ಹೆಚ್.ಸಿ ಗಿರೀಶ್, ಹರಿಯಬ್ಬೆ.
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಸ್ವಂತ ಮನೆ ಹೊಂದುವುದು ಪ್ರತಿಯೊಬ್ಬ ನಾಗರಿಕನ ಜೀವಮಾನದ ದೊಡ್ಡ ಕನಸು. ಆದರೆ ಮನೆ ನಿರ್ಮಾಣ ಪೂರ್ಣಗೊಂಡ ನಂತರ ಕಾನೂನಾತ್ಮಕ ಪ್ರಕ್ರಿಯೆಗಳು ಮತ್ತು ವಿವಿಧ ಇಲಾಖೆಗಳಿಂದ ಅನುಮತಿ ಪಡೆಯುವುದು ಜನಸಾಮಾನ್ಯರಿಗೆ ದೊಡ್ಡ ಸವಾಲಾಗಿ ಪರಿಣಮಿಸಿತ್ತು.
ಇದನ್ನು ಮನಗಂಡ ಕರ್ನಾಟಕ ಸರ್ಕಾರವು ನಗರಾಭಿವೃದ್ಧಿ ಇಲಾಖೆಯ ಮೂಲಕ ಹಳೇ ನಿಯಮಾವಳಿಗಳಿಗೆ ಮಹತ್ವದ ತಿದ್ದುಪಡಿ ತಂದಿದ್ದು, ಸಾರ್ವಜನಿಕರ ಆಡಳಿತಾತ್ಮಕ ಹೊರೆಯನ್ನು ಗಣನೀಯವಾಗಿ ತಗ್ಗಿಸಿದೆ.
ಆದರೆ ಇದೇ ಭಾಗ್ಯ ವಾಣಿಜ್ಯ ಮತ್ತು ಕೈಗಾರಿಕೆಗಳಿಗೆ ಮಾಲೀಕರಿಗೆ ಲಭ್ಯವಾಗದಿರುವುದು ವಿಪರ್ಯಾಸವೇ ಸರಿ.
ರಾಜ್ಯದ ಮಹಾನಗರ ಪಾಲಿಕೆಗಳ ವ್ಯಾಪ್ತಿಯನ್ನು ಹೊರತುಪಡಿಸಿ, ಉಳಿದ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ನಿರ್ಮಿಸಲಾಗುವ ವಸತಿ ಕಟ್ಟಡಗಳಿಗೆ 'ಸ್ವಾಧೀನಾನುಭವ ಪ್ರಮಾಣ ಪತ್ರ' (Occupancy Certificate - OC) ಪಡೆಯುವುದರಿಂದ ವಿನಾಯಿತಿ ನೀಡಿ ಡಿಕೆಶಿ ನೇತೃತ್ವದ ಕಾಂಗ್ರೆಸ್ ಸರ್ಕಾರ ಐತಿಹಾಸಿಕ ಆದೇಶ ಹೊರಡಿಸಿದೆ.
ಹಿನ್ನೆಲೆ ಮತ್ತು ಸರ್ಕಾರದ ನೂತನ ಆದೇಶ:
ಕರ್ನಾಟಕ ಪೌರಸಭೆಗಳ ಕಾಯ್ದೆ 1964ರ ಕಲೆಂ 190(2-A) ರಡಿ ಸರ್ಕಾರಕ್ಕೆ ಪ್ರದತ್ತವಾಗಿರುವ ಅಧಿಕಾರವನ್ನು ಚಲಾಯಿಸಿ ಈ ಅದ್ಭುತ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಈ ಹಿಂದೆ 24.10.2025 ರಂದು ಹೊರಡಿಸಲಾಗಿದ್ದ ಆದೇಶದಲ್ಲಿ ಕೇವಲ 1200 ಚದರ ಅಡಿ ವಿಸ್ತೀರ್ಣದವರೆಗಿನ (ನೆಲ + 2 ಅಂತಸ್ತು ಅಥವಾ Stilt + 3 ಅಂತಸ್ತು) ವಸತಿ ಕಟ್ಟಡಗಳಿಗೆ ಮಾತ್ರ ಈ ವಿನಾಯಿತಿ ನೀಡಲಾಗಿತ್ತು.
ಆದರೆ, ಪ್ರಸ್ತುತ ಸಾರ್ವಜನಿಕರ ಹಿತದೃಷ್ಟಿಯಿಂದ ಮತ್ತು ಸುಲಭ ಆಡಳಿತಕ್ಕೆ (Ease of Living) ಉತ್ತೇಜನ ನೀಡಲು ಈ ಮಿತಿಯನ್ನು ದುಪ್ಪಟ್ಟುಗೊಳಿಸಲಾಗಿದೆ. ನೂತನ ಆದೇಶದ ಪ್ರಕಾರ, ಈಗ 2400 ಚದರ ಅಡಿ ವಿಸ್ತೀರ್ಣದವರೆಗಿನ ವಸತಿ ಕಟ್ಟಡಗಳಿಗೆ ಸ್ವಾಧೀನಾನುಭವ ಪ್ರಮಾಣ ಪತ್ರದಿಂದ ಸಂಪೂರ್ಣ ಮುಕ್ತಿ ಸಿಕ್ಕಿದೆ.
ಪ್ರಮುಖ ಮುಖ್ಯಾಂಶಗಳು (Key Highlights):
ವಿಸ್ತೀರ್ಣ ಮಿತಿಯ ಹೆಚ್ಚಳ: ವಿನಾಯಿತಿಯ ಮಿತಿಯನ್ನು 1200 ಚದರ ಅಡಿಯಿಂದ 2400 ಚದರ ಅಡಿಗೆ (ಶೇ. 20ರಷ್ಟು ಹೆಚ್ಚುವರಿ ವ್ಯತ್ಯಾಸದ ಮಿತಿಯೊಂದಿಗೆ) ಏರಿಕೆ ಮಾಡಲಾಗಿದೆ.
ಅನ್ವಯಿಸುವ ಕಟ್ಟಡಗಳು: ಜಿ+3 (ನೆಲ + 3 ಅಂತಸ್ತುಗಳು) ಅಥವಾ ಸ್ಟಿಲ್ಟ್ ಪಾರ್ಕಿಂಗ್ + 4 ಮಹಡಿಗಳನ್ನು ಹೊಂದಿರುವ ವಸತಿ ಕಟ್ಟಡಗಳಿಗೆ ಇದು ಅನ್ವಯಿಸುತ್ತದೆ.
ವಿದ್ಯುತ್ ಸಂಪರ್ಕ ಸರಳೀಕರಣ: ದಿನಾಂಕ 31.05.2026ರ ಒಳಗಾಗಿ ಪೂರ್ಣಗೊಂಡು ವಿದ್ಯುತ್ ಸಂಪರ್ಕಕ್ಕಾಗಿ ಅರ್ಜಿ ಸಲ್ಲಿಸಿರುವ ಕಟ್ಟಡಗಳಿಗೆ ಒಮ್ಮೆಗೆ ಅನ್ವಯವಾಗುವಂತೆ ಒಸಿ (OC) ಇಲ್ಲದೆಯೇ ವಿದ್ಯುತ್ ಸಂಪರ್ಕ ನೀಡಲು ಆದೇಶಿಸಲಾಗಿದೆ.
'ಒಸಿ' ಮುಕ್ತಿ, ವಾಣಿಜ್ಯ-ಕೈಗಾರಿಕೆಗಳಿಗೆ ಇಲ್ಲ ಭಾಗ್ಯ!:
ಸ್ವಂತ ಮನೆ ನಿರ್ಮಾಣ ಮಾಡಿಕೊಂಡಿರುವ ರಾಜ್ಯದ ಲಕ್ಷಾಂತರ ಜನಸಾಮಾನ್ಯರಿಗೆ ಮತ್ತು ಮಧ್ಯಮ ವರ್ಗದವರಿಗೆ ಕರ್ನಾಟಕ ಸರ್ಕಾರವು ಮಹತ್ತರವಾದ ಸಿಹಿ ಸುದ್ದಿ ನೀಡಿದೆ. ಕಟ್ಟಡದ 'ಸ್ವಾಧೀನ ಪ್ರಮಾಣಪತ್ರ' (Occupancy Certificate - OC) ಇಲ್ಲದೆ ಕಾಯಂ ವಿದ್ಯುತ್ ಸಂಪರ್ಕ ಸಿಗದೆ ಪರದಾಡುತ್ತಿದ್ದ ಮನೆ ಮಾಲೀಕರಿಗೆ ನೆರವಾಗಲು ಸರ್ಕಾರ ಬಂಪರ್ ಕೊಡುಗೆ ಪ್ರಕಟಿಸಿದೆ.
2,400 ಚದರ ಅಡಿವರೆಗಿನ ವಸತಿ ನಿವೇಶನಗಳಲ್ಲಿ ನಿರ್ಮಿಸಲಾದ ಮನೆಗಳಿಗೆ 'ಒಸಿ' ನಿಯಮದಿಂದ ಏಕಕಾಲದ (One-time) ವಿನಾಯಿತಿ ನೀಡಿ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.
ಆದರೆ, ಈ ಪ್ರಮುಖ ಸವಲತ್ತು ಕೇವಲ ವಸತಿ ಕಟ್ಟಡಗಳಿಗೆ ಮಾತ್ರ ಸೀಮಿತವಾಗಿದ್ದು, ವಾಣಿಜ್ಯ (Commercial) ಮತ್ತು ಕೈಗಾರಿಕಾ (Industrial) ಕಟ್ಟಡಗಳಿಗೆ ಈ ಭಾಗ್ಯ ಸಿಕ್ಕಿಲ್ಲ.
ಪ್ರಮುಖ ಮುಖ್ಯಾಂಶಗಳು ಮತ್ತು ನಿಯಮಗಳು:
ಯಾರಿಗೆ ಅನ್ವಯ?: ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಸೇರಿದಂತೆ ರಾಜ್ಯದ ನಗರ ಹಾಗೂ ಗ್ರಾಮೀಣ ಭಾಗದ ವಸತಿ ಕಟ್ಟಡಗಳಿಗೆ ಇದು ಅನ್ವಯಿಸುತ್ತದೆ. ನೆಲ ಅಂತಸ್ತು + 3 ಮಹಡಿ (G+3) ಅಥವಾ ಸ್ಟಿಲ್ಟ್ ಪಾರ್ಕಿಂಗ್ + 4 ಮಹಡಿ (Stilt+4) ಹೊಂದಿರುವ ಮನೆಗಳಿಗೆ ಒಸಿ ವಿನಾಯಿತಿ ಸಿಗಲಿದೆ.
ಶೇಕಡಾ 20ರಷ್ಟು ಉಲ್ಲಂಘನೆಗೆ ಅವಕಾಶ:
ಮಂಜೂರಾದ ಕಟ್ಟಡ ನಕ್ಷೆಗಿಂತ (Building Plan Approval) ಶೇ. 20ರಷ್ಟು ಹೆಚ್ಚು ಕಡಿಮೆ (Deviation) ಉಲ್ಲಂಘನೆ ಆಗಿದ್ದರೂ ಸಹ ಕಾಯಂ ವಿದ್ಯುತ್ ಸಂಪರ್ಕಕ್ಕಾಗಿ ಒಸಿ ಕೇಳುವಂತಿಲ್ಲ.
ಅರ್ಹತೆಯ ಮಾನದಂಡ: ಮೇ 31, 2026ರ ಒಳಗೆ ನಿರ್ಮಾಣ ಪೂರ್ಣಗೊಂಡಿರುವ ಅಥವಾ ವಿದ್ಯುತ್ ಸಂಪರ್ಕಕ್ಕಾಗಿ ತಾತ್ಕಾಲಿಕ ಅರ್ಜಿ ಸಲ್ಲಿಸಿ ಕಾಯುತ್ತಿರುವ ಮನೆಗಳಿಗೆ ಈ ರಿಯಾಯಿತಿ ದೊರೆಯಲಿದೆ. ಬೆಸ್ಕಾಂ ಸೇರಿದಂತೆ ಇತರೆ ವಿದ್ಯುತ್ ಕಂಪನಿಗಳು ಸ್ಥಳ ಪರಿಶೀಲನೆ ನಡೆಸಿ ನೇರವಾಗಿ ಕಾಯಂ ಸಂಪರ್ಕ ನೀಡಲಿವೆ.
ವಾಣಿಜ್ಯ ಮತ್ತು ಕೈಗಾರಿಕೆಗಳಿಗೆ ಇಲ್ಲ ವಿನಾಯಿತಿ:
ಸರ್ಕಾರದ ಈ ಆದೇಶದಿಂದ ಕೈಗಾರಿಕೋದ್ಯಮಿಗಳು ಮತ್ತು ವಾಣಿಜ್ಯ ಸಂಕೀರ್ಣಗಳ ಮಾಲೀಕರಿಗೆ ನಿರಾಶೆಯಾಗಿದೆ. ಪಿಜಿ ಕಟ್ಟಡಗಳು, ಹೋಟೆಲ್‌ಗಳು, ವಾಣಿಜ್ಯ ಮಳಿಗೆಗಳು ಹಾಗೂ ಕೈಗಾರಿಕಾ ಶೆಡ್‌ಗಳು ಎಂದಿನಂತೆ ಕಡ್ಡಾಯವಾಗಿ ನಿಯಮಾನುಸಾರ 'ಒಸಿ' (Occupancy Certificate) ಪಡೆದುಕೊಳ್ಳಲೇಬೇಕು. ನಿಯಮ ಉಲ್ಲಂಘನೆ ಮಾಡಿರುವ ವಾಣಿಜ್ಯ ಸಂಸ್ಥೆಗಳಿಗೆ ಯಾವುದೇ ರೀತಿಯ ರಿಯಾಯಿತಿ ಸಿಗುವುದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಮುಖ್ಯಮಂತ್ರಿಗಳ ಹೇಳಿಕೆ:
"ಇದು ಸಾಮಾನ್ಯ ಹಾಗೂ ಮಧ್ಯಮ ವರ್ಗದ ಕುಟುಂಬಗಳ ಹಿತದೃಷ್ಟಿಯಿಂದ ಕೈಗೊಂಡಿರುವ ಮಹತ್ವದ ನಿರ್ಧಾರವಾಗಿದೆ. ಹಲವು ವರ್ಷಗಳಿಂದ ಒಸಿ ಸಿಗದೆ ದುಬಾರಿ ದರದಲ್ಲಿ ತಾತ್ಕಾಲಿಕ ವಿದ್ಯುತ್ ಪಡೆದು ಜನರು ಸಂಕಷ್ಟ ಎದುರಿಸುತ್ತಿದ್ದರು. ಈ ತೊಂದರೆಯನ್ನು ನಿವಾರಿಸಲು ನಮ್ಮ ಸರ್ಕಾರ ಈ ಐತಿಹಾಸಿಕ ತೀರ್ಮಾನ ಕೈಗೊಂಡಿದೆ."
ಇದೇ ಮಾದರಿಯ ತೀರ್ಮಾನವನ್ನು ವಾಣಿಜ್ಯ ಮತ್ತು ಕೈಗಾರಿಕೆಗಳಿಗೂ ಕನಿಷ್ಠ 2400 ಅಡಿ ತನಕ ವಿನಾಯಿತಿ ನೀಡಬೇಕೆನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.
“ಸಣ್ಣಪುಟ್ಟ ವಾಣಿಜ್ಯದಾರರು, ಕೈಗಾರಿಕೋದ್ಯಮಿಗಳು ನಿತ್ಯ ವಿದ್ಯುತ್ ಸಂಪರ್ಕಕ್ಕಾಗಿ ಕಚೇರಿಗೆ ಅಲೆಯುತ್ತಿದ್ದಾರೆ. ಆದರೆ ಒಸಿ ಇಲ್ಲದೆ ಸಂಪರ್ಕ ಕಲ್ಪಿಸಲು ಸಾಧ್ಯವಿಲ್ಲ. ಮನೆಗಳಿಗೆ ನೀಡಿದ ವಿನಾಯಿತಿಯನ್ನು ವಾಣಿಜ್ಯ ಮತ್ತು ಕೈಗಾರಿಕೆಗಳ ಕಟ್ಟಡಗಳಿಗೂ ನೀಡುವುದು ತುರ್ತು ಅಗತ್ಯವಾಗಿದೆ”.
ಹೆಚ್.ಪೀರ್ ಸಾಬ್, ಎಇಇ, ಬೆಸ್ಕಾಂ, ಹಿರಿಯೂರು.



