ಚಂದ್ರವಳ್ಳಿ ನ್ಯೂಸ್, ಬಳ್ಳಾರಿ:
ರಾಜ್ಯದ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ ಮತ್ತು ದುರಾಡಳಿತದ ವಿರುದ್ಧ ಬಿಜೆಪಿ ಹಮ್ಮಿಕೊಂಡಿರುವ 'ಬಳ್ಳಾರಿ ಚಲೋ' ಜನಾಕ್ರೋಶ ಪಾದಯಾತ್ರೆಯು 9ನೇ ದಿನಕ್ಕೆ ಕಾಲಿಟ್ಟಿದ್ದು, ಸಹಸ್ರಾರು ಕಾರ್ಯಕರ್ತರ ಅಪರಿಮಿತ ಉತ್ಸಾಹದೊಂದಿಗೆ ಬಳ್ಳಾರಿಯತ್ತ ಮುನ್ನಡೆಯುತ್ತಿದೆ.
ಇಂದಿನ ಪಾದಯಾತ್ರೆಯು ಮುಂಜಾನೆ ಸಾಂಪ್ರದಾಯಿಕ ಗೋಪೂಜೆಯೊಂದಿಗೆ ಆರಂಭಗೊಂಡು, ಕುಡುತಿನಿಯ ಪ್ರಸಿದ್ಧ ಶ್ರೀ ದೊಡ್ಡ ಆಂಜನೇಯ ಸ್ವಾಮಿ ದೇವಾಲಯದಲ್ಲಿ ನಾಯಕರು ವಿಶೇಷ ಪೂಜೆ ಹಾಗೂ ಪ್ರಾರ್ಥನೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು. ರೈತರು, ದಲಿತರು ಮತ್ತು ಹಿಂದುಳಿದ ವರ್ಗಗಳ ನ್ಯಾಯಕ್ಕಾಗಿ ನಡೆಯುತ್ತಿರುವ ಈ ಪಾದಯಾತ್ರೆಗೆ ದಾರಿಯುದ್ದಕ್ಕೂ ಸಾರ್ವಜನಿಕರಿಂದ ನಿರೀಕ್ಷೆಗೂ ಮೀರಿದ ಬೆಂಬಲ ಹಾಗೂ ಹಿರಿಯರ ಆಶೀರ್ವಾದ ವ್ಯಕ್ತವಾಗುತ್ತಿದೆ.
ಈ ಬೃಹತ್ ಪ್ರತಿಭಟನಾ ನಡಿಗೆಯಲ್ಲಿ ಪಕ್ಷದ ಪ್ರಮುಖ ನಾಯಕರು ಭುಜಕ್ಕೆ ಭುಜ ಕೊಟ್ಟು ಹೆಜ್ಜೆ ಹಾಕಿದರು.
ಮಾಜಿ ಜನಪ್ರತಿನಿಧಿಗಳು: ನಿಕಟಪೂರ್ವ ರಾಜ್ಯಾಧ್ಯಕ್ಷ ಹಾಗೂ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ಮಾಜಿ ಸಚಿವ ಮುರುಗೇಶ್ ನಿರಾಣಿ, ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ, ಸಂಸದರು: ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಕ್ಯಾಪ್ಟನ್ ಬ್ರಿಜೇಶ್ ಚೌಟ.
ಶಾಸಕರು & ಪ್ರಮುಖರು: ಸುರೇಶ್ ಗೌಡ, ಬಸವರಾಜ ಮತ್ತಿಮೂಡ್, ಗುರ್ಮೆ ಸುರೇಶ್ ಶೆಟ್ಟಿ, ಭಾಗೀರಥಿ ಮುರುಳ್ಯ ಸೇರಿದಂತೆ ಹಲವು ಶಾಸಕರು, ಪಕ್ಷದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಬೃಹತ್ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಸರ್ಕಾರಕ್ಕೆ ಜನಶಕ್ತಿಯ ಎಚ್ಚರಿಕೆ: ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಜನಮಾನಸದಲ್ಲಿ ಉಂಟಾಗಿರುವ ಆಕ್ರೋಶವೇ ಈ ಹೋರಾಟಕ್ಕೆ ಹೊಸ ಚೈತನ್ಯ ನೀಡಿದೆ. ಸಾರ್ವಜನಿಕರ ಈ ರಣಕಹಳೆ ಮತ್ತು ಜನಾಕ್ರೋಶವು ರಾಜ್ಯ ಸರ್ಕಾರವನ್ನು ವಿಚಲಿತಗೊಳಿಸಿದ್ದು, ಮುಂಬರುವ ದಿನಗಳಲ್ಲಿ ಕಾಂಗ್ರೆಸ್ ಆಡಳಿತಕ್ಕೆ ತಕ್ಕ ಉತ್ತರ ನೀಡಲು ಜನಶಕ್ತಿ ಸಜ್ಜಾಗಿದೆ ಎಂದು ಬಿಜೆಪಿ ನಾಯಕರು ಈ ಸಂದರ್ಭದಲ್ಲಿ ಎಚ್ಚರಿಸಿದ್ದಾರೆ.




