ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮೈತ್ರಿ ರಾಜಕಾರಣಕ್ಕಾಗಿ ಕಾಂಗ್ರೆಸ್ ಸರ್ಕಾರವು ಕರ್ನಾಟಕದ ಹಿತಾಸಕ್ತಿಯನ್ನು ಬಲಿಗೊಡುತ್ತಿದೆ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಮಿಳುನಾಡಿನಲ್ಲಿ ಕಾಂಗ್ರೆಸ್‌ನ ಮೈತ್ರಿಕೂಟದ ಸರ್ಕಾರವು ಮೇಕೆದಾಟು ಯೋಜನೆ ವಿರುದ್ಧ ನಿರ್ಣಯ ಅಂಗೀಕರಿಸುತ್ತಿದ್ದರೂ, ರಾಜ್ಯದ ಕಾಂಗ್ರೆಸ್ ಸರ್ಕಾರ ಮತ್ತು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮೌನಕ್ಕೆ ಶರಣಾಗಿದ್ದಾರೆ ಎಂದು ಅವರು ಸಾಮಾಜಿಕ ಜಾಲತಾಣಗಳಲ್ಲಿ ವಾಗ್ದಾಳಿ ನಡೆಸಿದ್ದಾರೆ.
'ಅಂದು ಪಾದಯಾತ್ರೆ, ಇಂದು ಮೌನಯಾತ್ರೆ'
ಅಧಿಕಾರಕ್ಕೆ ಬರುವ ಮುನ್ನ ಕಾಂಗ್ರೆಸ್ ನಾಯಕರು ನಡೆಸಿದ ಮೇಕೆದಾಟು ಪಾದಯಾತ್ರೆಯನ್ನು ಕೇವಲ "ಬೀದಿನಾಟಕ" ಎಂದು ಕರೆದಿರುವ ಅಶೋಕ್, ಡಿ.ಕೆ. ಶಿವಕುಮಾರ್ ಅವರನ್ನು ನೇರವಾಗಿ ಪ್ರಶ್ನಿಸಿದ್ದಾರೆ.
"ಅಂದು ನೀವು ನಡೆಸಿದ್ದು 'ಮೇಕೆದಾಟು ಪಾದಯಾತ್ರೆಯೋ' ಅಥವಾ 'ಮುಖ್ಯಮಂತ್ರಿ ಕುರ್ಚಿಗಾಗಿ ಪಾದಯಾತ್ರೆಯೋ'? ಅಂದು ಮೇಕೆದಾಟು ಹೆಸರಲ್ಲಿ ರಾಜಕೀಯ ಮೈಲೇಜ್ ಪಡೆದುಕೊಂಡ ನೀವು, ಇಂದು ನಿಮ್ಮದೇ ಪಕ್ಷದವರು ಕರ್ನಾಟಕದ ಹಕ್ಕಿಗೆ ಕೊಡಲಿ ಪೆಟ್ಟು ಹಾಕುತ್ತಿದ್ದರೂ ಒಂದು ಮಾತು ಮಾತನಾಡುವ ಧೈರ್ಯ ತೋರುತ್ತಿಲ್ಲ. ಇದೇನಾ ನಿಮ್ಮ ಕನ್ನಡ ಪ್ರೇಮ?" ಎಂದು ಅವರು ಪ್ರಶ್ನೆಗಳ ಸುರಿಮಳೆಗೈದಿದ್ದಾರೆ.
ರಾಹುಲ್ ಗಾಂಧಿಗೆ ಆರ್. ಅಶೋಕ್ ಪ್ರಶ್ನೆಗಳು
ಕಾಂಗ್ರೆಸ್ ಪಕ್ಷದ ಇಬ್ಬಂದಿ ನೀತಿಯನ್ನು ತರಾಟೆಗೆ ತೆಗೆದುಕೊಂಡಿರುವ ಅವರು, ಎಐಸಿಸಿ ನಾಯಕ ರಾಹುಲ್ ಗಾಂಧಿ ಅವರನ್ನೂ ಈ ವಿವಾದಕ್ಕೆ ಎಳೆದಿದ್ದಾರೆ.
ಇಬ್ಬಂದಿ ನಿಲುವು: ಒಂದು ರಾಜ್ಯದಲ್ಲಿ ಮೇಕೆದಾಟು ಪರ, ಇನ್ನೊಂದು ರಾಜ್ಯದಲ್ಲಿ ಮೇಕೆದಾಟು ವಿರೋಧ ತಳೆಯುತ್ತಿರುವ ಕಾಂಗ್ರೆಸ್‌ನ ಅಸಲಿ ನಿಲುವು ಏನು?
ರಾಜಕೀಯ ಬಲಿ: ಕಾಂಗ್ರೆಸ್ ಪಕ್ಷವು ಕರ್ನಾಟಕದ ಜನರ ಜೊತೆಯಿದೆಯೋ ಅಥವಾ ತಮಿಳುನಾಡಿನ ಮೈತ್ರಿ ರಾಜಕಾರಣದ ಜೊತೆಯಿದೆಯೋ? ಮೈತ್ರಿಕೂಟದ ರಾಜಕೀಯಕ್ಕಾಗಿ ಕರ್ನಾಟಕವನ್ನು ಮತ್ತೆ ಬಲಿಕೊಡಲು ಹೊರಟಿದ್ದೀರಾ?
'ಚುನಾವಣಾ ಘೋಷಣೆಯಾದ ಮೇಕೆದಾಟು'
"ಕಾಂಗ್ರೆಸ್‌ಗೆ ಮೇಕೆದಾಟು ಎಂದರೆ ಚುನಾವಣೆ ಬಂದಾಗ ಮಾತ್ರ ನೆನಪಾಗುವ ಘೋಷಣೆ" ಎಂದು ಲೇವಡಿ ಮಾಡಿರುವ ಆರ್. ಅಶೋಕ್, ಅಧಿಕಾರ ಬಂದ ಮೇಲೆ ಕರ್ನಾಟಕದ ಹಕ್ಕು, ರೈತರ ಭಾವನೆ ಮತ್ತು ಕುಡಿಯುವ ನೀರಿನ ಭದ್ರತೆಯನ್ನು ಸರ್ಕಾರ ಸಂಪೂರ್ಣವಾಗಿ ಮರೆತಿದೆ ಎಂದು ಆರೋಪಿಸಿದ್ದಾರೆ. ಅಂದು ಕನ್ನಡಿಗರ ಹೆಸರಿನಲ್ಲಿ ರಾಜಕೀಯ ಮಾಡಿದವರು ಇಂದು ಹೈಕಮಾಂಡ್ ಮುಂದೆ ಶರಣಾಗಿದ್ದಾರೆ ಎಂದು ಅವರು ಟೀಕಿಸಿದ್ದಾರೆ.
"ಮೇಕೆದಾಟು ಉಳಿಸೋದು ಮುಖ್ಯವೋ, ಮೈತ್ರಿ ಉಳಿಸೋದು ಮುಖ್ಯವೋ?" ಇದಕ್ಕೆ ಕಾಂಗ್ರೆಸ್ ತಕ್ಷಣ ಉತ್ತರಿಸಬೇಕು ಎಂದು ಆರ್. ಅಶೋಕ್ ಆಗ್ರಹಿಸಿದ್ದಾರೆ.



