ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜಧಾನಿಯ ರಾಜರಾಜೇಶ್ವರಿ ನಗರದಲ್ಲಿ (ಆರ್.ಆರ್ ನಗರ) ತಡರಾತ್ರಿ ಸಂಭವಿಸಿದ ಘಟನೆಯೊಂದರಲ್ಲಿ, ಸ್ಯಾಂಡಲ್ವುಡ್ ನಟಿ ಕೃಷಿ ತಾಪಂಡ ಅವರು ವಾಸವಿರುವ ಅಪಾರ್ಟ್ಮೆಂಟ್ನಲ್ಲಿ ಅವರ ಆಪ್ತ ಗೆಳೆಯ ಹಾಗೂ ಉದ್ಯಮಿ ವೈಶಾಕ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಘಟನೆ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದ್ದು, ಸದ್ಯ ವೈಶಾಕ್ ಪತ್ನಿ ಮೇಘನಾ ಅವರು ನಟಿ ಕೃಷಿ ತಾಪಂಡ ವಿರುದ್ಧ ಪೊಲೀಸರಿಗೆ ಗಂಭೀರ ದೂರು ನೀಡಿದ್ದಾರೆ.
ಕೃಷಿ ಬೆಡ್ ರೂಮ್ನಲ್ಲೇ ಆತ್ಮಹತ್ಯೆ: ಸಾಯುವ ಮುನ್ನ ಮೆಸೇಜ್!
ಉದ್ಯಮಿ ವೈಶಾಕ್ ಅವರು ಆರ್.ಆರ್. ನಗರದ 'ಎಲಿಗೇಟ್ ಅಪಾರ್ಟ್ಮೆಂಟ್'ನ 403ನೇ ನಂಬರಿನ ಫ್ಲಾಟ್ನಲ್ಲಿ ವಾಸವಿದ್ದ ನಟಿ ಕೃಷಿ ತಾಪಂಡ ಅವರ ಬೆಡ್ ರೂಮ್ನಲ್ಲೇ ಫ್ಯಾನಿಗೆ ನೇಣು ಹಾಕಿಕೊಂಡಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ವೈಶಾಕ್ ಅವರು ನಟಿ ಕೃಷಿಗೆ "ನಾನು ಸಾಯುತ್ತಿದ್ದೇನೆ" ಎಂದು ಮೆಸೇಜ್ ಕಳುಹಿಸಿದ್ದರು ಎನ್ನಲಾಗಿದೆ.
ವಿಷಯ ತಿಳಿದು ಪೊಲೀಸರು ಹಾಗೂ ಕುಟುಂಬಸ್ಥರು ಸ್ಥಳಕ್ಕೆ ಧಾವಿಸಿ ನೋಡಿದಾಗ, ಬೆಡ್ರೂಮ್ನ ಫ್ಯಾನಿಗೆ ನೇಣು ಬಿಗಿದ ಸ್ಥಿತಿಯಲ್ಲಿ ವೈಶಾಕ್ ಅವರ ಮೃತದೇಹ ಪತ್ತೆಯಾಗಿದೆ.
ದೂರಿನಲ್ಲಿ ಪತ್ನಿ ಉಲ್ಲೇಖಿಸಿದ 'ಅಕ್ರಮ ಸಂಬಂಧ'ದ ವಿವರ:
ಪತಿಯ ಮರಣದ ಸುದ್ದಿ ತಿಳಿಯುತ್ತಿದ್ದಂತೆ ಆಘಾತಕ್ಕೊಳಗಾದ ಪತ್ನಿ ಮೇಘನಾ ಅವರು ಆರ್.ಆರ್ ನಗರ ಪೊಲೀಸ್ ಠಾಣೆಗೆ ಅಧಿಕೃತ ದೂರು ನೀಡಿದ್ದಾರೆ. ದೂರಿನಲ್ಲಿ ಅವರು ಹಲವು ಸ್ಪೋಟಕ ಮಾಹಿತಿಗಳನ್ನು ಬಿಚ್ಚಿಟ್ಟಿದ್ದಾರೆ.
ಅಕ್ರಮ ಸಂಬಂಧದ ಆರೋಪ: ಪತಿ ವೈಶಾಕ್ ಹಾಗೂ ನಟಿ ಕೃಷಿ ತಾಪಂಡ ನಡುವೆ ಅಕ್ರಮ ಸಂಬಂಧವಿತ್ತು. ಇದೇ ಕಾರಣಕ್ಕೆ ನಮ್ಮಿಬ್ಬರ ಮಧ್ಯೆ ನಿರಂತರವಾಗಿ ಜಗಳ ಹಾಗೂ ವಿರಸ ಉಂಟಾಗುತ್ತಿತ್ತು.
ಮನೆಯಿಂದ ದೂರವಿದ್ದ ಪತಿ: ಪತ್ನಿಯೊಂದಿಗೆ ಜಗಳವಾದಾಗಲೆಲ್ಲ ವೈಶಾಕ್ ಅವರು ನಟಿ ಕೃಷಿ ತಾಪಂಡ ಅವರ ಮನೆಗೆ ಬಂದು ವಾಸಿಸುತ್ತಿದ್ದರು. ಕಳೆದ ರಾತ್ರಿ ಕೂಡ ಇದೇ ರೀತಿ ಜಗಳ ಮಾಡಿಕೊಂಡು ಕೃಷಿ ಮನೆಗೆ ಬಂದಿದ್ದರು.
ಕುಟುಂಬದ ಕಡೆಗಣನೆ: ವೈಶಾಕ್ಅವರಿಗೆ 15 ವರ್ಷಗಳ ಹಿಂದೆಯೇ ಮದುವೆಯಾಗಿದ್ದು 14 ವರ್ಷದ ಮಗನಿದ್ದಾನೆ. ಇತ್ತೀಚಿನ ದಿನಗಳಲ್ಲಿ ಅವರು ಕೇವಲ ಮೆಸೇಜ್ ಮೂಲಕ ಮಗನ ಯೋಗಕ್ಷೇಮ ವಿಚಾರಿಸುತ್ತಿದ್ದರೇ ವಿನಃ, ಪತ್ನಿಯ ಬಗ್ಗೆ ಯಾವುದೇ ಕಾಳಜಿ ವಹಿಸುತ್ತಿರಲಿಲ್ಲ.
ಹಳೇ ಕೇಸ್ ಮತ್ತು ಜಗಳದ ಹಿನ್ನೆಲೆ:
ಮೃತ ವೈಶಾಕ್ ಅವರು ಕಾರು ಆಟೋಮೊಬೈಲ್ ಹಾಗೂ ಗ್ಯಾರೇಜ್ ಉದ್ಯಮ ನಡೆಸುತ್ತಿದ್ದರು. ಈ ಹಿಂದೆ ನಟಿ ಕೃಷಿ ತಾಪಂಡ ಅವರ ಮಾಜಿ ಬಾಯ್ಫ್ರೆಂಡ್ ಹಾಗೂ ಎವಿಆರ್ ಗ್ರೂಪ್ ಮಾಲೀಕ ಅರವಿಂದ್ ರೆಡ್ಡಿಗೆ ಬೆದರಿಕೆ ಹಾಕಿದ ಆರೋಪದ ಮೇಲೆ ವೈಶಾಕ್ ಬಂಧನಕ್ಕೊಳಗಾಗಿದ್ದರು. ಈ ಜೈಲು ಪ್ರಕರಣದ ಬಳಿಕ ವೈಶಾಕ್ ಮತ್ತು ಅವರ ಪತ್ನಿ ಮೇಘನಾ ನಡುವೆ ಗಲಾಟೆ ತಾರಕಕ್ಕೇರಿತ್ತು ಎಂದು ಹೇಳಲಾಗಿದೆ.
ಪೊಲೀಸ್ ತನಿಖೆ ಚುರುಕು: ಸದ್ಯ ಪತ್ನಿ ಮೇಘನಾ ನೀಡಿದ ಲಿಖಿತ ದೂರಿನ ಆಧಾರದ ಮೇಲೆ ಆರ್.ಆರ್ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ನಟಿ ಕೃಷಿ ತಾಪಂಡ ಅವರ ಫ್ಲಾಟ್ನಲ್ಲಿ ಉದ್ಯಮಿ ಆತ್ಮಹತ್ಯೆ ಮಾಡಿಕೊಳ್ಳಲು ನಿಜವಾದ ಕಾರಣವೇನು? ಇದರ ಹಿಂದೆ ಬೇರೆನಾದರೂ ಪ್ರಚೋದನೆ ಇದೆಯೇ? ಎಂಬ ಕೋನದಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.




