ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸಚಿವ ಸಂಪುಟ ವಿಸ್ತರಣೆಯಾಗುತ್ತಿದ್ದಂತೆ ಕಾಂಗ್ರೆಸ್‌ಪಕ್ಷದಲ್ಲಿ ಆಂತರಿಕ ಬಂಡಾಯ ತೀವ್ರಗೊಂಡಿದೆ. ನೂತನ 20 ಸಚಿವರ ಪಟ್ಟಿ ಪ್ರಕಟಗೊಂಡ ಬೆನ್ನಲ್ಲೇ ಹಿರಿಯ ನಾಯಕರು ಹಾಗೂ ವಿವಿಧ ಸಮುದಾಯಗಳ ನಾಯಕರಲ್ಲಿ ತೀವ್ರ ಅಸಮಾಧಾನ ಸ್ಫೋಟಗೊಂಡಿದೆ.
'ಜಯಚಂದ್ರ ಅವರಿಗೆ ಸಚಿವ ಸ್ಥಾನ ತಪ್ಪಿದ್ದಕ್ಕೆ ಕುಂಚಿಟಿಗ ಸಮಾಜದ ಆಕ್ರೋಶ':
ಕುಂಚಿಟಿಗ ಜನಾಂಗದ ಏಕೈಕ ಶಾಸಕರಾದ ಹಿರಿಯ ನಾಯಕ ಟಿ.ಬಿ. ಜಯಚಂದ್ರ ಅವರಿಗೆ ಸಚಿವ ಸ್ಥಾನ ನೀಡಿಲ್ಲ ಎಂದು ಕುಂಚಿಟಿಗ ಸಮಾಜ ಕಾಂಗ್ರೆಸ್ ಹೈಕಮಾಂಡ್ ಹಾಗೂ ಸಿಎಂ ಡಿ.ಕೆ. ಶಿವಕುಮಾರ್ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದೆ.
"ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸಮಾಜವು ತಕ್ಕ ಪಾಠ ಕಲಿಸಲಿದೆ," ಎಂದು ಚಿತ್ರದುರ್ಗ ಜಿಲ್ಲಾ ಕುಂಚಿಟಿಗ ಸಂಘದ ಅಧ್ಯಕ್ಷ ಆರ್. ಚಂದ್ರಯ್ಯ ಹಾಗೂ ಗೌರವಾಧ್ಯಕ್ಷ ಡಾ. ಎಂ.ಜಿ. ಗೋವಿಂದಯ್ಯ ತೀವ್ರ ಎಚ್ಚರಿಕೆ ನೀಡಿದ್ದಾರೆ.
ಅಷ್ಟೇ ಅಲ್ಲದೆ, ಶಾಸಕ ಸ್ಥಾನ ಹಾಗೂ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ತಕ್ಷಣವೇ ರಾಜೀನಾಮೆ ನೀಡಿ ಹೊರಬರುವಂತೆ ಅವರು ಟಿ.ಬಿ. ಜಯಚಂದ್ರ ಅವರನ್ನು ಆಗ್ರಹಿಸಿದ್ದಾರೆ.
ಜಯಚಂದ್ರ ರಾಜೀನಾಮೆ?
ಹೈಕಮಾಂಡ್ ನಡೆಯಿಂದ ತೀವ್ರ ನಿರಾಶೆಗೊಂಡಿರುವ ಶಾಸಕ ಟಿ.ಬಿ. ಜಯಚಂದ್ರ ಅವರು ಸಹ ಕಾಂಗ್ರೆಸ್ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ ಎನ್ನಲಾಗಿದೆ.
ಬಂಡಾಯದ ಬೇಗುದಿಯಲ್ಲಿ ಕಾಂಗ್ರೆಸ್:
ಇನ್ನೊಂದೆಡೆ, ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಅಸಮಾಧಾನಗೊಂಡಿರುವ ಇಂಡಿ ಕ್ಷೇತ್ರದ ಶಾಸಕ ಯಶವಂತರಾಯಗೌಡ ಪಾಟೀಲ್ ಅವರು ಈಗಾಗಲೇ ಶಾಸಕ ಸ್ಥಾನ ಹಾಗೂ ನಿಗಮ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ.
ಒಟ್ಟಾರೆಯಾಗಿ, ಈ ಬಾರಿಯ ಸಂಪುಟ ವಿಸ್ತರಣೆಯು ಕಾಂಗ್ರೆಸ್ ಪಕ್ಷದಲ್ಲಿ ದೊಡ್ಡ ಮಟ್ಟದ ರಾಜಕೀಯ ಧ್ರುವೀಕರಣ ಹಾಗೂ ಬಂಡಾಯದ ಬಿರುಗಾಳಿಯನ್ನೇ ಎಬ್ಬಿಸಿದೆ.



