ಚಂದ್ರವಳ್ಳಿ ನ್ಯೂಸ್, ಚಿಕ್ಕಮಗಳೂರು:
1281 ಕೋಟಿ ವೆಚ್ಚದ ಗೋಂಧಿ ನೀರಾವರಿ ಯೋಜನೆಯನ್ನು ತಕ್ಷಣವೇ ಪೂರ್ಣಗೊಳಿಸಬೇಕು ಹಾಗೂ ರಾಜ್ಯ ಸರ್ಕಾರದ ಜನವಿರೋಧಿ ನೀತಿಗಳನ್ನು ಖಂಡಿಸಿ ಬಿಜೆಪಿ ನಾಯಕ ಸಿ.ಟಿ. ರವಿ ನೇತೃತ್ವದಲ್ಲಿ ಸಖರಾಯಪಟ್ಟಣದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯಿತು. ಬಿಜೆಪಿ ಗ್ರಾಮಾಂತರ ಮಂಡಲ ಹಮ್ಮಿಕೊಂಡಿದ್ದ ಈ ಪ್ರತಿಭಟನೆಯಲ್ಲಿ ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಲಾಯಿತು.
ಗಾಂದಿ ನೀರಾವರಿ ಯೋಜನೆ: ₹1281 ಕೋಟಿ ವೆಚ್ಚದ ಕಾಮಗಾರಿಗಳನ್ನು ವಿಳಂಬ ಮಾಡದೆ ತಕ್ಷಣವೇ ಪೂರ್ಣಗೊಳಿಸಿ ರೈತರಿಗೆ ನೀರು ಒದಗಿಸಬೇಕು.
ಅಡಿಕೆ ಬೆಲೆ ಕುಸಿತ: ಸರ್ಕಾರ ಅಡಿಕೆ ನಿಷೇಧದ ಕುರಿತು ನೀಡಿದ ಬೇಜವಾಬ್ದಾರಿ ಹೇಳಿಕೆಯಿಂದಾಗಿ ಬೆಲೆ ದಿಢೀರ್ ಕುಸಿದಿದೆ. ಇದು ಕಾಂಗ್ರೆಸ್ನ ಸೂಟ್ಕೇಸ್ ಸಂಸ್ಕೃತಿ ಮತ್ತು ಗುಟ್ಕಾ ಕಂಪನಿಗಳಿಗೆ ಲಾಭ ತಂದಿದೆಯೇ ಹೊರತು, ಶ್ರಮಜೀವಿ ರೈತರ ಬದುಕಿಗೆ ಮರಣಶಾಸನ ಬರೆದಿದೆ.
ಬರ ಪರಿಹಾರ ಘೋಷಣೆ: ಕಡೂರು ಮತ್ತು ಚಿಕ್ಕಮಗಳೂರು ತಾಲೂಕುಗಳಲ್ಲಿ ತೀವ್ರ ಬರಪೀಡಿತ ಪರಿಸ್ಥಿತಿಯಿದ್ದರೂ ಸರ್ಕಾರ ನಿರ್ಲಕ್ಷ್ಯ ವಹಿಸಿದೆ. ತಕ್ಷಣವೇ ಈ ಎರಡೂ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿ ಸೂಕ್ತ ಪರಿಹಾರ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬೇಕು.
ಈ ಪ್ರತಿಭಟನೆಯಲ್ಲಿ ರಾಜ್ಯ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಹೆಚ್.ಸಿ. ಕಲ್ಮರುಡಪ್ಪ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾದ ಈಶ್ವರಹಳ್ಳಿ ಮಹೇಶ್, ಬೀಕನಹಳ್ಳಿ ಸೋಮಶೇಖರ್, ಪ್ರಧಾನ ಕಾರ್ಯದರ್ಶಿ ರವೀಂದ್ರ ಬೆಳವಾಡಿ, ಜಿಲ್ಲಾ ಕಾರ್ಯದರ್ಶಿ ಚಿಕ್ಕದೇವನೂರು ರವಿ, ರೈತ ಮೋರ್ಚಾ ಜಿಲ್ಲಾಧ್ಯಕ್ಷ ಶಂಬಯ್ಯನೂರು ಆನಂದಪ್ಪ ಸೇರಿದಂತೆ ಹಲವು ಪ್ರಮುಖ ಮುಖಂಡರು ಹಾಗೂ ಸ್ಥಳೀಯ ರೈತರು ಭಾಗವಹಿಸಿದ್ದರು.




