ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯ ಸರ್ಕಾರಿ ನೌಕರರು ಮತ್ತು ಅವರ ಕುಟುಂಬದವರ ಆರೋಗ್ಯ ಸುರಕ್ಷತೆಗೆ ಮಹತ್ವದ ನಿರ್ಧಾರ ಕೈಗೊಂಡಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ನೌಕರರ ವೈದ್ಯಕೀಯ ಚಿಕಿತ್ಸೆಯ ಪರಿಷ್ಕೃತ ಸಿಜಿಎಚ್‌ಎಸ್ - ಕೇಂದ್ರ ಸರ್ಕಾರಿ ಆರೋಗ್ಯ ಯೋಜನೆ ದರ ಪಟ್ಟಿಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ.
ಸರ್ಕಾರದ ಈ ನೂತನ ನಿರ್ಧಾರದಿಂದಾಗಿ ರಾಜ್ಯದ ಲಕ್ಷಾಂತರ ಸರ್ಕಾರಿ ನೌಕರರು ಹಾಗೂ ಅವರ ಅವಲಂಬಿತರಿಗೆ ಇನ್ನು ಮುಂದೆ ಖಾಸಗಿ ಮತ್ತು ಸಂಯೋಜಿತ ಆಸ್ಪತ್ರೆಗಳಲ್ಲಿ ಮತ್ತಷ್ಟು ಗುಣಮಟ್ಟದ ನಗದು ರಹಿತ ಅಥವಾ ಮರುಪಾವತಿ ಆಧಾರಿತ ವೈದ್ಯಕೀಯ ಚಿಕಿತ್ಸೆ ಸುಲಭವಾಗಿ ಸಿಗಲಿದೆ.
ಖಜಾನೆಗೆ 474 ಕೋಟಿ ಹೆಚ್ಚುವರಿ ಹೊರೆ:
ಪ್ರಸ್ತುತ ಮಾರುಕಟ್ಟೆಯ ಚಿಕಿತ್ಸಾ ವೆಚ್ಚಕ್ಕೆ ಅನುಗುಣವಾಗಿ ದರ ಪಟ್ಟಿಯನ್ನು ಪರಿಷ್ಕರಿಸಲಾಗಿದ್ದು, ಇದರಿಂದಾಗಿ ರಾಜ್ಯ ಸರ್ಕಾರಕ್ಕೆ ವೈದ್ಯಕೀಯ ಸೇವೆಗಾಗಿ ವಾರ್ಷಿಕವಾಗಿ ಹೆಚ್ಚುವರಿಯಾಗಿ 474 ಕೋಟಿ ರೂಪಾಯಿ ಆರ್ಥಿಕ ಹೊರೆ ಬೀಳಲಿದೆ. ಆದಾಗ್ಯೂ, ನೌಕರರ ಹಿತರಕ್ಷಣೆ ಮುಖ್ಯ ಎಂದು ಸರ್ಕಾರ ಈ ಅನುದಾನ ಒದಗಿಸಲು ಬದ್ಧವಾಗಿದೆ.
"ಸರ್ಕಾರಿ ನೌಕರರು ಹಾಗೂ ಅವರ ಕುಟುಂಬಕ್ಕೆ ಗುಣಮಟ್ಟದ ಆರೋಗ್ಯ ಸೇವೆ ಒದಗಿಸಲು ಮತ್ತು ಸಾಮಾಜಿಕ ಭದ್ರತೆಯನ್ನು ಖಾತ್ರಿಪಡಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ಪ್ರತಿಯೊಬ್ಬರ ಸ್ವಸ್ಥ ಮತ್ತು ಸದೃಢ ಭವಿಷ್ಯ ನಿರ್ಮಾಣ ಮಾಡುವುದೇ ಸರ್ಕಾರದ ಮುಖ್ಯ ಸಂಕಲ್ಪವಾಗಿದೆ," ಎಂದು ಡಿ.ಕೆ. ಶಿವಕುಮಾರ್ ಅವರು ತಿಳಿಸಿದ್ದಾರೆ.
ನೌಕರರಿಗೆ ಸಿಗುವ ಲಾಭಗಳೇನು?:
ಉತ್ತಮ ಆಸ್ಪತ್ರೆಗಳಲ್ಲಿ ಚಿಕಿತ್ಸೆ: ಸಿಜಿಎಚ್‌ಎಸ್ ದರಗಳು ಪರಿಷ್ಕರಣೆಗೊಂಡಿರುವುದರಿಂದ ಪ್ರಮುಖ ಕಾರ್ಪೊರೇಟ್ ಆಸ್ಪತ್ರೆಗಳು ಸರ್ಕಾರಿ ನೌಕರರಿಗೆ ಚಿಕಿತ್ಸೆ ನೀಡಲು ಹಿಂದೇಟು ಹಾಕುವುದಿಲ್ಲ. ಚಿಕಿತ್ಸಾ ದರಗಳ ಮಿತಿ ಹೆಚ್ಚಿರುವುದರಿಂದ ನೌಕರರು ತಮ್ಮ ಕೈಯಿಂದ ಭರಿಸಬೇಕಾದ ಹೆಚ್ಚುವರಿ ಹಣದ ಪ್ರಮಾಣ ಗಣನೀಯವಾಗಿ ತಗ್ಗಲಿದೆ.
ಸಾಮಾಜಿಕ ಭದ್ರತೆ: ನಿವೃತ್ತ ಹಾಗೂ ಸೇವೆಯಲ್ಲಿರುವ ನೌಕರರ ಕುಟುಂಬಗಳಿಗೆ ತುರ್ತು ಸಂದರ್ಭದಲ್ಲಿ ಸೂಕ್ತ ಆರೋಗ್ಯ ರಕ್ಷಣೆ ಸಿಗಲಿದೆ.
ಈ ಐತಿಹಾಸಿಕ ನಿರ್ಧಾರಕ್ಕೆ ರಾಜ್ಯ ಸರ್ಕಾರಿ ನೌಕರರ ಸಂಘವು ಸಂತಸ ವ್ಯಕ್ತಪಡಿಸಿದ್ದು, ಸಿಜಿಎಚ್‌ಎಸ್ ದರ ಪರಿಷ್ಕರಣೆಗೆ ದೀರ್ಘಕಾಲದ ಬೇಡಿಕೆಯಿಟ್ಟಿದ್ದ ನೌಕರರ ಸಂಘದ ಮನವಿಗೆ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿದೆ.



