ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ :
ನಗರಸಭೆ ಉಪಾಧ್ಯಕ್ಷ ಸ್ಥಾನಕ್ಕೆ ಮಲ್ಲೇಶ್ ರಾಜೀನಾಮೆ ನೀಡಿದ್ದು, ತೆರವಾದ ಸ್ಥಾನಕ್ಕೆ ಚುನಾವಣೆ ನಡೆಯಿತು. ಬಿಜೆಪಿ ಜೆಡಿಎಸ್ ಮೈತ್ರಿ ಕೂಟದ ಅಭ್ಯರ್ಥಿಯಾಗಿ ಬಿಜೆಪಿಯ ಸದಸ್ಯ ಬಂತಿ ವೆಂಕಟೇಶ್ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ನೂತನ ಉಪಾಧ್ಯಕ್ಷರಾಗಿ ಬಂತಿ ವೆಂಕಟೇಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ ಟಿ.ಆರ್ ಮಂಜುನಾಥ ಅಧಿಕೃತವಾಗಿ ಪ್ರಕಟಿಸಿದರು.
ಈ ವೇಳೆ ಶಾಸಕ ಧೀರಜ್ ಮುನಿರಾಜು ಮಾತನಾಡಿ ಎನ್.ಡಿ.ಎ ಮೈತ್ರಿಯಂತೆ ಮುಂದಿನ ದಿನಗಳಲ್ಲಿ ಅಧ್ಯಕ್ಷ ಸ್ಥಾನವನ್ನು ಜೆಡಿಎಸ್ ಗೆ ಬಿಟ್ಟುಕೊಡಲಾಗುವುದು. ನಮ್ಮ ಪಕ್ಷದ ಸದಸ್ಯರು ಇಂದು ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ನಗರದ ಮೂಲಭೂತಸೌಕರ್ಯಗಳು ಸೇರಿದಂತೆ ಜ್ವಲಂತ ಸಮಸ್ಯೆಗಳನ್ನು ಬಗೆಹರಿಸಲು ಶ್ರಮಿಸಲಿ ಎಂದರು.
ನೂತನ ಉಪಾಧ್ಯಕ್ಷ ಬಂತಿ ವೆಂಕಟೇಶ್ ಮಾತನಾಡಿ ನಗರಸಭೆಯ ಸದಸ್ಯರು ಸರ್ವಾನುಮತದಿಂದ ನನ್ನನ್ನು ಅವಿರೋಧವಾಗಿ ಆಯ್ಕೆ ಮಾಡಿದ್ದು, ಲೋಕಸಭಾ ಸದಸ್ಯರಾದ ಡಾ. ಕೆ ಸುಧಾಕರ್ ರವರು ಹಾಗೂ ತಾಲೂಕಿನ ಹೆಮ್ಮೆಯ ಶಾಸಕರಾದ ಧೀರಜ್ ಮುನಿರಾಜು,ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಹರೀಶ್ ಗೌಡರ ಬೆಂಬಲದೊಂದಿಗೆ ಪಕ್ಷದ ಎಲ್ಲಾ ಪ್ರಮುಖರ ಸಹಕಾರದೊಂದಿಗೆ ನೂತನ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದೇನೆ.ನನ್ನ ಮೇಲೆ ಸರ್ವ ಪಕ್ಷದ ಸದಸ್ಯರು ಇಟ್ಟಿರುವ ನಂಬಿಕೆ ಹಾಗೂ ವಿಶ್ವಾಸವನ್ನು ಖಂಡಿತವಾಗಿಯೂ ಉಳಿಸಿಕೊಳ್ಳುತ್ತೇನೆ. ಇರುವ ಅಲ್ಪಾವಧಿಯಲ್ಲಿ ನಗರದ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ಕೊಡುವ ಮೂಲಕ ನಗರದ ಮೂಲಭೂತ ಸೌಕರ್ಯಗಳ ಗುಣಮಟ್ಟವನ್ನು ಹೆಚ್ಚಿಸುವಲ್ಲಿ ಶ್ರಮಿಸಲಾಗುವುದು ಎಂದರು.
ನೂತನ ಉಪಾಧ್ಯಕ್ಷರನ್ನು ನಗರಸಭೆ ಅಧ್ಯಕ್ಷೆ ಸುಮಿತ್ರಾ ಆನಂದ್, ಮಾಜಿ ಉಪಾಧ್ಯಕ್ಷ ಮಲ್ಲೇಶ್, ಮಾಜಿ ನಗರಸಬಾಧ್ಯಕ್ಷ ತ. ನ. ಪ್ರಭುದೇವ್ ಎಲ್ಲಾ ನಗರಸಭೆ ಸದಸ್ಯರು ,ಬಿಜೆಪಿ ಪಕ್ಷದ ಜಿಲ್ಲಾ ಹಾಗೂ ತಾಲ್ಲೂಕು ಘಟಕದ ಪ್ರಮುಖರು, ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಹರೀಶ್ ಗೌಡ ಸೇರಿದಂತೆ ಹಲವು ಪ್ರಮುಖರು ಅಭಿನಂದಿಸಿದ್ದಾರೆ.



