Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಬಿಡದಿ ಉಪನಗರ ಯೋಜನೆ ನನ್ನ ಕೂಸಲ್ಲ, ಡಿಕೆಶಿ-ಸಿದ್ದರಾಮಯ್ಯ ಸರ್ಕಾರದ ಲೂಟಿ ಅಸ್ತ್ರ: ಕುಮಾರಸ್ವಾಮಿ

Advertisement
Advertisement

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿರುವ ಬಿಡದಿ ಸ್ಮಾರ್ಟ್ ಸಿಟಿ (ಟೌನ್‌ಶಿಪ್) ಯೋಜನೆಯ ಭೂ ಸ್ವಾಧೀನ ಪ್ರಕ್ರಿಯೆ ಕುರಿತು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. "ಬಿಡದಿ ಯೋಜನೆ ನನ್ನ ಕೂಸು ಎಂದು ಬಿಂಬಿಸುತ್ತಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, 2025ರಲ್ಲಿ ಈ ಯೋಜನೆಗೆ ಪ್ರಾಥಮಿಕ ಅಧಿಸೂಚನೆ ಹೊರಡಿಸಿ ರೈತರ ಭೂಮಿ ಲಪಟಾಯಿಸಲು ಹೊರಟಿದ್ದಾರೆ" ಎಂದು ಅವರು ನೇರ ಆರೋಪ ಮಾಡಿದ್ದಾರೆ.

 ಜೆಡಿಎಸ್ ಪ್ರಧಾನ ಕಚೇರಿ ಜೆ.ಪಿ. ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಧಾನಸಭೆಯ ಹಳೆಯ ದಾಖಲೆಗಳನ್ನು ಉಲ್ಲೇಖಿಸಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಇಬ್ಬಂದಿ ನೀತಿಯನ್ನು ತರಾಟೆಗೆ ತೆಗೆದುಕೊಂಡರು.

ಸದನದಲ್ಲೇ ಯೋಜನೆಯನ್ನು ಕೈಬಿಟ್ಟಿದ್ದೆ: ಹೆಚ್‌ಡಿಕೆ ಸ್ಪಷ್ಟನೆ:
ಬಿಡದಿ ಟೌನ್‌ಶಿಪ್ ಯೋಜನೆ ತಮಗೆ ಸಂಬಂಧಿಸಿದ್ದಲ್ಲ ಎಂಬುದನ್ನು ಸಾಬೀತುಪಡಿಸಲು ಕುಮಾರಸ್ವಾಮಿ 2007ರ ಸದನದ ಚರ್ಚೆಯನ್ನು ನೆನಪಿಸಿದರು.

ಸಿದ್ದರಾಮಯ್ಯ ಅಂದಿನ ವಿರೋಧ: 2007ರಲ್ಲಿ ನಾನು ಸಿಎಂ ಆಗಿದ್ದಾಗ, 'ರೈತರ ಕೃಷಿ ಭೂಮಿಯನ್ನು ಕಿತ್ತುಕೊಂಡು ಯಾರೋ ಟೌನ್‌ಶಿಪ್ ಮಾಡಲು ಹೊರಟಿದ್ದಾರೆ' ಎಂದು ಅಂದು ಸಿದ್ದರಾಮಯ್ಯ ಅವರೇ ಭಾಷಣ ಮಾಡಿದ್ದರು.

ನನ್ನ ಅವಧಿಯಲ್ಲಿ ನೋಟಿಫಿಕೇಶನ್ ಆಗಿಲ್ಲ: ಅಂದು ಸಿದ್ದರಾಮಯ್ಯ ಅವರ ಆಕ್ಷೇಪಕ್ಕೆ ಉತ್ತರಿಸಿದ್ದ ನಾನು, ಆಗಸ್ಟ್ 1, 2007 ರಂದೇ ರೈತರನ್ನು ಒಕ್ಕಲೆಬ್ಬಿಸಿ ಯೋಜನೆ ಮಾಡುವ ಅಗತ್ಯವಿಲ್ಲ ಎಂದು ಭೂ ಸ್ವಾಧೀನ ಪ್ರಕ್ರಿಯೆಯನ್ನು ಕೈಬಿಟ್ಟಿದ್ದೆ. 2018ರಲ್ಲಿ ನಾನು ಮರುಬಾರಿ ಸಿಎಂ ಆದಾಗಲೂ ಈ ಯೋಜನೆಗೆ ಕೈ ಹಾಕಲಿಲ್ಲ. 

ಡಿಕೆಶಿ ಅಧ್ಯಕ್ಷತೆಯಲ್ಲಿ ಅಧಿಸೂಚನೆ: ಆದರೆ, 2025ರ ಮಾರ್ಚ್‌ನಲ್ಲಿ ಡಿ.ಕೆ.ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿಯೇ ಈ ಯೋಜನೆಗೆ ಪ್ರಾಥಮಿಕ ಭೂ ಸ್ವಾಧೀನದ ಅಧಿಸೂಚನೆ ಹೊರಡಿಸಲಾಗಿದೆ. ಹಾಗಿದ್ದಲ್ಲಿ ಈ ಯೋಜನೆಯ ನಿಜವಾದ ಪಿತಾಮಹ ಯಾರು ಎಂದು ಪ್ರಶ್ನಿಸಿದರು.

"ರೈತರ ಹಿತಕ್ಕೆ ಡಿನೋಟಿಫೈ ಮಾಡಿದರೆ ಜೈಲಿಗೆ ಹೋಗಲ್ಲ":
ಡಿನೋಟಿಫಿಕೇಶನ್ ಮಾಡಿದರೆ ಜೈಲಿಗೆ ಹೋಗಬೇಕಾಗುತ್ತದೆ ಎಂಬ ಡಿ.ಕೆ. ಶಿವಕುಮಾರ್ ಅವರ ಹೇಳಿಕೆಗೆ ಕುಮಾರಸ್ವಾಮಿ ತಿರುಗೇಟು ನೀಡಿದರು.

"ಸಾರ್ವಜನಿಕರ ಮತ್ತು ರೈತರ ಹಿತಾಸಕ್ತಿಗಾಗಿ ಭೂಮಿಯನ್ನು ಡಿನೋಟಿಫೈ ಮಾಡಿದರೆ ಯಾರೂ ಜೈಲಿಗೆ ಹೋಗುವುದಿಲ್ಲ. ಸಿದ್ದರಾಮಯ್ಯ ಅವರು ಅರ್ಕಾವತಿ ಲೇಔಟ್ ಡಿನೋಟಿಫೈ ಮಾಡಿದಾಗ ಜೈಲಿಗೆ ಹೋದರಾ? ಆದರೆ, ನಗರಾಭಿವೃದ್ಧಿ ಸಚಿವರಾಗಿ ಸತ್ತವರ ಹೆಬ್ಬೆಟ್ಟು ಒತ್ತಿಸಿ, ಬೇರೆಯವರ ಆಸ್ತಿ ಡಿನೋಟಿಫೈ ಮಾಡಿದರೆ ಖಂಡಿತ ಜೈಲಿಗೆ ಹೋಗುತ್ತಾರೆ. ಡಿಕೆಶಿಗೆ ಬಹುಶಃ ಆ ಭಯ ಇರಬೇಕು."

ನೈಸ್ ಕಂಪನಿಯ ಪಿತಾಮಹ ಇದೇ ಡಿಕೆಶಿ!:
"
ಬಿಡದಿ ಯೋಜನೆಯ ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ 4 ಸಾವಿರಕ್ಕೂ ಅಧಿಕ ರೈತರು ಆಕ್ಷೇಪಣೆ ಸಲ್ಲಿಸಿದ್ದರೂ ಸರ್ಕಾರ ಒಬ್ಬ ರೈತರಿಗೂ ಉತ್ತರಿಸಿಲ್ಲ. ನೈಸ್ ಕಂಪನಿ ಜಮೀನು ಪಡೆದು 30 ವರ್ಷಗಳಾಗುತ್ತಾ ಬಂದರೂ ಇಂದಿಗೂ ರೈತರಿಗೆ ಅಭಿವೃದ್ಧಿಪಡಿಸಿದ ನಿವೇಶನ ನೀಡಿಲ್ಲ. ಇಂತಹ ನೈಸ್ ಕಂಪನಿಯ ಅಸಲಿ ಪಿತಾಮಹನೇ ಡಿ.ಕೆ. ಶಿವಕುಮಾರ್" ಎಂದು ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದರು. ಅಲ್ಲದೆ, "ಶೋಭಾ ಬಿಲ್ಡರ್ಸ್‌ಗಾಗಿ ನೈಸ್ ಕಂಪನಿಯಿಂದ ಎನ್‌ಒಸಿ ಕೊಡಿಸಿರುವುದು ಇದೇ ಪ್ರಜಾಸೇವಕರು" ಎಂದು ಲೇವಡಿ ಮಾಡಿದರು.

ಬೈರಮಂಗಲಕ್ಕೆ ಬಹಿರಂಗ ಚರ್ಚೆಗೆ ಬನ್ನಿ: ಪ್ರತಿ ಸವಾಲು
ಡಿ.ಕೆ. ಶಿವಕುಮಾರ್ ಅವರಿಗೆ ಬಹಿರಂಗ ಸವಾಲು ಹಾಕಿದ ಹೆಚ್‌ಡಿಕೆ, "ಧೈರ್ಯವಿದ್ದರೆ ಬೈರಮಂಗಲಕ್ಕೆ ಬನ್ನಿ. ಅಲ್ಲಿನ ರೈತರ ಮುಂದೆಯೇ ಬಹಿರಂಗ ಚರ್ಚೆ ಮಾಡೋಣ, ರೈತರು ಭೂಮಿ ಕೊಡಲು ಸಿದ್ಧರಿದ್ದಾರೋ ಇಲ್ಲವೋ ಎಂಬುದನ್ನು ಅಲ್ಲೇ ತೀರ್ಮಾನಿಸೋಣ" ಎಂದರು.

ಪರಿಹಾರದಲ್ಲಿ ತಾರತಮ್ಯ: ಸಾಮಾನ್ಯ ರೈತರಿಗೆ ಎಕರೆಗೆ 2 ಕೋಟಿ ಪರಿಹಾರ ನೀಡುವ ಸರ್ಕಾರ, ಈಗಲ್ಟನ್ ರೆಸಾರ್ಟ್‌ನ ಖರಾಬು ಭೂಮಿಗೆ 12 ಕೋಟಿ ನಿಗದಿ ಮಾಡಿದ್ದು ಯಾವ ನ್ಯಾಯ?.

ಖಾಸಗಿ ಜಾಗದಲ್ಲಿ ದಲ್ಲಾಳಿ ವ್ಯವಹಾರ: ಸರ್ಕಾರದ ಕಚೇರಿ ಬಿಟ್ಟು ನಾಗರಭಾವಿಯ ಬಾಡಿಗೆ ಮನೆಯೊಂದರಲ್ಲಿ ಕುಳಿತು ಕೆಲವು ಪುಡಾರಿಗಳ ಮೂಲಕ ರೈತರ ಪರಿಹಾರದ ಹಣದ ವ್ಯವಹಾರ ನಡೆಸಲಾಗುತ್ತಿದೆ. ಈ ಹಗರಣದಲ್ಲಿ ಎಷ್ಟು ಜನ ಜೈಲಿಗೆ ಹೋಗಲು ಸಿದ್ಧರಿದ್ದಾರೋ ತಯಾರಾಗಿ ಎಂದು ಎಚ್ಚರಿಕೆ ನೀಡಿದರು.

"ರಾಜ್ಯ ಸರ್ಕಾರದ ಖಜಾನೆಯಲ್ಲಿ ದುಡ್ಡಿಲ್ಲ. ಕೇವಲ ಲೂಟಿ ಹೊಡೆಯುವ ಉದ್ದೇಶದಿಂದಲೇ ಹೊಸ ಯೋಜನೆಗಳನ್ನು ತರಲಾಗುತ್ತಿದೆ. ಬೆಂಗಳೂರಿನಲ್ಲಿ ಘೋಷಣೆಯಾಗಿದ್ದ ಕೆಂಪೇಗೌಡ ಹಾಗೂ ಶಿವರಾಮ ಕಾರಂತ ಬಡಾವಣೆಗಳನ್ನೇ ಇನ್ನು ಪೂರ್ಣಗೊಳಿಸಲು ಯೋಗ್ಯತೆಯಿಲ್ಲದ ಸರ್ಕಾರ, ಚುನಾವಣೆ ಗೆಲ್ಲಲು ಹಣ ಲೂಟಿ ಮಾಡಲು ಬಿಡದಿ ಯೋಜನೆಗೆ ಕೈಹಾಕಿದೆ" ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.