Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

2028ರಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ನಿಶ್ಚಿತ, ಸಚಿವನೂ ಆಗ್ತೀನಿ: ರಮೇಶ್ ಜಾರಕಿಹೊಳಿ

Advertisement
Advertisement

ಚಂದ್ರವಳ್ಳಿ ನ್ಯೂಸ್, ಹೊಸಪೇಟೆ:
ರಾಜ್ಯದಲ್ಲಿ ಮುಂದಿನ 2028ರ ವಿಧಾನಸಭಾ ಚುನಾವಣೆ ಮುಗಿದ ಬಳಿಕ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವುದು ಸೂರ್ಯ ಚಂದ್ರರಷ್ಟೇ ಸತ್ಯ. ಆ ಸರ್ಕಾರದಲ್ಲಿ ನಾನೂ ಕೂಡ ಸಚಿವನಾಗುತ್ತೇನೆ. ಆದರೆ, ಅಧಿಕಾರಕ್ಕೆ ಬಂದ ತಕ್ಷಣವೇ ನಮ್ಮ ಪರಿಶಿಷ್ಟ ಪಂಗಡ ಸಮುದಾಯಕ್ಕೆ ಶೇ. 7.5 ರಷ್ಟು ಮೀಸಲಾತಿ ನೀಡದಿದ್ದರೆ, ನನ್ನ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರಬರಲು ನಾನು ಸದಾ ಸಿದ್ಧ" ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸ್ಫೋಟಕ ಹೇಳಿಕೆ ನೀಡಿದ್ದಾರೆ.

ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ 'ಸಾಮಾಜಿಕ ನ್ಯಾಯಕ್ಕಾಗಿ ಜಾಗೃತಿ ಸಮಾವೇಶ'ದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಹಾಗೂ ಸ್ವಂತ ಸಹೋದರನ ವಿರುದ್ಧವೇ ತೀವ್ರ ವಾಗ್ದಾಳಿ ನಡೆಸಿದರು.

"ರಾಜಕೀಯ ಗದ್ದುಗೆ ನಿರ್ಣಯಿಸುವ ಶಕ್ತಿ ನಮ್ಮ ಸಮಾಜಕ್ಕಿದೆ":
ತಮ್ಮ ಎಸ್‌ಟಿ ಸಮುದಾಯದ ರಾಜಕೀಯ ಬಲವನ್ನು ನೆನಪಿಸಿದ ರಮೇಶ್ ಜಾರಕಿಹೊಳಿ, "ಕರ್ನಾಟಕದಲ್ಲಿ ಯಾವ ಪಕ್ಷ ಅಧಿಕಾರಕ್ಕೆ ಬರಬೇಕು, ಯಾರು ಗದ್ದುಗೆಯಿಂದ ಕೆಳಗಿಳಿಯಬೇಕು ಎಂಬುದನ್ನು ನಿರ್ಣಯಿಸುವ ಶಕ್ತಿಯನ್ನು ದೇವರು ನಮ್ಮ ಸಮಾಜಕ್ಕೆ ಕೊಟ್ಟಿದ್ದಾನೆ. 1970ರ ದಶಕದಲ್ಲೇ ನಾವು ಕೇವಲ ಮೂರ್ನಾಲ್ಕು ಸೀಟುಗಳನ್ನು ಗೆದ್ದು, ಇಡೀ ಅಧಿಕಾರದ ಚುಕ್ಕಾಣಿಯನ್ನು ನಿಯಂತ್ರಿಸುತ್ತಿದ್ದೆವು. ಈಗ ನಾವು ಮತ್ತಷ್ಟು ಪ್ರಬಲವಾಗಿ ಸಂಘಟಿತರಾಗಬೇಕಿದೆ. ನಮ್ಮ ಸಮಾಜದ ಜೊತೆಗೆ ರಾಜ್ಯದಲ್ಲಿರುವ ಇತರೆಲ್ಲಾ ಸಣ್ಣಪುಟ್ಟ ಹಿಂದುಳಿದ ಸಮುದಾಯಗಳನ್ನು ಜೊತೆಯಲ್ಲಿ ಕರೆದುಕೊಂಡು ಹೋದಾಗ ಮಾತ್ರ ನಮಗೆ ನಿಜವಾದ ರಾಜಕೀಯ ಶಕ್ತಿ ಸಿಗಲು ಸಾಧ್ಯ" ಎಂದು ಸಮುದಾಯಕ್ಕೆ ಕರೆ ನೀಡಿದರು.

ಸಹೋದರ ಸತೀಶ್ ಜಾರಕಿಹೊಳಿಗೆ ನೇರ ಸವಾಲು!:
ಇದೇ ವೇಳೆ ತಮ್ಮ ಒಡಹುಟ್ಟಿದ ಸಹೋದರ ಹಾಗೂ ಹಾಲಿ ಸಚಿವ ಸತೀಶ್ ಜಾರಕಿಹೊಳಿ ವಿರುದ್ಧ ಪರೋಕ್ಷವಾಗಿ ಕಿಡಿಕಾರಿದ ರಮೇಶ್, "ಇವತ್ತು ಸಮಾಜದ ಹಿತದೃಷ್ಟಿಯಿಂದ, ಮೀಸಲಾತಿ ಹಕ್ಕಿಗಾಗಿ ಧ್ವನಿ ಎತ್ತಲು ಕೆಲವರಿಗೆ ಧೈರ್ಯವಿಲ್ಲ. ಒಂದು ವೇಳೆ ಸತೀಶ್ ಜಾರಕಿಹೊಳಿ ಇರೋ ಸ್ಥಾನದಲ್ಲಿ ನಾನೇನಾದರೂ ಇದ್ದಿದ್ದರೆ, ಸಮುದಾಯಕ್ಕೆ ಅನ್ಯಾಯವಾದ ತಕ್ಷಣ ಇಷ್ಟೊತ್ತಿಗಾಗಲೇ ಸಚಿವ ಸ್ಥಾನಕ್ಕೆ ರಾಜೀನಾಮೆ ಎಸೆದು ಹೊರಬರುತ್ತಿದ್ದೆ. ಆದರೆ ಅಧಿಕಾರವನ್ನು ತ್ಯಾಗ ಮಾಡುವ ಆ ಶಕ್ತಿ ಮತ್ತು ಧೈರ್ಯ ಸತೀಶ್ ಜಾರಕಿಹೊಳಿಗೆ ಇಲ್ಲ" ಎಂದು ಲೇವಡಿ ಮಾಡಿದರು.

"ಉಚಿತ ಗ್ಯಾರಂಟಿಗಳಿಂದ ಬಡತನ ದೂರಾಗಲ್ಲ":
ರಾಜ್ಯ ಸರ್ಕಾರದ ಉಚಿತ ಯೋಜನೆಗಳು ಹಾಗೂ ಗ್ಯಾರಂಟಿಗಳ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದ ಅವರು, "ಬಡವರಿಗೆ ಕೇವಲ ನಾಲ್ಕು ಅಕ್ಕಿ ಕೊಟ್ಟು, ಅಥವಾ ಉಚಿತವಾಗಿ ಏನನ್ನೋ ಕೈಗಿಟ್ಟರೆ ಸಮಾಜದ ಬಡತನ ನಿರ್ಮೂಲನೆಯಾಗುವುದಿಲ್ಲ. ಅದು ಕೇವಲ ತಾತ್ಕಾಲಿಕ ಅಷ್ಟೇ. ಬಡತನ ಹೋಗಲಾಡಿಸಬೇಕಾದರೆ ಮೊದಲು ರೈತರ ಜಮೀನುಗಳಿಗೆ ಸೂಕ್ತ ನೀರಾವರಿ ಸೌಲಭ್ಯ ಕಲ್ಪಿಸಬೇಕು. ಕೃಷಿ ಮತ್ತು ನೀರಾವರಿ ಕ್ಷೇತ್ರಗಳು ಅಭಿವೃದ್ಧಿಯಾದಾಗ ಮಾತ್ರ ಗ್ರಾಮೀಣ ಭಾಗದ ಆರ್ಥಿಕತೆ ಸುಧಾರಿಸಿ ಬಡತನ ಸಂಪೂರ್ಣವಾಗಿ ದೂರವಾಗುತ್ತದೆ" ಎಂದು ಸರ್ಕಾರಕ್ಕೆ ಕಿವಿಮಾತು ಹೇಳಿದರು.

ಮುಂಬರುವ 2028ರ ಚುನಾವಣೆ ಹಾಗೂ ತಮ್ಮ ರಾಜಕೀಯ ಭವಿಷ್ಯದ ಕುರಿತು ರಮೇಶ್ ಜಾರಕಿಹೊಳಿ ಆಡಿರುವ ಈ ಮಾತುಗಳು ಈಗ ರಾಜ್ಯ ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ಗ್ರಾಸವಾಗಿವೆ.

 

 

 

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.