ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬಿಡದಿ ಸಮಗ್ರ ಉಪನಗರ (ಟೌನ್‌ಶಿಪ್) ಯೋಜನೆಗೆ ಸಂಬಂಧಿಸಿದಂತೆ ಜೂನ್ 26 ರಂದು ವಿಧಾನಸೌಧದಲ್ಲಿ ಕರೆಯಲಾಗಿರುವ ಸಭೆಯ ಸ್ಥಳ ಹಾಗೂ ದಿನಾಂಕವನ್ನು ಬದಲಾಯಿಸುವಂತೆ ಕೇಂದ್ರ ಭಾರಿ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ರಾಜ್ಯದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಪತ್ರ ಬರೆದಿದ್ದಾರೆ.
ಜೂನ್ 22, 2026 ರಂದು ಬರೆದಿರುವ ಈ ಪತ್ರದಲ್ಲಿ ಕುಮಾರಸ್ವಾಮಿ ಅವರು ಯೋಜನೆಯಿಂದ ಬಾಧಿತರಾಗುವ ರೈತರು ಮತ್ತು ಸಾರ್ವಜನಿಕರ ಹಿತದೃಷ್ಟಿಯಿಂದ ಹಲವು ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಪತ್ರದ ಪ್ರಮುಖ ಮುಖ್ಯಾಂಶಗಳು:
ಸ್ಥಳ ಬದಲಾವಣೆ ತಕ್ಕುದು: ಬಿಡದಿ ಉಪನಗರ ಯೋಜನೆಯಿಂದ ರಾಮನಗರ ತಾಲ್ಲೂಕಿನ ಬಿಡದಿ ಹೋಬಳಿಯ ಎಂಟು ಗ್ರಾಮಗಳು ಹಾಗೂ ಹಾರೋಹಳ್ಳಿ ತಾಲ್ಲೂಕಿನ ಒಂದು ಗ್ರಾಮದ ರೈತರು, ಗ್ರಾಮಸ್ಥರು ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ. ಆದ್ದರಿಂದ ಈ ಸಭೆಯನ್ನು ವಿಧಾನಸೌಧದ ಬದಲು, ಬಾಧಿತ ಪ್ರದೇಶಗಳಾದ ಬಿಡದಿ ಅಥವಾ ಬೈರಮಂಗಲದ ಸೂಕ್ತ ಸಾರ್ವಜನಿಕ ಸ್ಥಳದಲ್ಲಿ ನಡೆಸುವುದೇ ಸೂಕ್ತ ಎಂದು ಕುಮಾರಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.
ಬಾಧಿತರ ಮುಕ್ತ ಭಾಗಿತ್ವಕ್ಕೆ ಅವಕಾಶ: ಸಾರ್ವಜನಿಕ ಸ್ಥಳದಲ್ಲಿ ಸಭೆ ನಡೆಸುವುದರಿಂದ ಬಾಧಿತ ರೈತರು, ಕೃಷಿ ಕಾರ್ಮಿಕರು, ಡೈರಿ ಉದ್ಯಮದಲ್ಲಿರುವ ಮಹಿಳೆಯರು ಮತ್ತು ಸಣ್ಣ ವ್ಯಾಪಾರಿಗಳು ಮುಕ್ತವಾಗಿ ಭಾಗವಹಿಸಿ ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಅನುಕೂಲವಾಗುತ್ತದೆ. ಬಾಧಿತರನ್ನು ಹೊರಗಿಟ್ಟು ವಿಧಾನಸೌಧದಲ್ಲಿ ಸಭೆ ನಡೆಸುವುದರಿಂದ ಯಾವುದೇ ಫಲ ಸಿಗುವುದಿಲ್ಲ ಎಂದು ಅವರು ಹೇಳಿದ್ದಾರೆ.
ವೈಯಕ್ತಿಕ ಹಿತಾಸಕ್ತಿ ಇಲ್ಲ: ಈ ಯೋಜನೆಯ ರಚನೆ ಮತ್ತು ಅನುಷ್ಠಾನದಲ್ಲಿ ತಮಗೆ ಯಾವುದೇ ರೀತಿಯ ವೈಯಕ್ತಿಕ ಹಿತಾಸಕ್ತಿ ಇಲ್ಲ ಎಂಬುದನ್ನು ಕೇಂದ್ರ ಸಚಿವರು ಪತ್ರದಲ್ಲಿ ಸ್ಪಷ್ಟಪಡಿಸಿದ್ದಾರೆ.
ದಿನಾಂಕ ಮುಂದೂಡಿಕೆಗೆ ಮನವಿ: ಜೂನ್ 26 ರಂದು ತಮಗೆ ಪೂರ್ವ ನಿಯೋಜಿತ ಕಾರ್ಯಕ್ರಮಗಳಿರುವುದರಿಂದ, ಈ ಸಭೆಯನ್ನು ಮರುದಿನ ಅಂದರೆ ಜೂನ್ 27, 2026 ರಂದು ಬಿಡದಿ ಅಥವಾ ಬೈರಮಂಗಲದಲ್ಲಿ ಆಯೋಜಿಸಬೇಕಾಗಿ ಕುಮಾರಸ್ವಾಮಿ ಅವರು ಡಿ.ಕೆ. ಶಿವಕುಮಾರ್ ಅವರಲ್ಲಿ ಪತ್ರದ ಮೂಲಕ ವಿನಂತಿಸಿದ್ದಾರೆ.



