂದು ದ್ಯಾಮೇಗೌಡ ಎಚ್ಚರಿಸಿದ್ದಾರೆ.
ಬಲಿಷ್ಠ ಜಾತಿಗಳಿಗೆ ಮೂರು ನಾಲ್ಕು ಸಚಿವ ಸ್ಥಾನ ನೀಡಲಾಗಿದೆ. ಅದರ ಬದಲು ಧ್ವನಿ ಇಲ್ಲದ ಸಮುದಾಯಗಳಿಗೆ ಸಚಿವ ಸ್ಥಾನ ನೀಡಿ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ಪಕ್ಷವು ಸಾಮಾಜಿಕ ನ್ಯಾಯ ನೀಡಬೇಕಿತ್ತು. ಆ ಕೆಲಸ ಮಾಡದಿರುವುದೇ ಮುಂಬರುವ ಹಿರಿಯೂರು ಉಪಚುನಾವಣೆಯಲ್ಲಿ ಕಾಂಗ್ರೆಸ್ ತೀವ್ರ ಹಿನ್ನೆಡೆಯಾಗುವ ಸಾಧ್ಯತೆ ನಿಚ್ಚಳವಾಗಿದೆ ಎಂದು ಕೆ.ದ್ಯಾಮೇಗೌಡ ವಾಗ್ದಾಳಿ ಮಾಡಿದ್ದಾರೆ.




