ಚಂದ್ರವಳ್ಳಿ ನ್ಯೂಸ್, ಬೆಂಗಳೂರು: ಉತ್ತರ ಕರ್ನಾಟಕ ಭಾಗದ ಪ್ರಯಾಣಿಕರ ಅನುಕೂಲ ಹಾಗೂ ಹೆಚ್ಚುತ್ತಿರುವ ಜನಸಂದಣಿಯನ್ನು ಪರಿಗಣಿಸಿ, ಬೆಂಗಳೂರಿನ ಯಶವಂತಪುರ ಹಾಗೂ ವಿಜಯಪುರ ನಡುವಿನ ನೇರ ವಿಶೇಷ ಎಕ್ಸ್‌ಪ್ರೆಸ್ ರೈಲು ಸೇವೆಯನ್ನು ಇದೇ ವರ್ಷದ ಆಗಸ್ಟ್ 31ರವರೆಗೆ ವಿಸ್ತರಿಸಲಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ತಿಳಿಸಿದ್ದಾರೆ.
ಈ ಹಿಂದೆ ಈ ರೈಲು ಸೇವೆಯನ್ನು ಕೇವಲ ಜೂನ್ 29ರವರೆಗೆ ಮಾತ್ರ ನಿಗದಿಪಡಿಸಲಾಗಿತ್ತು. ಆದರೆ, ಈ ಮಾರ್ಗದಲ್ಲಿ ಪ್ರಯಾಣಿಕರಿಂದ ವ್ಯಕ್ತವಾದ ಭಾರೀ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ರೈಲ್ವೆ ಇಲಾಖೆಯು ಆಗಸ್ಟ್ ಕೊನೆಯವರೆಗೆ ಸೇವೆಯನ್ನು ಮುಂದುವರಿಸಲು ನಿರ್ಧರಿಸಿದೆ.
ವಾರಕ್ಕೆರಡು ದಿನ ಸಂಚಾರ
ಸಚಿವರು ಮತ್ತು ಜನಪ್ರತಿನಿಧಿಗಳ ಸತತ ಪ್ರಯತ್ನದ ಫಲವಾಗಿ, ಆರಂಭದಲ್ಲಿ ವಾರಕ್ಕೊಮ್ಮೆ ಮಾತ್ರ ಸಂಚರಿಸುತ್ತಿದ್ದ ಈ ವಿಶೇಷ ರೈಲನ್ನು, ಇದೇ ಜೂನ್ 1ರಿಂದ ಜಾರಿಗೆ ಬರುವಂತೆ ವಾರದಲ್ಲಿ ಎರಡು ದಿನಗಳ ಸೇವೆಯಾಗಿ ವಿಸ್ತರಿಸಲಾಗಿತ್ತು. ಇದು ಉತ್ತರ ಕರ್ನಾಟಕದ ಜನರ ಬಹುಕಾಲದ ಬೇಡಿಕೆಗೆ ಸಿಕ್ಕ ಪ್ರಮುಖ ಯಶಸ್ಸಾಗಿದೆ.
ಮುಂದಿನ ಗುರಿ: ಶಾಶ್ವತ ಹಾಗೂ ಪ್ರತಿದಿನ ಸಂಚಾರ
ಈ ರೈಲು ಸೇವೆಯನ್ನು ಕೇವಲ ವಿಶೇಷ ರೈಲನ್ನಾಗಿ ಉಳಿಸದೆ, ಮುಂಬರುವ ದಿನಗಳಲ್ಲಿ ಶಾಶ್ವತಗೊಳಿಸಲು ಮತ್ತು ಪ್ರತಿದಿನ ಸಂಚರಿಸುವಂತೆ ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಭರವಸೆ ನೀಡಿದ್ದಾರೆ.
"ಪ್ರಯಾಣಿಕರ ಹಿತದೃಷ್ಟಿಯಿಂದ ಈ ರೈಲು ಸೇವೆಯನ್ನು ಖಾಯಂಗೊಳಿಸುವುದು ಮತ್ತು ಪ್ರತಿದಿನ ಸಂಚಾರಕ್ಕೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ನಮ್ಮ ಪ್ರಯತ್ನಗಳು ನಿರಂತರವಾಗಿ ಮುಂದುವರಿಯಲಿವೆ," ಎಂದು ಸಚಿವ ಎಂ.ಬಿ. ಪಾಟೀಲ್ ತಿಳಿಸಿದ್ದಾರೆ.



