ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಮನಗರ ತಾಲೂಕಿನ ಬಿಡದಿ ಸಮಗ್ರ ಟೌನ್‌ಶಿಪ್ ಯೋಜನೆಯ ಭೂಸ್ವಾಧೀನ ಪ್ರಕ್ರಿಯೆಯನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳ ಅಂತಿಮ ನಿರ್ಧಾರವಾಗುವವರೆಗೆ ಭೂಮಾಲೀಕರಿಗೆ ಯಾವುದೇ ತೊಂದರೆ ನೀಡುವುದಿಲ್ಲ ಎಂದು ರಾಜ್ಯ ಸರ್ಕಾರವು ಉಚ್ಛ ನ್ಯಾಯಾಲಯಕ್ಕೆ ತಿಳಿಸಿದೆ.
ಬೆಂಗಳೂರು ದಕ್ಷಿಣ ಜಿಲ್ಲೆಯ ವಡೇರಹಳ್ಳಿ ಗ್ರಾಮದಲ್ಲಿ ಟೌನ್‌ಶಿಪ್‌ಗೆ ಭೂಸ್ವಾಧೀನ ಪ್ರಕ್ರಿಯೆ ರದ್ದುಪಡಿಸುವಂತೆ ಕೋರಿ ಹೊಸೂರು ಗ್ರಾಮದ ಗಿರಿಜಮ್ಮ ಸೇರಿದಂತೆ ಹಲವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಆರ್. ನಟರಾಜ್‌ಅವರಿದ್ದ ಏಕಸದಸ್ಯ ಪೀಠ ನಡೆಸಿತು.
ಸರ್ಕಾರದ ಸ್ಪಷ್ಟನೆ: ಸರ್ಕಾರದ ಪರ ಹಾಜರಿದ್ದ ಅಡ್ವೋಕೇಟ್ ಜನರಲ್ ಶಶಿಕಿರಣ ಶೆಟ್ಟಿ ಅವರು ವಾದ ಮಂಡಿಸಿ, "ಅರ್ಜಿದಾರರು ಸೇರಿದಂತೆ ಹಲವು ಭೂಮಾಲೀಕರು ಭೂಸ್ವಾಧೀನಕ್ಕೆ ಒಪ್ಪಿಗೆ ನೀಡಿದ್ದಾರೆ. 16 ಎಕರೆ ಸ್ವಾಧೀನ ಪ್ರಶ್ನಿಸಿ ಅರ್ಜಿ ಸಲ್ಲಿಕೆಯಾಗಿದ್ದು, ಪರಿಹಾರದ ಮೊತ್ತ ಇನ್ನಷ್ಟೇ ನಿಗದಿಯಾಗಬೇಕಿದೆ. ಅಲ್ಲಿಯವರೆಗೆ ಅರ್ಜಿದಾರರ ಜಮೀನಿಗೆ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ" ಎಂದು ಪೀಠಕ್ಕೆ ಆಶ್ವಾಸನೆ ನೀಡಿದರು.
ಕೋರ್ಟ್ ನೋಟಿಸ್: ರಾಜ್ಯ ಸರ್ಕಾರದ ಆಶ್ವಾಸನೆ ಆಲಿಸಿದ ನ್ಯಾಯಪೀಠವು, ಕಂದಾಯ, ನಗರಾಭಿವೃದ್ಧಿ, ಅರಣ್ಯ ಇಲಾಖೆ, ಬಿಎಂಆರ್‌ಡಿಎ, ಗ್ರೇಟರ್‌ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಹಾಗೂ ಭೂಸ್ವಾಧೀನಾಧಿಕಾರಿಗಳಿಗೆ ನೋಟಿಸ್‌ಜಾರಿಗೊಳಿಸಿ ವಿಚಾರಣೆಯನ್ನು ಮುಂದೂಡಿತು.
ಅರ್ಜಿದಾರರ ವಾದವೇನು? ಗ್ರೇಟರ್‌ಬೆಂಗಳೂರು ಸಮಗ್ರ ಟೌನ್‌ಶಿಪ್‌ಯೋಜನೆಗಾಗಿ 10 ಗ್ರಾಮಗಳ 6,650 ಎಕರೆ ಸೇರಿ ಒಟ್ಟು 7,481 ಎಕರೆ ಸ್ವಾಧೀನಪಡಿಸಿಕೊಳ್ಳಲು ನಿರ್ಧರಿಸಲಾಗಿದೆ. 2006ರಲ್ಲಿ ಪ್ರಸ್ತಾವನೆಗೊಂಡ ಈ ಯೋಜನೆಯಿಂದಾಗಿ ಕಳೆದ ಎರಡು ದಶಕಗಳಿಂದ ಈ ಪ್ರದೇಶದಲ್ಲಿ ಯಾವುದೇ ಅಭಿವೃದ್ಧಿ ನಡೆದಿಲ್ಲ. ಈಗ 2023ರಲ್ಲಿ ಯಾವುದೇ ಸೂಕ್ತ ಸಾರ್ವಜನಿಕ ಉದ್ದೇಶವಿಲ್ಲದೆ ಹಳೆಯ ಯೋಜನೆಯನ್ನೇ ಹೊಸ ಹೆಸರಿನಲ್ಲಿ ಜಾರಿಗೆ ತರಲು ಯತ್ನಿಸಲಾಗುತ್ತಿದೆ ಎಂದು ರೈತರ ಪರ ವಕೀಲರು ವಾದಿಸಿದರು.
ಪರಿಸರ ನಾಶದ ಆತಂಕ: ಅತ್ಯಂತ ಫಲವತ್ತಾದ ಕೃಷಿ ಭೂಮಿಯಲ್ಲಿ ಟೌನ್‌ಶಿಪ್‌ನಿರ್ಮಿಸಲು ಹೊರಟಿದ್ದು, ಯೋಜನೆಗಾಗಿ ಸುಮಾರು 3 ಲಕ್ಷ ಮರಗಳನ್ನು ಕಡಿಯಬೇಕಾಗುತ್ತದೆ. ಇದರಿಂದ ಗಂಭೀರ ಪರಿಸರ ಹಾನಿಯ ಜೊತೆಗೆ ಸಾವಿರಾರು ಜನರ ಜೀವನೋಪಾಯಕ್ಕೆ ಧಕ್ಕೆಯಾಗಲಿದೆ ಎಂದು ಅರ್ಜಿದಾರರು ಕೋರ್ಟ್‌ಗಮನಕ್ಕೆ ತಂದಿದ್ದಾರೆ.



