ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿರುವ ಸರ್ಕಾರಿ ಜಮೀನುಗಳಲ್ಲಿ 'ಫಲವೃಕ್ಷೋದ್ಯಾನ' ಅಭಿವೃದ್ಧಿಪಡಿಸಿ, ಹರಾಜು ಪ್ರಕ್ರಿಯೆಯ ಮೂಲಕ ಸ್ಥಳೀಯ ಯುವಕರಿಗೆ ಗುತ್ತಿಗೆ ನೀಡುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಅರಣ್ಯ ಸಚಿವ ಈಶ್ವರ್ ಬಿ. ಖಂಡ್ರೆ ಮಹತ್ವದ ಸೂಚನೆ ನೀಡಿದ್ದಾರೆ.
ಈ ಹೊಸ ಯೋಜನೆಯಿಂದ ಗ್ರಾಮೀಣ ಭಾಗದಲ್ಲಿ ಹಸಿರು ಹೊದಿಕೆ ಹೆಚ್ಚುವುದರ ಜೊತೆಗೆ, ಭೂರಹಿತ ಯುವಕರಿಗೆ ಉದ್ಯೋಗಾವಕಾಶ ಮತ್ತು ಗ್ರಾಮ ಪಂಚಾಯತ್‌ಗಳಿಗೆ ಆದಾಯ ಹೆಚ್ಚಲಿದೆ ಎಂದು ಇಲಾಖೆಯ ಕಾರ್ಯದರ್ಶಿಗೆ ನೀಡಿರುವ ಲಿಖಿತ ಆದೇಶದಲ್ಲಿ ತಿಳಿಸಿದ್ದಾರೆ.
ಫಲವೃಕ್ಷೋದ್ಯಾನದ ಪ್ರಮುಖ ಅನುಕೂಲಗಳು:ಸರ್ಕಾರಿ ಭೂಮಿ ಒತ್ತುವರಿಗೆ ಬ್ರೇಕ್: ಕಂದಾಯ ಇಲಾಖೆಗೆ ಸೇರಿದ ಸರ್ಕಾರಿ ಜಮೀನಿನಲ್ಲಿ ಮಾವು, ಸಪೋಟ, ಬೆಟ್ಟದನೆಲ್ಲಿಕಾಯಿ, ತೆಂಗು, ಹೈಬ್ರಿಡ್ ನೇರಳೆ ಹಾಗೂ ಹುಣಸೆ ಮುಂತಾದ ತೋಟಗಾರಿಕೆ ಬೆಳೆಗಳನ್ನು ಬೆಳೆಸುವುದರಿಂದ ಭೂಮಿ ಒತ್ತುವರಿಯಾಗುವುದನ್ನು ತಡೆಯಬಹುದು.
ಭವಿಷ್ಯದ ಯೋಜನೆಗಳಿಗೆ ಬಳಸಲು ಅವಕಾಶ: ಈ ಜಮೀನುಗಳಲ್ಲಿ ಬೆಳೆಸಲಾಗುವ ವೃಕ್ಷಗಳನ್ನು ಅಗತ್ಯಬಿದ್ದಾಗ ತೆರವುಗೊಳಿಸಿ ಸರ್ಕಾರದ ಯೋಜನೆಗಳಿಗೆ ಭೂ ಬಳಕೆ ಮಾಡಲು ಮುಕ್ತ ಅವಕಾಶವಿರುತ್ತದೆ.
ರಸ್ತೆ ಇಕ್ಕೆಲಗಳಲ್ಲಿ ಗಿಡ ನೆಡಲು ಪ್ಲಾನ್: ರಾಜ್ಯ ಹೆದ್ದಾರಿ, ಜಿಲ್ಲಾ ಮುಖ್ಯರಸ್ತೆ ಹಾಗೂ ಸಂಪರ್ಕ ರಸ್ತೆಗಳ ಎರಡೂ ಬದಿಯಲ್ಲಿ ಹುಣಸೆ, ಮಾವು ಮುಂತಾದ ಮರಗಳನ್ನು ನೆಟ್ಟು, ಅವುಗಳನ್ನು ವಾರ್ಷಿಕ ಆಧಾರದಲ್ಲಿ ಸ್ಥಳೀಯರಿಗೆ ಹರಾಜು ಮಾಡಲಾಗುವುದು.
ಗ್ರಾಮೀಣರಿಗೆ ಹೆಚ್ಚುವರಿ ಆದಾಯ ಈ ಯೋಜನೆಯಿಂದ ಬರುವ ಆದಾಯವು ಗ್ರಾಮ ಪಂಚಾಯತ್‌ಗಳು ಹಾಗೂ ಕಂದಾಯ ಇಲಾಖೆಗೆ ತಲುಪಲಿದ್ದು, ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿಗೆ ಆರ್ಥಿಕ ನೆರವು ಸಿಗಲಿದೆ. ಅಷ್ಟೇ ಅಲ್ಲದೆ, ಗುತ್ತಿಗೆ ಪಡೆಯುವ ಸ್ಥಳೀಯ ನಿರುದ್ಯೋಗಿ ಯುವಕರಿಗೆ ಸ್ಥಿರವಾದ ಹೆಚ್ಚುವರಿ ಆದಾಯದ ಮೂಲ ಕಂಡುಕೊಳ್ಳಲು ಸಹಾಯವಾಗಲಿದೆ.
ಕ್ರಿಯಾ ಯೋಜನೆ ರೂಪಿಸಲು ನಿರ್ದೇಶನ ಪಂಚಾಯತ್ ವ್ಯಾಪ್ತಿಯ ಕಂದಾಯ ಜಮೀನುಗಳಲ್ಲಿ ವಿಬಿ ಜಿ ರಾಮ್ ಜಿ ಸಹಯೋಗದೊಂದಿಗೆ ಫಲವೃಕ್ಷೋದ್ಯಾನ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಕಂದಾಯ ಮತ್ತು ಅರಣ್ಯ ಇಲಾಖೆಯ ಉನ್ನತಾಧಿಕಾರಿಗಳೊಂದಿಗೆ ತಕ್ಷಣವೇ ಚರ್ಚಿಸಿ, ಸಮಗ್ರ ಕ್ರಿಯಾ ಯೋಜನೆ ಸಿದ್ಧಪಡಿಸುವಂತೆ ಕಾರ್ಯದರ್ಶಿಗೆ ಸಚಿವರು ಸ್ಪಷ್ಟ ನಿರ್ದೇಶನ ನೀಡಿದ್ದಾರೆ.



