ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯದ ಆರ್ಥಿಕ ಪರಿಸ್ಥಿತಿ ಸಂಪೂರ್ಣ ಹದಗೆಟ್ಟಿದೆ ಎಂದು ಆರೋಪಿಸಿ ಮತ್ತು ಆರ್ಥಿಕ ಇಲಾಖೆಯ ಪತ್ರದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಬಿಜೆಪಿ ನಾಯಕರು ವಿಧಾನಸೌಧದ ಕೆಂಗಲ್ ಹನುಮಂತಯ್ಯ ಪ್ರತಿಮೆಯ ಬಳಿ ವಿನೂತನವಾಗಿ ಪ್ರತಿಭಟನೆ ನಡೆಸಿದರು. ಕೈಯಲ್ಲಿ ಖಾಲಿ ಚೊಂಬು ಮತ್ತು ತೆಂಗಿನ ಚಿಪ್ಪುಗಳನ್ನು ಹಿಡಿದು, "ಪಾಪರ್ ಸರ್ಕಾರ" ಹಾಗೂ ಆರ್ಥಿಕ ನಿರ್ವಹಣೆಯಲ್ಲಿ ಕಾಂಗ್ರೆಸ್ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಘೋಷಣೆಗಳನ್ನು ಕೂಗಿದರು.
ಈ ಪ್ರತಿಭಟನೆಯಲ್ಲಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್, ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ಸುನೀಲ್ ಕುಮಾರ್, ಸುರೇಶ್ ಕುಮಾರ್, ಛಲವಾದಿ ನಾರಾಯಣಸ್ವಾಮಿ ಸೇರಿದಂತೆ ವಿಧಾನ ಪರಿಷತ್ ಸದಸ್ಯರು ಹಾಗೂ ಪ್ರಮುಖ ನಾಯಕರು ಭಾಗವಹಿಸಿದ್ದರು.
ಮುಖ್ಯಮಂತ್ರಿಗಳು ರಾಜೀನಾಮೆ ನೀಡಬೇಕು - ಆರ್.ಅಶೋಕ್ ಆಕ್ರೋಶ ಪ್ರತಿಭಟನೆಯಲ್ಲಿ ಮಾತನಾಡಿದ ವಿಪಕ್ಷ ನಾಯಕ ಆರ್.ಅಶೋಕ್, ಹಣಕಾಸು ಇಲಾಖೆಯನ್ನು ನಿಭಾಯಿಸಲು ಇವರಿಂದ ಸಾಧ್ಯವಾಗುತ್ತಿಲ್ಲ. ಹೀಗಾಗಿ ಮುಖ್ಯಮಂತ್ರಿಯಾಗಿ ಮುಂದುವರಿಯಲು ಡಿ.ಕೆ. ಶಿವಕುಮಾರ್ ಅವರಿಗೆ ಯಾವುದೇ ನೈತಿಕ ಹಕ್ಕಿಲ್ಲ, ತಕ್ಷಣವೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ಅಂಕಿ-ಅಂಶಗಳ ಘೋಷಣೆ: ಸಿಎಂ ಮಂಗಳೂರಿಗೆ ಹೋಗಿ 32 ಸಾವಿರ ಕೋಟಿ, ಕಲಬುರಗಿಯಲ್ಲಿ 40 ಸಾವಿರ ಕೋಟಿ, ಚಾಮರಾಜನಗರದಲ್ಲಿ 20 ಸಾವಿರ ಕೋಟಿ ಹಾಗೂ ಬಾಗಲಕೋಟೆ ಸಚಿವ ಸಂಪುಟ ಸಭೆಯಲ್ಲಿ 50 ಸಾವಿರ ಕೋಟಿ ರೂ.ಗಳ ಘೋಷಣೆ ಮಾಡಿದ್ದಾರೆ. ಆದರೆ ಖಜಾನೆಯಲ್ಲಿ ಹಣವಿಲ್ಲದೆ ಕೇವಲ ಸುಳ್ಳು ಪ್ರಕಟಣೆಗಳನ್ನು ನೀಡಲಾಗುತ್ತಿದೆ.
ಅನಾವಶ್ಯಕ ಘೋಷಣೆಗಳು: ಬರ ಪರಿಹಾರ ನೀಡಲು ಹಣವಿಲ್ಲ, ಐದು ತಿಂಗಳಿಂದ ವೃದ್ಧಾಪ್ಯ ವೇತನ ಕೊಟ್ಟಿಲ್ಲ, ಶಿಕ್ಷಕರಿಗೆ ಸರಿಯಾಗಿ ಸಂಬಳ ಸಿಗುತ್ತಿಲ್ಲ, ರೈತರಿಗೆ ವಿದ್ಯುತ್ ಇಲ್ಲ ಮತ್ತು ಹಾಲು ಉತ್ಪಾದಕರಿಗೆ 12 ತಿಂಗಳಿಂದ ಸಬ್ಸಿಡಿ ಹಣ ಪಾವತಿಸಿಲ್ಲ ಎಂದು ವಾಗ್ದಾಳಿ ನಡೆಸಿದರು.
ರಾಜ್ಯದಲ್ಲಿ ಸರ್ಕಾರ ನಡೆಸುವ ಯೋಗ್ಯತೆಯನ್ನು ಕಾಂಗ್ರೆಸ್ ಸರ್ಕಾರ ಕಳೆದುಕೊಂಡಿದ್ದು, ರಾಜ್ಯ ದಿವಾಳಿಯಾಗಿರುವ ಬಗ್ಗೆ ಆರ್ಥಿಕ ಇಲಾಖೆಯೇ ಶ್ವೇತಪತ್ರದಂತಹ ಪತ್ರ ಬರೆದಿದೆ ಎಂದು ಕಿಡಿಕಾರಿದರು.
ರಾಜ್ಯದ ಆರ್ಥಿಕ ಪರಿಸ್ಥಿತಿಯ ಬಗ್ಗೆ ಶ್ವೇತಪತ್ರ ಹೊರಡಿಸಬೇಕು: ಬಿ.ವೈ.ವಿಜಯೇಂದ್ರ
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಾತನಾಡಿ, ರಾಜ್ಯ ಸರ್ಕಾರದ ಆರ್ಥಿಕ ಪರಿಸ್ಥಿತಿಯ ನೈಜ ಚಿತ್ರಣವನ್ನು ಜನತೆಯ ಮುಂದಿಡಲು ಸಿಎಂ ತಕ್ಷಣವೇ ಶ್ವೇತಪತ್ರ ಹೊರಡಿಸಬೇಕು ಎಂದು ಆಗ್ರಹಿಸಿದರು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ 4 ಲಕ್ಷ ಕೋಟಿ ರೂ.ಗಳಿಗೂ ಅಧಿಕ ಹೊಸ ಸಾಲ ಮಾಡಿದ್ದು, ಒಟ್ಟಾರೆ ಸಾಲದ ಪ್ರಮಾಣ 8 ಲಕ್ಷ ಕೋಟಿ ರೂ. ತಲುಪಿದೆ. ಸಾಲ ಮಾಡಿರುವುದನ್ನು ಬಿಟ್ಟರೆ ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ ಎಂದರು.
ಹೋದಲ್ಲೆಲ್ಲಾ ಸಾವಿರಾರು ಕೋಟಿ ರೂ.ಗಳ ಅಭಿವೃದ್ಧಿ ಕಾಮಗಾರಿಗಳ ಘೋಷಣೆ ಮಾಡುತ್ತಿರುವ ಸರ್ಕಾರದ ವಾಸ್ತವಿಕ ಸತ್ಯವೆಂದರೆ, ರಾಜ್ಯದ ಖಜಾನೆಯಲ್ಲಿ ಒಂದು ರೂಪಾಯಿಯೂ ಇಲ್ಲ. ಬಡವರಿಗೆ ಮತ್ತು ರೈತರಿಗೆ ಪರಿಹಾರ ನೀಡಲು ಹಣವಿಲ್ಲದೆ ರಾಜ್ಯದ ಆರ್ಥಿಕ ವ್ಯವಸ್ಥೆ ಸಂಪೂರ್ಣ ಕುಸಿದುಬಿದ್ದಿದ್ದು, ಪ್ರಸ್ತುತ ಸರ್ಕಾರವು 'ಐಸಿಯು'ನಲ್ಲಿದೆ ಎಂದು ತೀವ್ರವಾಗಿ ಟೀಕಿಸಿದರು.




