ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ದೇಶಾದ್ಯಂತ ಭಾರಿ ಸಂಚಲನ ಮೂಡಿಸಿದ್ದ ಬಹುಕೋಟಿ ಬಿಟ್‌ಕಾಯಿನ್ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ) ತನಿಖೆಯನ್ನು ಚುರುಕುಗೊಳಿಸಿದೆ. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದ ಇಡಿ, ಈಗ ಪ್ರಮುಖ ಆರೋಪಿ ಶ್ರೀಕೃಷ್ಣ ರಮೇಶ್ ಆಲಿಯಾಸ್ ಶ್ರೀಕಿ ಸೇರಿದಂತೆ ಮೂವರ ವಿರುದ್ಧ ನಗರದ ಪಿಎಂಎಲ್‌ಎ ವಿಶೇಷ ನ್ಯಾಯಾಲಯಕ್ಕೆ 3,500 ಪುಟಗಳ ದೋಷಾರೋಪ ಪಟ್ಟಿ (ಚಾರ್ಜ್‌ಶೀಟ್) ಸಲ್ಲಿಸಿದೆ.
ಪ್ರಕರಣದ ಕಿಂಗ್‌ಪಿನ್ ಶ್ರೀಕಿ, ಆತನಿಗೆ ಸಾಥ್ ನೀಡಿದ್ದ ಉದ್ಯಮಿ ಸುನೀಶ್ ಹೆಗ್ಡೆ ಹಾಗೂ ಕ್ರಿಪ್ಟೋ ಕರೆನ್ಸಿ ವ್ಯಾಪಾರಿ ರಾಬಿನ್ ಖಂಡೇವಾಲಾ ಸೇರಿದಂತೆ ಖಾಸಗಿ ಕಂಪನಿಯೊಂದರ ವಿರುದ್ಧ ಈ ದೋಷಾರೋಪ ಪಟ್ಟಿ ಸಲ್ಲಿಕೆಯಾಗಿದೆ. ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಮೇ ತಿಂಗಳಲ್ಲಿ ಇಡಿ ಅಧಿಕಾರಿಗಳು ದಾಳಿ ನಡೆಸಿ ಈ ಮೂವರನ್ನು ಬಂಧಿಸಿದ್ದರು. ಆರೋಪಿಗಳು ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ.
ಸರ್ಕಾರಿ ಪೋರ್ಟಲ್ ಹ್ಯಾಕ್ ಮಾಡಿ 11.5 ಕೋಟಿ ಲೂಟಿ!:
ಅಂತಾರಾಷ್ಟ್ರೀಯ ಮಟ್ಟದ ಹ್ಯಾಕರ್ ಆಗಿರುವ ಶ್ರೀಕಿ, ಆನ್‌ಲೈನ್ ಗೇಮಿಂಗ್ ವೆಬ್‌ಸೈಟ್‌ಗಳನ್ನು ಹ್ಯಾಕ್ ಮಾಡುವಲ್ಲಿ ನುರಿತನಾಗಿದ್ದ. ಈತ ಕರ್ನಾಟಕ ಸರ್ಕಾರದ ಇ-ಪ್ರೊಕ್ಯೂರ್‌ಮೆಂಟ್ ಜಾಲತಾಣವನ್ನೇ ಹ್ಯಾಕ್ ಮಾಡಿ ಬರೋಬ್ಬರಿ 11.5 ಕೋಟಿ ರೂಪಾಯಿ ಲಪಟಾಯಿಸಿದ್ದ ಎಂದು ಚಾರ್ಜ್‌ಶೀಟ್‌ನಲ್ಲಿ ಇಡಿ ಉಲ್ಲೇಖಿಸಿದೆ.
ಶ್ರೀಕಿಯ ಐಷಾರಾಮಿ ಜೀವನಕ್ಕೆ ಹಣ ಉಣಿಸುತ್ತಿದ್ದ ಸುನೀಶ್ ಹೆಗ್ಡೆ:
ರಾಜಕೀಯ ನಂಟು ಹೊಂದಿರುವ ಉದ್ಯಮಿ ಹಾಗೂ ಗುತ್ತಿಗೆದಾರ ಸುನೀಶ್ ಹೆಗ್ಡೆ, ಹ್ಯಾಕರ್ ಶ್ರೀಕಿಯ ಐಷರಾಮಿ ಜೀವನಕ್ಕೆ ಬೇಕಾದ ಆರ್ಥಿಕ ನೆರವು ನೀಡುತ್ತಿದ್ದ. ಬದಲಿಗೆ, ಆನ್‌ಲೈನ್ ಗೇಮಿಂಗ್ ವೆಬ್‌ಸೈಟ್‌ಹಾಗೂ ಆ್ಯಪ್‌ಗಳನ್ನು ಹ್ಯಾಕ್ ಮಾಡುವಂತೆ ಶ್ರೀಕಿಗೆ ಒತ್ತಾಯಿಸುತ್ತಿದ್ದ. ಹ್ಯಾಕ್ ಆದ ಕಂಪನಿಗಳನ್ನು ಬ್ಲ್ಯಾಕ್‌ಮೇಲ್ ಮಾಡಿ, ಅವರಿಂದ ₹2 ಕೋಟಿ ಹಣ, ಕ್ಯಾಸಿನೋ ಚಿಪ್ಸ್ ಹಾಗೂ ವರ್ಚುಯಲ್ ಸ್ವತ್ತುಗಳನ್ನು ವಸೂಲಿ ಮಾಡಲು ಈತನೇ ಮಾಸ್ಟರ್ ಪ್ಲಾನ್ ರೂಪಿಸಿದ್ದ ಎಂದು ತನಿಖಾ ವರದಿ ಬಹಿರಂಗಪಡಿಸಿದೆ.
ಕದ್ದ ಬಿಟ್‌ಕಾಯಿನ್ ನಗದು ಮಾಡುತ್ತಿದ್ದ ರಾಬಿನ್ ಖಂಡೇವಾಲಾ:
ಜಾಗತಿಕ ಮಟ್ಟದ ಕ್ರಿಪ್ಟೋ ಕರೆನ್ಸಿ ವ್ಯಾಪಾರಿಯಾದ ರಾಬಿನ್ ಖಂಡೇವಾಲಾ, ಶ್ರೀಕಿ ಮತ್ತು ಸುನೀಶ್ ಹೆಗ್ಡೆ ವರ್ಚುಯಲ್ ಮೂಲಕ ಕದಿಯುತ್ತಿದ್ದ ಬಿಟ್‌ಕಾಯಿನ್‌ಗಳನ್ನು ಕ್ರಿಪ್ಟೋ ಮಾರುಕಟ್ಟೆಯಲ್ಲಿ ಖರೀದಿಸುತ್ತಿದ್ದ. ಬಳಿಕ ಅದನ್ನು ನಗದು ಹಣವನ್ನಾಗಿ ಮಾರ್ಪಡಿಸಿ, ಶ್ರೀಕಿ ಗ್ಯಾಂಗ್‌ನ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡುವ ಮೂಲಕ ಇಡೀ ನೆಟ್‌ವರ್ಕ್ ನಿರ್ವಹಿಸುತ್ತಿದ್ದ ಎಂದು ಇಡಿ ಪತ್ತೆಹಚ್ಚಿದೆ.
ಏನಿದು ಬಿಟ್‌ಕಾಯಿನ್ ಹಗರಣ?:
2017: ಶ್ರೀಕಿ ಮತ್ತು ಗ್ಯಾಂಗ್ ಯುನಿಕಾನ್ ಕ್ರಿಪ್ಟೋ ಎಕ್ಸ್‌ಚೇಂಜ್‌ನಿಂದ 60 ಬಿಟ್‌ಕಾಯಿನ್‌ಗಳನ್ನು ಹ್ಯಾಕ್ ಮಾಡಿತ್ತು.
2018-19: ವ್ಯವಸ್ಥಿತ ಸಂಚು ರೂಪಿಸಿ ಆನ್‌ಲೈನ್ ಪೋಕರ್ ಆ್ಯಪ್ ಹಾಗೂ ಕರ್ನಾಟಕ ಸರ್ಕಾರದ ಇ-ಪ್ರೊಕ್ಯೂರ್‌ಮೆಂಟ್ ಪೋರ್ಟಲ್ ಹ್ಯಾಕ್ ಮಾಡಿ 11.5 ಕೋಟಿ ದೋಚಲಾಗಿತ್ತು.
2020: ಡ್ರಗ್ಸ್ ಪ್ರಕರಣವೊಂದರಲ್ಲಿ ಕೆಂಪೇಗೌಡ ನಗರ ಪೊಲೀಸರು ಶ್ರೀಕಿಯನ್ನು ಬಂಧಿಸಿದಾಗ ಈ ಬಿಟ್‌ಕಾಯಿನ್ ಹಗರಣ ಮೊದಲ ಬಾರಿಗೆ ಬೆಳಕಿಗೆ ಬಂದಿತ್ತು.
2023: ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಈ ಬಹುಕೋಟಿ ಹಗರಣದ ತನಿಖೆಗೆ ವಿಶೇಷ ತನಿಖಾ ದಳ ರಚಿಸಿತ್ತು.
2024 (ಏಪ್ರಿಲ್-ಮೇ): ಪ್ರಕರಣ ಕೈಗೆತ್ತಿಕೊಂಡ ಇಡಿ ಅಧಿಕಾರಿಗಳು ಏಪ್ರಿಲ್‌ನಲ್ಲಿ ದಾಳಿ ನಡೆಸಿ, ಮೇ ತಿಂಗಳಲ್ಲಿ ಶ್ರೀಕಿ, ಸುನೀಶ್ ಹಾಗೂ ರಾಬಿನ್‌ನನ್ನು ಬಂಧಿಸಿದ್ದರು. ಸದ್ಯ ಸುದೀರ್ಘ ತನಿಖೆಯ ಬಳಿಕ ಇಡಿ ನ್ಯಾಯಾಲಯಕ್ಕೆ ಅಧಿಕೃತ ವರದಿ ಸಲ್ಲಿಸಿದೆ.



